ADVERTISEMENT

ಕಾಳಗಿ | ಕರ್ತವ್ಯದಲ್ಲಿ ವೈಯಕ್ತಿಕ ಹಿತಾಸಕ್ತಿ ಸಲ್ಲದು: ಅಡ್ಡೂರು ಶ್ರೀನಿವಾಸಲು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 6:39 IST
Last Updated 9 ಡಿಸೆಂಬರ್ 2025, 6:39 IST
ಕಾಳಗಿಯಲ್ಲಿ ಸೋಮವಾರ ಜಿಲ್ಲಾ ಗೃಹರಕ್ಷಕರ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಎಸ್‌ಪಿ ಅಡ್ಡೂರು ಶ್ರೀನಿವಾಸಲು ಮಾತನಾಡಿದರು
ಕಾಳಗಿಯಲ್ಲಿ ಸೋಮವಾರ ಜಿಲ್ಲಾ ಗೃಹರಕ್ಷಕರ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಎಸ್‌ಪಿ ಅಡ್ಡೂರು ಶ್ರೀನಿವಾಸಲು ಮಾತನಾಡಿದರು   

ಕಾಳಗಿ: ‘ತರಬೇತಿ ಪಡೆದು ಶಿಸ್ತಿನ ಸಿಪಾಯಿಗಳಾಗಿ ಸಾರ್ವಜನಿಕ ಕ್ಷೇತ್ರಕ್ಕೆ ಕಾಲಿಟ್ಟಿದ್ದಿರಿ. ವಿವಿಧ ಬಂದೋಬಸ್ತಿನ ಕರ್ತವ್ಯದ ವೇಳೆ ಜಾತಿ, ಧರ್ಮ, ವೈಯಕ್ತಿಕ ಹಿತಾಸಕ್ತಿ ತೋರದೆ ಸಂವಿಧಾನದಡಿಯಲ್ಲಿ ಕೆಲಸ ಮಾಡುವುದು ತಮ್ಮ ಆದ್ಯಕರ್ತವ್ಯವಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಕರೆ ನೀಡಿದರು.

ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸೋಮವಾರ ಜಿಲ್ಲಾ ಗೃಹರಕ್ಷಕ ದಳದ 10 ದಿನದ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಸಮವಸ್ತ್ರ ಧರಿಸಿದ ಮೇಲೆ ತಮ್ಮ ಚಲನ-ವಲನದ ಮೇಲೆ ಗಮನವಿರಬೇಕು. ಗಣೇಶ ಉತ್ಸವ, ಜಾತ್ರೆ, ರಾಜಕೀಯ ಮತ್ತಿತರ ಬಂದೋಬಸ್ತ್‌ಗೆ ತಮ್ಮನ್ನು ನಿಯೋಜಿಸಲಾಗುತ್ತದೆ. ಈ ವೇಳೆ ಪ್ರಮಾಣಿಕ ಸೇವೆಗೆ ಸನ್ನದ್ಧರಾಗಬೇಕು. ಯಾರನ್ನು ಹೆದರಿಸುವ ಮತ್ತು ಅನೈತಿಕ ಚಟುವಟಿಕೆಗಳಲ್ಲಿ ತೊಡಗುವ ಪ್ರಯತ್ನ ಕಂಡುಬಂದರೆ ಆ ಕೂಡಲೇ ಕರ್ತವ್ಯದಿಂದ ಬಿಡುಗಡೆಗೊಳಿಸಿ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಈ ನೇಮಕಾತಿ ಪಾರದರ್ಶಕವಾಗಿ ನಡೆದಿದ್ದು, ಮೂರು ವರ್ಷಕ್ಕೊಮ್ಮೆ ನವೀಕರಣ ಮಾಡಲಾಗುವುದು. ಜಿಲ್ಲೆಯಲ್ಲಿ ಎರಡು ಪೊಲೀಸ್ ಘಟಕವಿದ್ದು, ಹೆಚ್ಚು ಕರ್ತವ್ಯ ನಿರ್ವಹಿಸಿದರೆ ಅಧಿಕ ಗೌರವಧನ ಪಡೆಯುತ್ತಿರಿ’ ಎಂದು ತಿಳಿಸಿದರು.

ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಸಂತೋಷಕುಮಾರ ಪಾಟೀಲ ಅಧ್ಯಕ್ಷೀಯ ಮಾತನಾಡಿ ‘ಗೃಹರಕ್ಷಕ ದಳ ಸಿಬ್ಬಂದಿ ದೈಹಿಕ, ಮಾನಸಿಕ ಸದೃಢರಾಗಿ ಶಿಸ್ತು, ಸಮಯ ಪಾಲನೆ, ದಕ್ಷತೆ ರೂಢಿಸಿಕೊಂಡು ಸೇವೆ ಸಲ್ಲಿಸಿ’ ಎಂದು ಕರೆ ನೀಡಿದರು.

ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಸಂತೋಷ ಮಂಕಾಣಿ ವೇದಿಕೆಯಲ್ಲಿದ್ದರು. ಸಿಪಿಐ ಜಗದೇವಪ್ಪ ಪಾಳಾ, ಪಿಎಸ್ಐ ತಿಮ್ಮಯ್ಯ ಬಿ.ಕೆ ಉಪಸ್ಥಿತರಿದ್ದರು.

ಶಿಬಿರಾರ್ಥಿ ಭಾಗ್ಯಶ್ರೀ, ಮಹೇಶ, ತ್ರಿವೇಣಿ ಅನಿಸಿಕೆ ವ್ಯಕ್ತಪಡಿಸಿದರು. ಪುತಳಾಬಾಯಿ ಪ್ರಾರ್ಥಿಸಿದರು. ಬೋಧಕ ಹಣಮಂತರಾಯಗೌಡ ಸ್ವಾಗತಿಸಿದರು. ಪಿ.ಎಲ್.ಸಿ ಚಂದ್ರಕಾಂತ ಹಾವನೂರ ನಿರೂಪಿಸಿದರು. ಕಲಬುರಗಿ ಡಿಎಆರ್ ಸಿಬ್ಬಂದಿ 200 ಗೃಹರಕ್ಷಕ ದಳ ಸಿಬ್ಬಂದಿಗೆ ತರಬೇತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.