ADVERTISEMENT

ಯುನೈಟೆಡ್‌ ಆಸ್ಪತ್ರೆಯಲ್ಲಿ ಕೊರೊನಾ ಪತ್ತೆ ಲ್ಯಾಬ್‌ ಆರಂಭ

ಬೆಂಗಳೂರು ಹೊರತುಪಡಿಸಿದರೆ ರಾಜ್ಯದ ಮೊದಲ ಖಾಸಗಿ ಆಸ್ಪತ್ರೆಯ ಪ್ರಯೋಗಾಲಯ

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 15:27 IST
Last Updated 8 ಜೂನ್ 2020, 15:27 IST
ಡಾ.ವಿಕ್ರಮ ಸಿದ್ದಾರೆಡ್ಡಿ
ಡಾ.ವಿಕ್ರಮ ಸಿದ್ದಾರೆಡ್ಡಿ   

ಕಲಬುರ್ಗಿ: ‘ಇಲ್ಲಿನ ಯುನೈಟೆಡ್‌ ಆಸ್ಪತ್ರೆಯಲ್ಲಿ ಕೊರೊನಾ ವೈರಾಣು ಪತ್ತೆ ಹೆಚ್ಚುವ ಪ್ರಯೋಗಾಲಯ ಆರಂಭಿಸಲಾಗಿದೆ. ಬೆಂಗಳೂರನ್ನು ಹೊರತುಪಡಿಸಿದರೆ, ಖಾಸಗಿ ಆಸ್ಪತ್ರೆಯಲ್ಲಿ ತೆರೆದಿರುವ ರಾಜ್ಯದ ಮೊದಲ ಲ್ಯಾಬ್‌ ಇದು’ ಎಂದು ಆಸ್ಪತ್ರೆಯ ನಿರ್ಮಾತೃ ಡಾ.ವಿಕ್ರಮ ಸಿದ್ದಾರೆಡ್ಡಿ ತಿಳಿಸಿದರು.

‘ಕೋವಿಡ್‌ ಸೋಂಕು ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಕೈ ಜೋಡಿಸಲು ಇದೊಂದು ಅವಕಾಶ. ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌)ಯಿಂದ ದೃಢೀಕರಿಸಲಾಗಿದೆ. ಸೋಂಕಿತರನ್ನು ಪತ್ತೆ ಹೆಚ್ಚುವ ‘ಆರ್‌ಟಿಪಿಸಿಆರ್‌’ ಟೆಸ್ಟಿಂಗ್‌ ಈಗಾಗಲೇ ಆರಂಭವಾಗಿದೆ’ ಎಂದು ಅವರು ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಈ ಪ್ರಯೋಗಾಲಯಕ್ಕೆ ಬೇಕಾದ ತಾಂತ್ರಿಕ ಸಲಕರಣೆಗಳನ್ನು ಪ್ರಯೋಗಾಲಯದಿಂದ ತರಿಸಿಕೊಳ್ಳಲಾಗಿದೆ. ಅಗತ್ಯ ತಜ್ಞರ ತಂಡವನ್ನೂ ಹೈದರಾಬಾದ್‌, ಬೆಂಗಳೂರು, ವಿಶಾಖಪಟ್ಟಣಂನಿಂದ ಕರೆಸಿಕೊಳ್ಳಲಾಗಿದೆ. ಆಸ್ಪತ್ರೆಯ ತಜ್ಞರು ಅವರಿಂದ ಮಾರ್ಗದರ್ಶನ ಪಡೆದಿದ್ದಾರೆ’ ಎಂದರು.

ADVERTISEMENT

‘ಆರಂಭದ ಟೆಸ್ಟಿಂಗ್‌ ಸ್ಯಾಂಪಲ್ಸ್‌ಗಳನ್ನು ವಿವಿಧ ಲ್ಯಾಬ್‌ಗಳಿಗೆ ಕಳುಹಿಸಿ ಫಲಿತಾಂಶ ಖಚಿತ ಮಾಡಿಕೊಳ್ಳಲಾಗಿದೆ. ನಮ್ಮಲ್ಲಿನ ಫಲಿತಾಂಶ ನೂರರಷ್ಟು ನಿಖರವಾಗಿದೆ ಎಂದು ಐಸಿಎಂಆರ್‌ ಹಾಗೂ ಎನ್‌ಎಬಿಎಲ್‌ಗಳು ದೃಢಪಡಿಸಿವೆ. ಅಮೆರಿಕದ ಫುಡ್ ಅಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಷನ್‌ (ಎಫ್‌ಡಿಎ)ನಿಂದ ಇದರ ಟೆಸ್ಟಿಂಗ್‌ ಕಿಟ್ಸ್‌ಗಳನ್ನು ಆಮದು ಮಾಡಿಕೊಳ್ಳಲಾಗಿದೆ’ ಎಂದೂ ಅವರು ವಿವರಿಸಿದರು.

