ADVERTISEMENT

ಕಲಬುರಗಿ: ಹಸಿರಿಗೂ ಸೈ, ಸ್ಮಾರ್ಟ್ ಕ್ಲಾಸ್‌ಗೂ ಜೈ

ಆಳಂದ ತಾಲ್ಲೂಕಿನ ಗುಂಜ ಬಬಲಾದ ಗ್ರಾಮದ ಸರ್ಕಾರಿ ಶಾಲೆ

ಮನೋಜ ಕುಮಾರ್ ಗುದ್ದಿ
Published 11 ಮೇ 2022, 19:30 IST
Last Updated 11 ಮೇ 2022, 19:30 IST
ಆಳಂದ ತಾಲ್ಲೂಕಿನ ಗುಂಜ ಬಬಲಾದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾದ ಕೈತೋಟದಲ್ಲಿ ಶ್ರಮದಾನ ಮಾಡುತ್ತಿರುವ ವಿದ್ಯಾರ್ಥಿಗಳು
ಆಳಂದ ತಾಲ್ಲೂಕಿನ ಗುಂಜ ಬಬಲಾದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾದ ಕೈತೋಟದಲ್ಲಿ ಶ್ರಮದಾನ ಮಾಡುತ್ತಿರುವ ವಿದ್ಯಾರ್ಥಿಗಳು   

ಕಲಬುರಗಿ: ಜಿಲ್ಲಾ ಕೇಂದ್ರದಿಂದ 40 ಕಿ.ಮೀ. ದೂರದಲ್ಲಿರುವ ಆಳಂದ ತಾಲ್ಲೂಕಿನ ಗುಂಜ ಬಬಲಾದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಹಸಿರು ವಾತಾವರಣ ಮತ್ತು ಸ್ಮಾರ್ಟ್‌ ಕ್ಲಾಸ್‌ ಮೂಲಕ ಆಕರ್ಷಿಸುತ್ತಿದೆ.

ವರ್ಷದಿಂದ ಪಾಳು ಬಿದ್ದ ಸ್ಥಿತಿಯಲ್ಲಿದ್ದ ಶಾಲೆಯು, ಮುಖ್ಯ ಶಿಕ್ಷಕ, ಅದೇ ಗ್ರಾಮದ ನಿಂಗಪ್ಪ ಮಂಗೊಂಡಿ, ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಿಪುತ್ರ ಯಂಕಂಚಿ ಹಾಗೂ ಗ್ರಾಮದ ಯುವಜನರ ಸಹಕಾರದಿಂದ ಹೊಸ ರೂಪ ಪಡೆದಿದೆ. ಎಲ್ಲೆಡೆ ಹಸಿರು ವಾತಾವರಣ ಕಂಗೊಳಿಸುತ್ತಿದ್ದು, ತರಹೇವಾರಿ ಹೂಗಳು ಮುದ ನೀಡುತ್ತಿವೆ.

‘ಕೊರೊನಾ ಕಾರಣ ಎರಡು ವರ್ಷ ಶಾಲೆ ಚಟುವಟಿಕೆ ಬಂದ್ ಆಗಿತ್ತು. ಗ್ರಾಮ ಪಂಚಾಯಿತಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ನೆರವಿನಿಂದ ಶಾಲಾ ದುರಸ್ತಿ ಜೊತೆಗೆ ಕೈತೋಟ ನಿರ್ಮಿಸಲಾಯಿತು. ಬಂಡೆಗಳನ್ನು ಜೋಡಿಸಿ, ಮೈದಾನ ಸಮ ಮಾಡಲಾಯಿತು’ ಎಂದು ಮುಖ್ಯ ಶಿಕ್ಷಕ ನಿಂಗಪ್ಪ ಮಂಗೋಡಿ ತಿಳಿಸಿದರು.

ADVERTISEMENT

‘ತೋಟಗಾರಿಕೆ ಇಲಾಖೆ ನೆರವಿನಿಂದ ಕೈತೋಟ ನಿರ್ಮಿಸಲಾಯಿತು. ನಿತ್ಯ ಅಡುಗೆಗೆ ಬಳಸುವ ಟೊಮೆಟೊ, ಹಾಗ
ಲಕಾಯಿ, ಕೊತ್ತಂಬರಿ, ಪಾಲಕ್ ಸೊಪ್ಪು ಸೇರಿ ಹಲವು ಬಗೆಯ ತರಕಾರಿ ಬೆಳೆದೆವು. ಪ್ರತಿ ತಿಂಗಳು ₹ 12 ಸಾವಿರ ಉಳಿತಾಯ ಆಗುತ್ತದೆ’ ಎಂದು ವಿವರಿಸಿದರು.

