ADVERTISEMENT

ಕಾಳಗಿ: ಮೆಣಸಿನಕಾಯಿ ಈಗ ಬಲು 'ಸಿಹಿ'

ಕಾಳಗಿಯ ರೈತ ದತ್ತಾತ್ರೇಯ ಮುಕರಂಬಿ ಇಂಗಿತ

ಗುಂಡಪ್ಪ ಕರೆಮನೋರ
Published 7 ಡಿಸೆಂಬರ್ 2019, 19:30 IST
Last Updated 7 ಡಿಸೆಂಬರ್ 2019, 19:30 IST
ಕಾಳಗಿ ಪಟ್ಟಣದ ಯುವ ರೈತ ದತ್ತಾತ್ರೇಯ ಮುಕರಂಬಿ
ಕಾಳಗಿ ಪಟ್ಟಣದ ಯುವ ರೈತ ದತ್ತಾತ್ರೇಯ ಮುಕರಂಬಿ   

ಕಾಳಗಿ: ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಹೊಂಗನಸು ಹೊತ್ತ ಯುವಕ ಛಾಯಾಗ್ರಾಹಕ ವೃತ್ತಿ ತೊರೆದು ಕಳೆದ 9 ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡು ಇಂದು ಪ್ರಗತಿಪರ ರೈತರಾಗಿ ಯುವಕರಿಗೆ ಮಾದರಿಯಾಗಿದ್ದಾರೆ.

ತಮ್ಮ ಜಮೀನಿನ ಎರಡು ಎಕರೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ ಬೆಳೆದು ಉತ್ತಮ ಲಾಭ ಗಳಿಸುತ್ತಿದ್ದಾರೆ. ಒಂದು ಮೆಣಸಿನ ಅಗಿಗೆ ₹4ರಂತೆ ಒಟ್ಟು 6,500 ಅಗಿಗಳನ್ನು ಶಹಾಪುರದಿಂದ ಖರೀದಿಸಿ ಜಮೀನಲ್ಲಿ ಹಚ್ಚಿದ್ದಾರೆ. ಈ ಎರಡುವರೆ ತಿಂಗಳ ಬೆಳೆಯಲ್ಲಿ ಒಂದೇ ವಾರದಲ್ಲಿ 40 ಕ್ವಿಂ ಟಲ್ ಹಸಿ ಮೆಣಸಿನಕಾಯಿ ತೆಗೆದು ಮಾರಾಟ ಮಾಡಿದ್ದಾರೆ.

‘ಒಂದು ಗಿಡದಲ್ಲಿ ಕನಿಷ್ಠ ಒಂದು ಕೆ.ಜಿ. ಮೆಣಸಿನಕಾಯಿ ಫಲ ತುಂಬಿದೆ. ತುಂಬಾ ಖಾರವಾಗಿರುವ ಈ ಮೆಣಸಿನಕಾಯಿಗೆ ಪ್ರತಿ ಕ್ವಿಂಟಲ್‌ಗೆ ₹600ರಿಂದ ₹800 ಬೆಲೆ ದೊರೆತಿದೆ’ ಎನ್ನುತ್ತಾರೆ ಅವರು.

ADVERTISEMENT

‘6 ತಿಂಗಳ ಬೆಳೆಯಾಗಿರುವ ಈ ತಳಿಯಲ್ಲಿ ಎರಡು ಸಲ ಕಾಯಿ ಕಡಿಯಬೇಕು. ಈಗಾಗಲೇ ಒಂದು ಸಲ ಹಸಿ ಕಾಯಿಗಳನ್ನೇ ಕಡಿದಿದ್ದೇವೆ. ಆದರೆ, ನಾವು ಅಂದುಕೊಂಡಷ್ಟು ಬೆಲೆ ಸಿಕ್ಕಿಲ್ಲ, ಆದರೂ ಈ ಬೆಳೆ ಬಗ್ಗೆ ಬೇಸರ ಏನಿಲ್ಲ’ ಎಂದುದತ್ತಾತ್ರೇಯ ಹೇಳಿದರು.

‘ತಳಿಯ ಮುಖ್ಯ ಉದ್ದೇಶದಂತೆ ಈಗ ಹಸಿ ಕಾಯಿ ಕಡಿಯುವುದನ್ನು ನಿಲ್ಲಿಸಿ, ಮೆಣಸಿನಕಾಯಿ ಗಿಡದಲ್ಲೇ ಹಣ್ಣಾಗಲು ಎದುರು ನೋಡುತ್ತಿದ್ದೇವೆ. ಹಣ್ಣಾಗಿ ಉದುರಿ ಕೆಳಗೆ ಬೀಳುವ ಕಾಯಿಗಳನ್ನು ಆರಿಸಿ ಒಂದೇ ಕಡೆ ಗುಡ್ಡೆಹಾಕಿ ನಂತರ ಚೆನ್ನಾಗಿ ಒಣಗಿಸಲಾಗುತ್ತದೆ. ಮುಂದೆ ಮಾರುಕಟ್ಟೆಗೆ ಸಾಗಿಸಿ ಒಳ್ಳೆಯ ಆದಾಯ ಪಡೆಯುವ ನಿರೀಕ್ಷೆಯಿದೆ’ ಎಂದು ತಿಳಿಸಿದರು.

ಯುವ ರೈತ ಸಮಗ್ರ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಮೆಣಸಿನಕಾಯಿ ಜೊತೆಗೆ ಎರಡು ಎಕರೆ ಹೊಲದಲ್ಲಿ ಈರುಳ್ಳಿ, 15 ಎಕರೆ ಜಮೀನನಲ್ಲಿ ತೊಗರಿ ಕೂಡಾ ಬೆಳೆಯುತ್ತಿದ್ದಾರೆ.ಈ ಹಿಂದೆ ನಾಲ್ಕು ಎಕರೆ ಜಮೀನಿನೊಳಗೆ 25 ಕ್ವಿಂಟಾಲ್ ಅಜ್ವಾನ್ ಬೆಳೆದು ಹೆಸರು ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.