ADVERTISEMENT

ಕಲಬುರ್ಗಿ: ಕೆಲವೆಡೆ ಆರಂಭವಾಗದ ಪಡಿತರ ವಿತರಣೆ

ಎರಡು ತಿಂಗಳ ಪಡಿತರ ಹಂಚಿಕೆಯಾಗಬೇಕಿದ್ದರಿಂದ ದಾಸ್ತಾನು ಮಾಡುತ್ತಿರುವ ನ್ಯಾಯಬೆಲೆ ಅಂಗಡಿಯವರು

ಮನೋಜ ಕುಮಾರ್ ಗುದ್ದಿ
Published 3 ಏಪ್ರಿಲ್ 2020, 20:00 IST
Last Updated 3 ಏಪ್ರಿಲ್ 2020, 20:00 IST
ಕಲಬುರ್ಗಿಯ ವಿದ್ಯಾನಗರದಲ್ಲಿ ಗ್ರಾಹಕರೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ಪಡೆಯುತ್ತಿರುವುದು
ಕಲಬುರ್ಗಿಯ ವಿದ್ಯಾನಗರದಲ್ಲಿ ಗ್ರಾಹಕರೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ಪಡೆಯುತ್ತಿರುವುದು   

ಕಲಬುರ್ಗಿ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಮನೆಯಲ್ಲೇ ಲಾಕ್‌ಡೌನ್‌ನಲ್ಲಿರುವ ಜನರಿಗೆ ನೆರವಾಗಲು ರಾಜ್ಯ ಸರ್ಕಾರ ಏಪ್ರಿಲ್‌ 1ರಿಂದಲೇ ಎರಡು ತಿಂಗಳ ಪಡಿತರ ವಿತರಣೆ ಮಾಡಬೇಕು ಎಂದು ಸೂಚಿಸಿದೆಯಾದರೂ ಜಿಲ್ಲೆಯ ಹಲವು ಕಡೆ ವಿತರಣೆ ಇನ್ನೂ ಆರಂಭವಾಗಿಲ್ಲ.

ಆದ್ಯತಾ ಕುಟುಂಬಗಳಿಗೆ (ಬಿಪಿಎಲ್‌) ಅಕ್ಕಿಯ ಜೊತೆಗೆ ಒಂದು ಪಡಿತರ ಚೀಟಿಗೆ ಎರಡು ಕೆ.ಜಿ. ಗೋಧಿಯನ್ನೂ ಕೊಡಬೇಕಿದೆ. ಗೋಧಿ ಸಂಗ್ರಹ ಈಗಷ್ಟೇ ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಗೋಡೌನ್‌ಗೆ ಬಂದಿದ್ದು, ಅಲ್ಲಿಂದ ಜಿಲ್ಲೆ ಹಾಗೂ ನಗರದಲ್ಲಿರುವ ನ್ಯಾಯಬೆಲೆ ಅಂಗಡಿಗಳನ್ನು ತಲುಪಬೇಕಿದೆ. ಹೀಗಾಗಿ, ಎರಡು ದಿನ ವಿಳಂಬವಾಗಿ ವಿತರಣೆ ಆರಂಭವಾಗಬಹುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್‌ 1ರಿಂದಲೇ ಪಡಿತರ ವಿತರಣೆ ಮಾಡುವಂತೆ ರಾಜ್ಯ ಸರ್ಕಾರ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಅದಕ್ಕೆ ತಕ್ಕಂತೆ ದಾಸ್ತಾನನ್ನೂ ಮಾಡಿಕೊಳ್ಳಬೇಕಿದೆ. ಇತ್ತೀಚೆಗೆ ನಗರದಲ್ಲಿ ಸಭೆ ನಡೆಸಿದ್ದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು, ‘ಎರಡು ತಿಂಗಳ ಪಡಿತರವನ್ನು ಏಪ್ರಿಲ್‌ನಲ್ಲಿಯೇ ವಿತರಿಸಬೇಕು. ದಾಸ್ತಾನು ಇಲ್ಲದಿದ್ದರೆ ಈಗಲೇ ಬೇಡಿಕೆ ಸಲ್ಲಿಸಿ’ ಎಂದು ಸೂಚನೆ ನೀಡಿದ್ದರು. ಗೋಧಿ ಸಾಕಷ್ಟು ಪ್ರಮಾಣದಲ್ಲಿ ಇಲ್ಲ ಎಂಬುದನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕ ಡಿ.ಎಂ. ಪಾಣಿ ತಿಳಿಸಿದ್ದರು.