‘ಖಾಸಗಿ ಪ್ರಯೋಗಾಲಯ ಎಂದಾಕ್ಷಣ ಯಾರೆಲ್ಲರೂ ಬಂದು ಗಂಟಲು ಮಾದರಿ ತಪಾಸಣೆ ಮಾಡಿಸಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರದ ಮಾರ್ಗಸೂಚಿ ಅನ್ವಯ ಯಾರಿಗೆ ಅಗತ್ಯವಿದೆಯೋ, ಯಾರಿಗೆ ಸೋಂಕು ಲಕ್ಷಣಗಳು ಇವೆಯೋ ಅವರ ಮಾದರಿ ಮಾತ್ರ ತಪಾಸಣೆ ಮಾಡಲಾಗುತ್ತದೆ. ಆದರೆ, ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ದಾಖಲಾಗುವವರಿಗೆ ತಪಾಸಣೆ ಕಡ್ಡಾಯವಾಗಿದೆ’ ಎಂದರು.

ಸರ್ಕಾರದ ದರ ಆಕರ: ಪ್ರತಿ ಮಾದರಿಯ ತ‍ಪಾಸಣೆಗೂ ಕೇಂದ್ರ ಸರ್ಕಾರ ₹ 4,500 ದರ ನಿಗದಿ ಮಾಡಿದೆ. ನಾವೂ ಅದನ್ನೇ ಪಡೆಯುತ್ತೇವೆ. ಆದರೆ, ರಾಜ್ಯ ಸರ್ಕಾರ ತಪಾಸಣಾ ದರವನ್ನು ₹ 2,250 ಮಾಡಿದೆ. ಅಂದರೆ; ಜಿಲ್ಲಾ ಆರೋಗ್ಯ ಇಲಾಖೆಯಿಂದ ತಪಾಸಣೆಗೆ ಮಾದರಿಗಳನ್ನು ನಮಗೆ ಕಳುಹಿಸಿಕೊಟ್ಟರೆ ಅದಕ್ಕೆ ₹ 2,250 ದರ ಮಾತ್ರ ಪಡೆಯುತ್ತೇವೆ. ಬೇರೆ ಯಾವುದೇ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಯಲ್ಲಿ ಶಂಕಿತರು ಕಂಡುಬಂದರೂ ಅಲ್ಲಿಂದ ಮಾದರಿಗಳನ್ನು ಸಂಗ್ರಹಿಸಿ ಫಲಿತಾಂಶ ನೀಡಲಾಗುವುದು’ ಎಂದರು.

‘ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರನ್ನು ದಾಖಲು ಮಾಡಿಕೊಳ್ಳುವ ಮುನ್ನ ಸೋಮವಾರ ಗಂಟಲು ಮಾದರಿ ತಪಾಸಣೆ ಮಾಡಲಾಯಿತು. ಅವರಿಗೆ ಕೋವಿಡ್‌ ತಗುಲಿರುವುದು ದೃಢಪಟ್ಟಿದೆ. ನಮ್ಮ ಲ್ಯಾಬ್‌ನಲ್ಲಿ ಕಂಡುಬಂದ ಮೊದಲ ಪಾಸಿಟಿವ್‌ ಪ್ರಕರಣವಿದು. ಹೀಗೆ ಸೋಂಕಿತರು ಕಂಡುಬಂದರೆ ಅವರನ್ನು ಜಿಲ್ಲಾ ಆರೋಗ್ಯ ಇಲಾಖೆಯ ಗಮನಕ್ಕೆ ತಂದು, ಸರ್ಕಾರದ ಕೋವಿಡ್ ಆಸ್ಪತ್ರೆಗಳಿಗೆ ಕಳುಹಿಸಲಾಗುವುದು’ ಎಂದೂ ಡಾ.ವಿಕ್ರಮ ವಿವರಿಸಿದರು.

‘ಆಸ್ಪತ್ರೆಯ ಪ್ರಯೋಗಾಲಯದಲ್ಲಿ ಒಂದು ಬಾರಿಗೆ 48 ಮಾದರಿಗಳನ್ನು ತಪಾಸಣೆ ಮಾಡಬಹುದು. ಪ್ರತಿ ತಪಾಸಣೆಯ ಫಲಿತಾಂಶ ಬರಲು 4 ತಾಸು ಕಾಯಬೇಕು. ದಿನಕ್ಕೆ ಗರಿಷ್ಠ 200 ಮಾದರಿಗಳನ್ನು ತಪಾಸಣೆ ಮಾಡಬಲ್ಲ ಸಾಮರ್ಥ್ಯ ಯುನೈಟೆಡ್‌ನ ಲ್ಯಾಬ್‌ಗೆ ಇದೆ’ ಎಂದು ಹೇಳಿದರು.

ಆಸ್ಪತ್ರೆಯ ಡಯಾಗ್ನಾಸ್ಟಿಕ್‌ ವಿಭಾಗದ ಮುಖ್ಯಸ್ಥೆ ಡಾ.ಆಯಿಷಾ ಫಾತಿಮಾ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.