ADVERTISEMENT

ಕಲಬುರ್ಗಿ: ತರಕಾರಿ ದರ ಮತ್ತೆ ಕುಸಿತ

ಮಳೆಯಿಂದಾಗಿ ಮಾರುಕಟ್ಟೆಗೆ ಬರುವ ತರಕಾರಿ ಪ್ರಮಾಣದಲ್ಲಿ ನಿತ್ಯವೂ ಏರಿಳಿಕೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 15:05 IST
Last Updated 18 ಜೂನ್ 2021, 15:05 IST
ಕಲಬುರ್ಗಿ ನಗರದ ಸೂಪರ್‌ ಮಾರ್ಕೆಟ್‌ನಲ್ಲಿ ಗ್ರಾಹಕರು ತರಕಾರಿ ಖರೀದಿಸುತ್ತಿರುವುದು ಶುಕ್ರವಾರ ಕಂಡುಬಂತು  ಪ್ರಜಾವಾಣಿ ಚಿತ್ರಗಳು: ‍ಪ್ರಶಾಂತ್ ಎಚ್‌.ಜಿ
ಕಲಬುರ್ಗಿ ನಗರದ ಸೂಪರ್‌ ಮಾರ್ಕೆಟ್‌ನಲ್ಲಿ ಗ್ರಾಹಕರು ತರಕಾರಿ ಖರೀದಿಸುತ್ತಿರುವುದು ಶುಕ್ರವಾರ ಕಂಡುಬಂತು  ಪ್ರಜಾವಾಣಿ ಚಿತ್ರಗಳು: ‍ಪ್ರಶಾಂತ್ ಎಚ್‌.ಜಿ   

ಕಲಬುರ್ಗಿ: ಕಳೆದ ವಾರ ದುಬಾರಿಯಾಗಿದ್ದ ತರಕಾರಿ ದರ ಈ ವಾರ ಮತ್ತೆ ಕುಸಿತ ಕಂಡಿದೆ. ಮಳೆಯ ಕಾರಣದಿಂದ ಮಹಾರಾಷ್ಟ್ರ ಹಾಗೂ ಜಿಲ್ಲೆಯ ಗ್ರಾಮೀಣ ಭಾಗದಿಂದ ಬರುವ ತರಕಾರಿ ಪ್ರಮಾಣದಲ್ಲಿ ಏರಿಳಿಕೆ ಆಗುತ್ತಿದೆ. ಹೀಗಾಗಿನಿತ್ಯವೂ ದರದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ.

ಕಳೆದ ವಾರ ₹ 40 ರಿಂದ ₹ 60ರ ಆಸುಪಾಸಿನಲ್ಲಿದ್ದ ಬಹುತೇಕ ತರಕಾರಿಗಳ ಬೆಲೆ ಈ ವಾರ ₹ 20 ರಿಂದ ₹ 40ಕ್ಕೆ ಇಳಿಕೆ ಕಂಡಿದೆ.

ಹೀರೇಕಾಯಿ, ಹಾಗಲಕಾಯಿ, ಗಜ್ಜರಿ ಬೆಲೆ ಏರಿಸಿಕೊಂಡು ₹ 50ಕ್ಕೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ. ಟೊಮೆಟೊ, ಈರುಳ್ಳಿ, ಆಲೂಗಡ್ಡೆ ದರದಲ್ಲಿ ಹೆಚ್ಚಿನ ಇಳಿಕೆ ಕಂಡಿದ್ದು ₹ 15ರಿಂದ ₹ 20ಕ್ಕೆ ಮಾರಾಟವಾಗುತ್ತಿವೆ. ಇನ್ನುಳಿದ ತರಕಾರಿಗಳ ದರದಲ್ಲೂ ₹ 5ರಿಂದ ₹ 10 ಇಳಿಕೆ ಕಂಡಿದೆ.

ADVERTISEMENT

ಹೂಕೋಸು ಕೆ.ಜಿ.ಗೆ ₹ 80, ಎಲೆಕೋಸು ₹ 40, ನುಗ್ಗೆಕಾಯಿ ಒಂದು ಬಂಡಲ್‌ಗೆ ₹ 10, ಕುಂಬಳಕಾಯಿ ₹ 10ಕ್ಕೆ ಒಂದರಂತೆ ಮಾರಾಟವಾಗುತ್ತಿವೆ. ಅವರೇಕಾಯಿ ಹಾಗೂ ಬೀನ್ಸ್‌ ದರ ಇಳಿಕೆ ಕಂಡಿದ್ದು ಕೆ.ಜಿ.ಗೆ ₹ 120 ಇದೆ. ಚವಳೆಕಾಯಿ ಕೆ.ಜಿ.ಗೆ ₹ 40, ಶುಂಠಿ ₹ 60, ಬೆಳ್ಳುಳ್ಳಿ ₹ 100, ಹುಣಸೆ ಕೆ.ಜಿ.ಗೆ ₹ 120ರಂತೆ ಮಾರಾಟವಾಗುತ್ತಿವೆ. ನಿಂಬೆ ಹಣ್ಣಿನ ಬೆಲೆ ತೀವ್ರ ಇಳಿಕೆ ಕಂಡಿದ್ದು ₹ 10ಕ್ಕೆ ₹ 15ರಿಂದ ₹ 20 ಮಾರಾಟ ಆಗುತ್ತಿವೆ. ₹ 60ಕ್ಕೆ ₹ 100 ಅಂಬಾಡಿ ಎಲೆ ಖರೀದಿಯಾಗುತ್ತಿವೆ.