ADVERTISEMENT

ಏತನ್ಮಧ್ಯೆ, ಗೋದಿಯನ್ನು ನೀಡಬೇಕಾದ ಅವಶ್ಯಕತೆ ಇಲ್ಲದ ಅಂತ್ಯೋದಯ ಹಾಗೂ ಆದ್ಯತೇತರ (ಎಪಿಎಲ್‌) ಕುಟುಂಬಗಳ ಪಡಿತರ ಚೀಟಿದಾರರಿಗೆ ಪಡಿತರ ವಿತರಣೆ ಆರಂಭವಾಗಿದೆ. ನಗರದಲ್ಲಿರುವ ಬಿಪಿಎಲ್‌ ಕುಟುಂಬದವರಿಗೆ ಏಪ್ರಿಲ್ 4ರಿಂದ ಆರಂಭವಾಗಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಜಿಲ್ಲೆಯ ಪಡಿತರ ದಾಸ್ತಾನು ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಡಿ.ಎಂ. ಪಾಣಿ ಅವರು, ‘ಜಿಲ್ಲೆಯಲ್ಲಿರುವ ಎಲ್ಲ 983 ನ್ಯಾಯಬೆಲೆ ಅಂಗಡಿಗಳಲ್ಲಿರುವ ದಾಸ್ತಾನಿನಲ್ಲಿ ಪಡಿತರ ವಿತರಣೆಯನ್ನು ಏಪ್ರಿಲ್ 1ರಿಂದಲೇ ಶುರು ಮಾಡುವಂತೆ ಸೂಚಿಸಿದ್ದೇವೆ. ಕೆಲವು ಕಡೆ ಪಡಿತರ ಚೀಟಿದಾರರಿಗೆ ಒಮ್ಮೆ ವಿತರಣೆ ನೀಡಲು ಶುರು ಮಾಡಿ ಮಧ್ಯದಲ್ಲಿ ವಿತರಣೆ ಬಂದ್‌ ಮಾಡಿದರೆ ಜಗಳ ತೆಗೆಯುತ್ತಾರೆ. ಹೀಗಾಗಿ, ಅಗತ್ಯವಿರುವಷ್ಟು ದಾಸ್ತಾನನ್ನು ಮೊದಲೇ ಸಂಗ್ರಹಿಸಿಟ್ಟುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಒಂದು ನ್ಯಾಯಬೆಲೆ ಅಂಗಡಿಗೆ ಸರಾಸರಿ2 ಸಾವಿರ ಪಡಿತರ ಚೀಟಿದಾರರು ಇರುತ್ತಾರೆ. ನಿತ್ಯ 100 ಜನರಂತೆ ಟೋಕನ್‌ ನೀಡಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಆಹಾರ ಧಾನ್ಯಗಳನ್ನು ವಿತರಿಸುವಂತೆ ತಿಳಿಸಿದ್ದೇವೆ. ಏಪ್ರಿಲ್ 20ರ ವೇಳೆಗೆ ಪಡಿತರ ವಿತರಣೆ ಮುಗಿಯಲಿದೆ’ ಎಂದರು.

ಬೇರೆ ಜಿಲ್ಲೆ, ರಾಜ್ಯದವರಿಗೂ ಪಡಿತರ

ಬೇರೆ ಜಿಲ್ಲೆ, ಬೇರೆ ರಾಜ್ಯಗಳಿಂದ ಅನಿವಾರ್ಯ ಕಾರಣಗಳಿಗಾಗಿ ಯಾವುದೇ ಜಿಲ್ಲೆಗೆ ತೆರಳಿದವರಿಗೂ ಪಡಿತರ ದೊರೆಯುವ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ಅದಕ್ಕೆ ಆ ಪಡಿತರ ಚೀಟಿದಾರರು ಮಾಡಬೇಕಿರುವುದು ಇಷ್ಟೇ. ಅವರ ಪಡಿತರ ಚೀಟಿ, ಆಧಾರ್‌ ಕಾರ್ಡ್‌ ಹಾಗೂ ಪಡಿತರ ಚೀಟಿ ಪಡೆಯುವ ಸಂದರ್ಭದಲ್ಲಿ ನೀಡಲಾದ ಮೊಬೈಲ್‌ ಸಂಖ್ಯೆಯನ್ನು ಕೊಂಡೊಯ್ದರೆ ಸಾಕು. ನ್ಯಾಯಬೆಲೆ ಅಂಗ
ಡಿಯವರು ಒಟಿಪಿಯನ್ನು ಮೊಬೈಲ್‌ ಕಳಿಸುತ್ತಾರೆ. ಆ ಸಂಖ್ಯೆ ಹೇಳಿದರೆ ಪಡಿತರ ದೊರೆಯಲಿದೆ.

