ADVERTISEMENT

ಕಲಬುರಗಿ: ಮತ್ತೆ ಎಟಿಎಂ ದರೋಡೆಗೆ ಬಂದು ಸಿಕ್ಕಿಬಿದ್ದ ಗ್ಯಾಂಗ್

ಹರಿಯಾಣ ಮೂಲದ ದರೋಡೆಕೋರರ ಕಾಲಿಗೆ ಗುಂಡು ಹೊಡೆದು ಬಂಧನ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2025, 13:36 IST
Last Updated 26 ಏಪ್ರಿಲ್ 2025, 13:36 IST
ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆಗೆ ದಾಖಲಾದ ತಸ್ಲೀಮ್
ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆಗೆ ದಾಖಲಾದ ತಸ್ಲೀಮ್   

ಕಲಬುರಗಿ: ನಗರದ ರಿಂಗ್ ರಸ್ತೆಯ ಎಸ್‌ಬಿಐ ಎಟಿಎಂ ಕೇಂದ್ರವನ್ನು ಧ್ವಂಸ ಮಾಡಿ ₹ 18 ಲಕ್ಷ ದೋಚಿ ಪರಾರಿಯಾಗಿ, ಅಂತಹುದೆ ಮತ್ತೊಂದು ಎಟಿಎಂ ದರೋಡೆಗೆ ಬಂದಿದ್ದ ಹರಿಯಾಣ ಮೂಲದ ಅಂತರರಾಜ್ಯ ದರೋಡೆ ಗ್ಯಾಂಗ್‌ನ ನಾಲ್ವರು ಆರೋಪಿಗಳನ್ನು ಸಿಟಿ ಕಮಿಷನರೇಟ್ ಪೊಲೀಸರು ಸೆರೆ ಹಿಡಿದಿದ್ದಾರೆ.

ಸಬರ್ಬನ್, ವಿಶ್ವವಿದ್ಯಾಲಯ ಮತ್ತು ಡಿಸಿಪಿ ಕ್ರೈಮ್ ತಂಡದ ಪೊಲೀಸರು ಕಾರ್ಯಾಚರಣೆ ನಡೆಸಿ ಸಂಭವನೀಯ ಮತ್ತೊಂದು ದರೋಡೆಯನ್ನು ತಡೆದಿದ್ದಾರೆ. ಹರಿಯಾಣ ಮೂಲದ ಪ್ರಮುಖ ಆರೋಪಿ ತಸ್ಲೀಮ್ ಖಾನ್ ಮತ್ತು ಷರೀಫ್ ನೂರ್ ಮಹಮದ್ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಶಾಹೀದ್ ಹರೀದ್ ಮತ್ತು ಅಮೀರ್ ಫರೀದ್ ಶರಣಾಗಿದ್ದು, ಬಂಧಿತರಿಂದ ಕಾರು, ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಬಗ್ಗೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ. ಮಾಹಿತಿ ನೀಡಿದರು.

ADVERTISEMENT

‘ಏಪ್ರಿಲ್ 9ರ ಎಟಿಎಂ ದರೋಡೆ ಪ್ರಕರಣದಲ್ಲಿ ಬ್ಯಾಂಕ್‌ ಹಾಗೂ ಏಜೆನ್ಸಿಗಳಿಂದ ತನಿಖೆಗೆ ಬೇಕಾದ ಪೂರಕ ಮಾಹಿತಿ, ತಾಂತ್ರಿಕ ಸಾಕ್ಷ್ಯಗಳು ಸಕಾಲಕ್ಕೆ ಸಿಗಲಿಲ್ಲ. ಕೃತ್ಯ ನಡೆದ ಅವಧಿಯಲ್ಲಿ ಬಿಳಿ ಬಣ್ಣದ ಐ20 ಕಾರಿನ ಓಡಾಟದ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಅದೇ ಕಾರು ಮತ್ತೊಮ್ಮೆ ನಗರಕ್ಕೆ ಬಂದು ಬೇಲೂರ್ ಕ್ರಾಸ್‌ನಲ್ಲಿ ಶಂಕಾಸ್ಪದವಾಗಿ ಓಡಾಡುತ್ತಿತ್ತು’ ಎಂದರು.

‘ಕಾರಿನಲ್ಲಿದ್ದವರನ್ನು ಬೆನ್ನು ಹತ್ತಿ ತಡೆದು ನಿಲ್ಲಿಸಿ, ಇಬ್ಬರನ್ನು ಶೂಟ್ ಮಾಡಿ ಒಟ್ಟು ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು. ಆರೋಪಿಗಳು ಮೂರ್ನಾಲ್ಕು ವರ್ಷಗಳಿಂದ ಗ್ಯಾಂಗ್ ಕಟ್ಟಿಕೊಂಡು ಗೂಗಲ್ ಮ್ಯಾಪ್‌ ಮೂಲಕ ನಗರದ ಹೊರವಲಯದ ಎಟಿಎಂಗಳನ್ನು ಪತ್ತೆ ಹಚ್ಚುತ್ತಿದ್ದರು. ಕೃತ್ಯದಲ್ಲಿ ಎಸ್‌ಬಿಐನ ಎಟಿಎಂಗಳನ್ನೇ ಗುರಿಯಾಗಿಸಿ ದರೋಡೆ ಮಾಡುತ್ತಿದ್ದರು’ ಎಂದು ಹೇಳಿದರು.

ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆಗೆ ದಾಖಲಾದ ಷರೀಫ್

‘ಎಸ್‌ಬಿಐನ ಎಟಿಎಂಗಳಲ್ಲಿ ಹೆಚ್ಚಿನ ಹಣವಿರುತ್ತದೆ, ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳಲ್ಲಿ ಸ್ಪಷ್ಟತೆ ಇರಲ್ಲ ಎಂಬುದನ್ನು ಅರಿತು ಅವುಗಳನ್ನೇ ಟಾರ್ಗೆಟ್‌ ಮಾಡಿಕೊಂಡಿದ್ದರು. ಸಿಸಿಟಿವಿ ಕ್ಯಾಮೆರಾಗಳಿಗೆ ಕಪ್ಪು ಬಣ್ಣದ ಸ್ಪ್ರೇ ಮಾಡಿ, ಬಳಿಕ ಎಟಿಎಂ ಯಂತ್ರವನ್ನು ಧ್ವಂಸ ಮಾಡುತ್ತಿದ್ದರು. ನಕಲಿ ನಂಬರ್ ಪ್ಲೇಟ್‌ನ ಕಾರಿನಲ್ಲಿ ಹಣವನ್ನು ಇರಿಸಿಕೊಂಡು ಟೋಲ್‌ ಇಲ್ಲದ ಪರ್ಯಾಯ ರಸ್ತೆಗಳನ್ನು ಬಳಸಿ, ಗ್ರಾಮೀಣ ಪ್ರದೇಶದಲ್ಲಿ ಕಾರು ನಿಲ್ಲಿಸುತ್ತಿದ್ದರು. ರೈಲು, ಬಸ್‌ಗಳ ಮೂಲಕ ತಮ್ಮ ರಾಜ್ಯಕ್ಕೆ ತೆರಳುತ್ತಿದ್ದರು. ಮತ್ತೆ ಅದೇ ಕಾರು ಬಳಸಿ ದರೋಡೆಗೆ ಇಳಿಯುತ್ತಿದ್ದರು’ ಎಂದು ಮಾಹಿತಿ ನೀಡಿದರು.

ಅಮೀರ್

‘ಆರೋಪಿಗಳು ದರೋಡೆ ವೇಳೆ ಮೊಬೈಲ್‌ಗಳನ್ನು ಬಂದ್ ಮಾಡುತ್ತಿದ್ದರು. ದರೋಡೆ, ಹಲ್ಲೆ, ಕಳ್ಳತನ ಸೇರಿ ತಸ್ಲೀಮ್ ವಿರುದ್ಧ 10, ಎಟಿಎಂ ಕಳವು ಸೇರಿ ಷರೀಫ್ ವಿರುದ್ಧ 3, ಶಹೀದ್ ವಿರುದ್ಧ 1 ಕಳ್ಳತನ ಹಾಗೂ ಅಮೀರ್ ವಿರುದ್ಧ 7 ಪ್ರಕರಣಗಳಿದ್ದು, ತಲಾ ಮೂರು ಎಟಿಎಂ ಕಳ್ಳತನ ಮತ್ತು ಕಳ್ಳತನಕ್ಕೆ ಯತ್ನ ಕೇಸ್‌ಗಳು ಕರ್ನಾಟಕ ಸೇರಿ ಬೇರೆ ರಾಜ್ಯಗಳಲ್ಲಿ ದಾಖಲಾಗಿವೆ’ ಎಂದು ತಿಳಿಸಿದರು.

ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸರಿಗೆ ಪ್ರಶಂಸನಾ ಪತ್ರ ನೀಡಿ, ₹25 ಸಾವಿರ ಬಹುಮಾನ ಘೋಷಿಸಿದರು. ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ ಎಚ್. ನಾಯಕ್ ಉಪಸ್ಥಿತರಿದ್ದರು.

ಶಾಹೀದ್
ಶರಣಪ್ಪ ಎಸ್‌.ಡಿ.

‘4 ತಂಡಗಳ ರಚನೆ 75 ಸ್ಥಳಗಳಲ್ಲಿ ಶೋಧ’

‘ಎಟಿಎಂ ದರೋಡೆ ಪ್ರಕರಣ ಪತ್ತೆಗೆ 4 ವಿಶೇಷ ತಂಡಗಳನ್ನು ರಚಿಸಿ ನಗರಕ್ಕೆ ಸಂಪರ್ಕಿಸುವ ವೃತ್ತಗಳು ರಸ್ತೆಗಳು ಸೇರಿ 75 ಸ್ಥಳಗಳಲ್ಲಿ ಶೋಧ ನಡೆಸಿದಾಗ ಆರೋಪಿಗಳು ಓಡಾಡಿದ್ದ ಕಾರಿನ ಮಾಹಿತಿ ಸಿಕ್ಕಿತ್ತು’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ. ಹೇಳಿದರು. ‘ದರೋಡೆ ನಡೆದ ಬಳಿಕ ಬ್ಯಾಂಕ್‌ ಮತ್ತು ಏಜೆನ್ಸಿಯಿಂದ ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಸಕಾಲಕ್ಕೆ ಸಿಗಲಿಲ್ಲ. ಜತೆಗೆ ಎಟಿಎಂ ಕೇಂದ್ರದ ಸಿಸಿಟಿವಿ ಕ್ಯಾಮೆರಾಗಳು ಬಂದ್ ಆಗಿದ್ದವು. ಸಾಕಷ್ಟು ಅಡೆತಡೆಗಳು ಎದುರಾಗಿದ್ದು ಇದನ್ನು ಸವಾಲಾಗಿ ತೆಗೆದುಕೊಂಡು ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಆರ್ಗನೈಸ್ ಕ್ರೈಮ್ ಕರ್ತವ್ಯಕ್ಕೆ ಅಡ್ಡಿ ಪೊಲೀಸರ ಮೇಲೆ ಹಲ್ಲೆ ಕುರಿತು ಪ್ರಕರಣ ದಾಖಲಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.