ADVERTISEMENT

ಮೋಡಕವಿದ ವಾತಾವರಣ; ಹಿತವಾಗಿರುವ ಕಲಬುರ್ಗಿಯ ಧರೆ

ಮನಸ್ಸಿಗೆ ಮುದ ನೀಡುವ ತಂಪಾದ ಗಾಳಿ

ಎಲ್‌.ಮಂಜುನಾಥ್‌.ಸಾಸಲು, ದೊಡ್ಡಬಳ್ಳಾಪುರ ತಾ.
Published 14 ಜೂನ್ 2020, 19:30 IST
Last Updated 14 ಜೂನ್ 2020, 19:30 IST
   

ಕಲಬುರ್ಗಿ: ಮಲೆನಾಡಿನ ಸೊಬಗಿನ ಸೆರಗನ್ನು ತುಸು ತನ್ನ ಧರೆಯ ಮೇಲೆ ಎಳೆದುಕೊಂಡಂತೆ ಭಾಸವಾಗುತ್ತಿದೆ ಕಲಬುರ್ಗಿ ನಗರದ ವಾತಾವರಣ.

ಎತ್ತ ಕಣ್ಣಾಯಿಸಿದರೂ ಹಚ್ಚಹಸಿರು ನೋಡುಗರ ಕಣ್ಣಿಗೆ ರಾಚುತ್ತಿದೆ. ಮುಂಜಾನೆಯ ಹಿತವಾದ ಗಾಳಿ ನಗರದ ಜನರ ಮೈ ಮನವನ್ನು ಸೋಕುತ್ತಿದೆ. ಇದು ರಾತ್ರಿಯ ತನಕವೂ ಜೂಟಾಟವಾಡುತ್ತಾ ಧಣಿದ ಮನಸ್ಸುಗಳಿಗೆ ಮುದ ನೀಡುತ್ತಲೇ ಇರುತ್ತದೆ. ಮತ್ತೆ ಎಂದಿನಿಂದ ಮುಂಜಾನೆ ನಗರದ ಜನರನ್ನು ತನ್ನತ್ತ ಸೆಳೆಯುತ್ತಿದೆ.

ಅಬ್ಬಾ! ಕಲಬುರ್ಗಿ ನಗರದಲ್ಲಿ ಎಂತಹ ಬಿಸಿಲು ಎಂದು ನಕರಾತ್ಮಕ ಧೋರಣೆಯಿಂದಲೇ ಮಾತನಾಡುವ ಜನರಿಗೆ ನಗರವು ಹಚ್ಚ ಹಸಿರನ್ನು ಹೊದ್ದು, ತಂಪಾದ ಗಾಳಿಯೊಂದಿಗೆ ಅವರ ಮೈಗೆ ಕಚಗುಳಿ ಇಡುತ್ತಿದೆ.

ADVERTISEMENT

ಕೊರೊನಾ ವೈರಸ್‌ನ ಭಯದ ನೂರಾರು ಯೋಚನೆಗಳನ್ನು ಮೈ ಮನದಲ್ಲಿ ಆವರಿಸಿಕೊಂಡು ಗೂಡಿನಲ್ಲಿ ಸೇರಿಕೊಂಡಿದ್ದ ಜನರು ಹಕ್ಕಿಗಳಂತೆ ಮೈಯನ್ನು ಕೊಡವಿಕೊಂಡು ಎದ್ದು ಎಂದಿನಂತೆ ಮೆಲ್ಲಗೆ ನಗರದ ಉದ್ಯಾನಗಳತ್ತಾ ಮುಖ ಮಾಡುವ ಮೂಲಕ ಬದುಕಿನ ಬಂಡಿಯನ್ನು ಎಳೆಯಲು ಆರಂಭಿಸುತ್ತಿದ್ದಾರೆ.

ಲಾಕ್‌ಡೌನ್‌ ವೇಳೆಯಲ್ಲಿ ಬಿಕೋ ಎನ್ನುತ್ತಿದ್ದ ನಗರದ ಉದ್ಯಾನಗಳಲ್ಲಿ ಇದೀಗ ಮುಂಜಾನೆ ಮತ್ತು ಸಂಜೆ ವಾಯುವಿಹಾರಿಗಳ ಹಾಗೂ ಮಕ್ಕಳ ದಂಡೇ ನೆರೆಯುತ್ತಿದೆ. ಇದಕ್ಕೆ ಆಹ್ಲಾದಕರವಾದ ವಾತಾವರಣವೂ ಅವರಿಗೆ ಪೂರಕವಾಗಿದೆ.