‘ಕೊರೊನಾಗೂ ಮುಂಚೆ 175 ಇದ್ದ ಮಕ್ಕಳ ಸಂಖ್ಯೆ ಈಗ 206ಕ್ಕೆ ಏರಿಕೆಯಾಗಿದೆ. ಖಾಸಗಿ ಶಾಲೆಯ ಮಕ್ಕಳು ನಮ್ಮ ಶಾಲೆಯಲ್ಲಿ ಪ್ರವೇಶ ಪಡೆದಿದ್ದಾರೆ. ಸ್ಮಾರ್ಟ್‌ ಕ್ಲಾಸ್ ಕೊಠಡಿಯಲ್ಲಿ ಶಿಕ್ಷಕರು ಪಾಠ ಬೋಧಿಸುವ ಜೊತೆಗೆ ಬೃಹತ್ ಟಿವಿಯಲ್ಲಿ ಯೂಟ್ಯೂಬ್‌ ಮೂಲಕ ವಿಷಯ ಮನನ ಮಾಡಿಸುತ್ತಾರೆ. ಇದರ ಜವಾಬ್ದಾರಿ ಶಿಕ್ಷಕರಿಗೆ ವಹಿಸಲಾಗಿದೆ.

ಶಾಲಾ ಮಕ್ಕಳಿಗೆ ಸುಸಜ್ಜಿತ ಶೌಚಾ ಲಯ ವ್ಯವಸ್ಥೆಯಿದ್ದು, ನೀರು ಪೂರೈಕೆಗಾಗಿ ಗ್ರಾಮ ಪಂಚಾಯಿತಿಯಿಂದ ಸಂಪರ್ಕ ಪಡೆಯಲಾಗಿದೆ. ಶಾಲೆಯ ಬಳಕೆ, ಕೈತೋಟಕ್ಕೆ ಸಾಕಾಗುವಷ್ಟು ದೊಡ್ಡ ನೀರಿನ ಸಂಪ್ ಇದೆ. ಕೈತೋಟ ನೋಡಿಕೊಳ್ಳಲು ಪಂಚಾಯಿತಿಯಿಂದಲೇ ಒಬ್ಬರನ್ನು ನೇಮಿಸಲಾಗಿದೆ. ಕಾಂಪೌಂಡ್‌ ಕಟ್ಟಿಸಿರುವ ಕಾರಣ ದನ, ಕರುಗಳು ನುಗ್ಗಿ ಕೈತೋಟಕ್ಕೆ ಹಾನಿ ಮಾಡುವ ಸಾಧ್ಯತೆಯೂ ಕಡಿಮೆಯಿದೆ.

ವಲಸೆ ಹೋದ ಮಕ್ಕಳಿಗೂ ಕಲಿಕೆ

‘ಗುಂಜ ಬಬಲಾದನ ಕೆಲ ಪೋಷಕರು ತಮ್ಮ ಮಕ್ಕಳ ಸಮೇತ ಕೆಲಸ ಮಾಡಲು ಹರಿಹರದ ಇಟ್ಟಿಗೆ ಭಟ್ಟಿಗೆ ತೆರಳಿದರು. ಮಕ್ಕಳ ಶಿಕ್ಷಣ ನಿಲ್ಲದಿರಲಿಯೆಂದು ಹರಿಹರ ಸಮೀಪದ ಗ್ರಾಮವೊಂದರ ಶಾಲಾ ಮುಖ್ಯ ಶಿಕ್ಷಕರಿಗೆ ಕರೆ ಮಾಡಿ, ವಲಸೆ ಮಕ್ಕಳಿಗೆ ‍ಪ್ರವೇಶ ಕೊಡಿಸಿದೆವು’ ಮುಖ್ಯ ಶಿಕ್ಷಕ ನಿಂಗಪ್ಪ ಮಂಗೊಂಡಿ.

ಬೇಕಿದೆ ದಾನಿಗಳ ನೆರವು

ಸರ್ಕಾರಿ ಶಾಲೆ ಪುನರುಜ್ಜೀವನಗೊಳಿಸುವ ಶಿಕ್ಷಕರ ಕನಸಿಗೆ ದಾನಿಗಳ ನೆರವು ಬೇಕಿದೆ. ಶಾಲೆಯ ಕಟ್ಟಡ 15 ವರ್ಷ ಹಳೆಯದಾಗಿದ್ದರಿಂದ ಇಡೀ ಕಟ್ಟಡಕ್ಕೆ ಒಮ್ಮೆ ಆಯಿಲ್ ಪೇಂಟ್ ಮಾಡಿಸಬೇಕಿದೆ. ಗೋಡೆಗಳ ಮೇಲೆ ಮಕ್ಕಳ ಕಲಿಕೆಗೆ ಪೂರಕ ಬರಹ ಬರೆಸಬೇಕಿದೆ. ಕೆಲ ಗ್ರಾಮಸ್ಥರು ದೇಣಿಗೆ ನೀಡಿದ್ದು, ಶಾಸಕ ಬಸ ವರಾಜ ಮತ್ತಿಮೂಡ ಅವರನ್ನು ಸಂಪರ್ಕಿಸಲಾಗಿದೆ. ಆಸಕ್ತ ದಾನಿಗಳು ಸಂಪರ್ಕಿಸಬೇಕಾದನಿಂಗಪ್ಪ ಮಂಗೋಡಿ ದೂರವಾಣಿ ಸಂಖ್ಯೆ: 97318 82935.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.