ನಗರದ ವಿವಿಧೆಡೆ ನೇರಳೆ ಹಾಗೂ ಮಾವಿನ ಹಣ್ಣುಗಳ ಖರೀದಿ ಜೋರಾಗಿದೆ.

ಸೊಪ್ಪುಗಳ ದರ: ಕೊತ್ತಂಬರಿ, ಪುದೀನಾ, ಕರಿಬೇವು, ಈರುಳ್ಳಿ ಸೊಪ್ಪು, ಮೆಂತ್ಯೆ ₹ 10ಕ್ಕೆ ಒಂದು ಸಿವುಡು ಹಾಗೂ ಪಾಲಕ್ ಪಲ್ಯ, ಪುಂಡಿಪಲ್ಯ, ರಾಜಗಿರಿ ₹ 5ಕ್ಕೆ ಒಂದು ಸಿವುಡುಗಳನ್ನು ಮಾರಲಾಗುತ್ತಿದೆ.

ಅವಧಿ ವಿಸ್ತರಿಸಲು ಒತ್ತಾಯ: ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆವರೆಗೆ ವ್ಯಾಪಾರಕ್ಕೆ ಅವಕಾಶ ನೀಡಿರುವ ಸಮಯವನ್ನು ವಿಸ್ತರಿಸುವಂತೆ ವ್ಯಾಪಾರಿಗಳು ಒತ್ತಾಯಿಸಿದ್ದಾರೆ. ‘ಇಷ್ಟು ದಿನ ಉತ್ತಮ ವ್ಯಾಪಾರವಿಲ್ಲದೆ ನಷ್ಟ ಅನುಭವಿಸಿದ್ದೇವೆ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿವೆ. ಹೀಗಾಗಿ ಸಂಜೆ 6ರ ವರೆಗೆ ವ್ಯಾಪಾರಕ್ಕೆ ಅವಕಾಶ ನೀಡಬೇಕು’ ಎಂದು ಸೂಪರ್‌ ಮಾರ್ಕೆಟ್‌ನ ತರಕಾರಿ ವ್ಯಾಪಾರಸ್ಥರು ಆಗ್ರಹಿಸಿದರು.

‘ಬೆಳಿಗ್ಗೆ ಸೊಪ್ಪು, ತರಕಾರಿ ದರ ಹೆಚ್ಚಿರುತ್ತೆ. ಸಮಯ ಕಳೆದಂತೆ ಬೆಲೆ ಕಡಿಮೆಯಾಗುತ್ತೆ. ಉಳಿದ ತರಕಾರಿಯನ್ನು ಮನೆಗೆ ಒಯ್ಯಲು ಇಷ್ಟವಿಲ್ಲದೆ, ಕಡಿಮೆ ದರಕ್ಕೆ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತೆ. ಮಹಾರಾಷ್ಟ್ರದ ನಾಸಿಕ್‌ನಿಂದ ಬಂದ ಕೊತ್ತಂಬರಿ ಸಿವುಡಿಗೆ ನಿನ್ನೆ ₹ 20 ದರ ಇತ್ತು. ಇವತ್ತು ₹ 10ಕ್ಕೆ ಮಾರಾಟ ಮಾಡಿದರೂ ಖಾಲಿಯಾಗುತ್ತಿಲ್ಲ. ಮಧ್ಯಾಹ್ನ 2ರ ನಂತರವೂ ಇಲ್ಲಿ ಉಳಿದ ಸೊಪ್ಪುಗಳನ್ನು ಬೀದಿಗಳಲ್ಲಿ ಸುತ್ತಾಡಿ ಮಾರಾಟ ಮಾಡುತ್ತೇವೆ’ ಎಂದು ವ್ಯಾಪಾರಿ ಇಬ್ರಾಹಿಂ ತಿಳಿಸಿದರು.

ತರಕಾರಿ ದರ (ಕೆ.ಜಿ.₹ ಗಳಲ್ಲಿ)

ತರಕಾರಿ;ಕಳೆದ ವಾರ;ಈ ವಾರ

ಹೀರೆಕಾಯಿ;60;60

ಹಸಿಮೆಣಸಿನಕಾಯಿ;40;40

ಡಬ್ಬುಮೆಣಸಿನಕಾಯಿ;60;40

ಆಲೂಗಡ್ಡೆ;30;15

ಟೊಮೆಟೊ;20;15

ಗಜ್ಜರಿ;60;50

ಈರುಳ್ಳಿ;30;15

ಬೆಂಡೆಕಾಯಿ;40;30

ಸವತೆಕಾಯಿ;40;40

ಬದನೆಕಾಯಿ;60;40

ಹಣ್ಣುಗಳ ದರ (ಕೆ.ಜಿ.₹ ಗಳಲ್ಲಿ)

ಹಣ್ಣು;ದರ

ಸೇಬು;240

ಮಾವಿನಹಣ್ಣು;50

ಸಪೋಟ;100

ಪಪ್ಪಾಯ;60

ಏಲಕ್ಕಿಬಾಳೆ;100

ಪೇರು;60

ಕಿತ್ತಳೆ;120

ದಾಳಿಂಬೆ;120

ನೇರಳೆ;160

ಕಲ್ಲಂಗಡಿ; ₹20ಕ್ಕೆ 1

ಪೈನಾಪಲ್; ₹ 80ಕ್ಕೆ 1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.