ಮಾರ್ಚ್‌ ಆರಂಭದಿಂದ ಏಪ್ರಿಲ್‌ ಅಂತ್ಯದವರಿಗೆ ನಗರದ ಉಷ್ಣಾಂಶ ಎಲ್ಲಾ ನಗರಗಳಂತೆಯೇ 35 ರಿಂದ 40 ಡಿಗ್ರಿಯ ತನಕ ಇರುತ್ತದೆ. ಆದರೆ, ಮೇ ತಿಂಗಳ ಆರಂಭದ ಎರಡು ವಾರ ಮಾತ್ರ ಇಲ್ಲಿನ ಉಷ್ಣಾಂಶ ತುಸು ಹೆಚ್ಚು ಇರುತ್ತದೆ. ಈ ದಿನಗಳನ್ನು ಸಹಿಸಿಕೊಂಡರೆ ಸಾಕು, ಮತ್ತೆ ಉಷ್ಟಾಂಶ ಇಳಿಕೆಯಾಗುತ್ತಲೇ ಹೋಗುತ್ತದೆ. ಜೂನ್‌ ಆರಂಭದಲ್ಲಿ ಮಳೆ ಬರಲಿ ಬಾರದೇ ಇರಲಿ ಇಲ್ಲಿನ ತಾಪಮಾನ ಮಾತ್ರ 25 ರಿಂದ 30 ಡಿಗ್ರಿಯ ಹಾಸುಪಾಸಿನೊಂದಿಗೆ ಮಲೆನಾಡಿನ ಅನುಭವವನ್ನು ನೀಡುತ್ತಾ ಸಾಗುತ್ತದೆ. ಪ್ರಸ್ತುತ ಮೋಡಕವಿದ ವಾತಾವರಣ, ಆಗಾಗ ಸುಳಿದಾಡುವ ನೆರಳು– ಬಿಸಿಲು ಇಡೀ ದಿನ ಮನಸ್ಸನ್ನು ಆಹ್ಲಾದಕರವಾಗಿಡುತ್ತಿದೆ.

’ಈ ಬಾರಿ ನಗರದಲ್ಲಿ ಬಿಸಿಲು ಕಡಿಮೆ ಇತ್ತು. ಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್‌ಡೌನ್‌ ಘೋಷಿಸಿದ್ದ ಹಿನ್ನೆಲೆಯಲ್ಲಿ ವಾಹನಗಳು, ಜನರು ರಸ್ತೆಗೆ ಇಳಿದಿರಲಿಲ್ಲ. ಹಾಗಾಗಿ ಬಿಸಿಲಿನ ತಾಪಮಾನ ಕಳೆದ ವರ್ಷಕ್ಕಿಂತ ಕಡಿಮೆಯೇ ಇತ್ತು. ಸುಮಾರು 70 ದಿನಗಳು ಮನೆಯಲ್ಲಿಯೇ ಇದ್ದು ಬೇಸರವಾಗಿತ್ತು. ಆದರೀಗ ನಮ್ಮೂರಿನ ಈಗಿನ ವಾತಾವರಣವನ್ನು ನೋಡಿದರೆ ಖುಷಿಯಾಗುತ್ತಿದೆ. ವರ್ಷವಿಡೀ ಹೀಗೆಯೇ ತಂಪಾಗಿರಬೇಕು ಎನ್ನಿಸುತ್ತಿದೆ‘ ಎನ್ನುತ್ತಾರೆ ಪಾಲಿಕೆಯ ಉದ್ಯಾನದಲ್ಲಿ ಬೆಳಗಿನ ವಾಯುವಿಹಾರ ಮಾಡುತ್ತಿದ್ದ ಗೋದುತಾಯಿ ನಗರದ ನಿವಾಸಿ ವಿಶಾಲ್‌.

'ಇಡೀ ನಗರವು ತಂಪಾಗಿದೆ. ಉದ್ಯಾನಗಳಲ್ಲಿ ಹಾಗೂ ಮನೆಯ ಸುತ್ತಮುತ್ತಲಿನ ಮರಗಳಲ್ಲಿ ಹಕ್ಕಿಗಳ ಕಲರವು ಕೇಳಿಬರುತ್ತಿದೆ. ಇಂತಹ ವಾತಾವರಣದಲ್ಲಿ ಮುಂಜಾನೆ ಸಂಜೆ ವಾಕಿಂಗ್‌ ಮಾಡಲು ತುಂಬಾ ಖುಷಿಯಾಗುತ್ತದೆ‘ ಎನ್ನುತ್ತಾರೆ ಮಧುಸೂಧನ.

ಮುಂಜಾನೆ ಮತ್ತು ಸಂಜೆ ಬೀಸುವ ತಂಪಾದ ಗಾಳಿಯು ಮೈಯನ್ನು ಹಿತವಾಗಿಸುತ್ತಿದೆ ಎಂದು ಗೆಳೆಯರೊಂದಿಗೆ ಇಲ್ಲಿನ ಆಮಂತ್ರಣ ಹೋಟೆಲ್‌ನಲ್ಲಿ ಕಾಫಿ ಸೇವಿಸುತ್ತಾ ನಿಂತಿದ್ದ ನಿರಂಜನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.