ಇಂದಿನಿಂದ 2 ಸಾವಿರ ಲೀಟರ್‌ ಹಾಲು

ಹೆಚ್ಚುವರಿಯಾಗಿ ಉಳಿಯುತ್ತಿರುವ ಹಾಲನ್ನು ಬಡವರಿಗೆ,ಮಕ್ಕಳಿಗೆ ವಿತರಿಸಲು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ನಿರ್ಧರಿ
ಸಿರುವುದರಿಂದ ಕಲಬುರ್ಗಿ, ಬೀದರ್‌, ಯಾದಗಿರಿ ಸಹಕಾರ ಹಾಲು ಒಕ್ಕೂಟವು ಇದೇ 3ರಂದು ತನ್ನಲ್ಲಿ ಹೆಚ್ಚುವರಿಯಾಗಿ ಉಳಿಯುತ್ತಿರುವ 2 ಸಾವಿರ ಲೀಟರ್‌ ಹಾಲನ್ನು ಜಿಲ್ಲಾಡಳಿತಕ್ಕೆ ನೀಡಲಿದೆ. ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಪಾಟೀಲ, ಜಿಲ್ಲಾಡಳಿತದ ನಿರ್ದೇ
ಶನದ ಮೇರೆಗೆ ಶುಕ್ರವಾರದಿಂದ 2 ಸಾವಿರ ಲೀಟರ್‌ ಹಾಲನ್ನು ಕೊಡಲಿದ್ದೇವೆ. ಈಗಾಗಲೇ ನಿರ್ಗತಿಕರಿಗೆ ಜಿಲ್ಲಾಡಳಿತ ಊಟದ ಪ್ಯಾಕೆಟ್ ನೀಡುತ್ತಿದ್ದು, ಆ ವಾಹನದೊಂದಿಗೇ ಹಾಲನ್ನು ಕೊಂಡೊಯ್ದು ಉಚಿತವಾಗಿ ಹಂಚಿಕೆ ಮಾಡಲಿದೆ’ ಎಂದರು.

ಮೊಬೈಲ್, ಬಯೊಮೆಟ್ರಿಕ್ ಇಲ್ಲದಿದ್ದರೂ ಪಡಿತರ

ಪಡಿತರ ಚೀಟಿದಾರರಿಗೆ ಒಟಿಪಿ ಕಳಿಸಲು ಮೊಬೈಲ್‌ ಫೋನ್, ಬಯೊಮೆಟ್ರಿಕ್ ನೀಡಲು ಬೆರಳು ಹೊಂದಾಣಿಕೆಯಾಗದಿದ್ದರೂ ಚಿಂತೆ ಮಾಡುವ ಅಗತ್ಯವಿಲ್ಲ. ವಿಶೇಷ ಪ್ರಕರಣವೆಂದು ಭಾವಿಸಿ ಅವರಿಗೂ ಪಡಿತರ ನೀಡುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ ನೀಡಿದೆ. ಆಹಾರ ನಿರೀಕ್ಷಕರು ಆ ಪಡಿತರ ಚೀಟಿಯ ಸಂಖ್ಯೆಯನ್ನು ಬರೆದುಕೊಂಡು ಅದನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬಹುದು.

***

ಪಡಿತರ ಸಮರ್ಪಕವಾಗಿ ಪೂರೈಕೆಯಾಗದಿದ್ದಲ್ಲಿ ಪಡಿತರ ಚೀಟಿದಾರರು 08472 278678 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು

– ಡಿ.ಎಂ.ಪಾಣಿ, ಆಹಾರ ಇಲಾಖೆ ಜಂಟಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.