ADVERTISEMENT

ಕಲಬುರ್ಗಿ: ಭಾನುವಾರ ಲಾಕ್ ಡೌನ್; ಉತ್ತಮ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 10:30 IST
Last Updated 5 ಜುಲೈ 2020, 10:30 IST
ಕಲಬುರ್ಗಿಯಲ್ಲಿ ವ್ಯಾಪಾರಿಗಳು ಲಾಕ್‌‌ಡೌನ್ ದಿನ ಅಂಗಡಿ ಬಂದ್ ಮಾಡಿರುವುದು ಕಂಡು ಬಂತು
ಕಲಬುರ್ಗಿಯಲ್ಲಿ ವ್ಯಾಪಾರಿಗಳು ಲಾಕ್‌‌ಡೌನ್ ದಿನ ಅಂಗಡಿ ಬಂದ್ ಮಾಡಿರುವುದು ಕಂಡು ಬಂತು   

ಕಲಬುರ್ಗಿ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಭಾನುವಾರದ ಲಾಕ್ ಡೌನ್ ಗೆ ಉತ್ತಮ ಸ್ಪಂದನೆ ದೊರೆಯಿತು.ಔಷಧ, ಹಾಲು, ಹೂವು, ಪೆಟ್ರೋಲ್ ಬಂಕ್ ಹೊರತುಪಡಿಸಿ ಉಳಿದೆಲ್ಲ ವ್ಯಾಪಾರ ಸಂಪೂರ್ಣ ಬಂದ್ ಆಗಿತ್ತು.

ಅತ್ಯಂತ ಜನನಿಬಿಡ ಪ್ರದೇಶವಾದ ಇಲ್ಲಿನ 'ಸೂಪರ್ ಮಾರ್ಕೆಟ್'ನಲ್ಲಿ ಕೂಡ ವರ್ತಕರು ಸ್ವಯಂ ಪ್ರೇರಣೆಯಿಂದ ಮಳಿಗೆಗಳನ್ನು ಬಂದ್ ಮಾಡಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಕೆಲವು ಹೋಟೆಲ್ ಮಾಲೀಕರು ಬೆಳಿಗ್ಗೆ ಪಾರ್ಸೆಲ್ ನೀಡಲು ಆರಂಭಿಸಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಅದನ್ನು ಬಂದ್ ಮಾಡಿಸಿದರು.

ಬೆಳಿಗ್ಗೆ 6ರಿಂದಲೇ ಪೊಲೀಸರು ವಾಹನಗಳಲ್ಲಿ ಗಸ್ತು ಸುತ್ತಿ ಮನೆಯಿಂದ ಹೊರಬರದಂತೆ ಜನರಿಗೆ ಎಚ್ಚರಿಕೆ ನೀಡಿದರು. ಕೇಂದ್ರ ಬಸ್ ನಿಲ್ದಾಣ, ಎಸ್ ವಿ ಪಿ ವೃತ್ತ, ರಾಷ್ಟ್ರಪತಿ ಚೌಕ, ಜಗತ್ ಸರ್ಕಲ್ ಸೇರಿದಂತೆ ವಾಹನ ದಟ್ಟಣೆ ಇರುತ್ತಿದ್ದ ಸ್ಥಳಗಳು ಬಿಕೋ ಎನ್ನುತ್ತಿದ್ದವು.

ADVERTISEMENT

ಐತಿಹಾಸಿಕ ಶರಣಬಸವೇಶ್ವರ ದೇವಸ್ಥಾನ, ಖಾಜಾ ಬಂದಾ ನವಾಜ್ ದರ್ಗಾ, ರಾಮ ಮಂದಿರ ಸೇರಿದಂತೆ ಎಲ್ಲ ದೇವಸ್ಥಾನ ಹಾಗೂ ಮಸೀದಿಗಳು ಬಾಗಿಲು ಮುಚ್ಚಿದ್ದವು. ನಗರದ ಸೇಂಟ್ ಮೇರಿ ಚರ್ಚ್ ನಲ್ಲಿ ಕೂಡ ಭಾನುವಾರದ ಪ್ರಾರ್ಥನೆಗೆ ಜನ ಬರಲಿಲ್ಲ.

ಬೆಂಗಳೂರಿನಿಂದ ಶನಿವಾರ ರಾತ್ರಿ ಹೊರಟಿದ್ದ ಒಂದು ಎ.ಸಿ. ಸ್ಲೀಪರ್ ಬಸ್ ಭಾನುವಾರ ಬೆಳಿಗ್ಗೆ ಕಲಬುರ್ಗಿ ತಲುಪಿತು. ಇದರಲ್ಲಿ ಬಂದ 19 ಪ್ರಯಾಣಿಕರು ಬಸ್ ನಿಲ್ದಾಣದಿಂದ ಮನೆಗೆ ತೆರಳಲು ಪರದಾಡಬೇಕಾಯಿತು. ಉಳಿದಂತೆ, ಸಾರಿಗೆ ಸಂಸ್ಧೆ ಬಸ್, ಖಾಸಗಿ ಬಸ್, ಆಟೊ ಸಂಚಾರ ಕೂಡ ಸಂಪೂರ್ಣ ಬಂದ್ ಆಗಿತ್ತು. ಟಾಂಗಾ ಹಾಗೊ ಬೈಕ್ ಸವಾರರು ಅಲ್ಲಲ್ಲಿ ಓಡಾಡುತ್ತಿದ್ದುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.