ಕಲಬುರ್ಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ಸಂಗೊಳಗಿಯ 45 ವಯಸ್ಸಿನ ಸಣ್ಣ ರೈತ ವೆಂಕಟರಾವ ಬಿರಾದಾರ ಒಂದು ಎಕರೆಯಲ್ಲೇ ತರಹೇವಾರಿ ಹಣ್ಣು ತರಕಾರಿ ಬೆಳೆದು ವರ್ಷಕ್ಕೆ ಸುಮಾರು ₹ 5 ಲಕ್ಷ ಆದಾಯ ಗಳಿಸುತ್ತಿದ್ದಾರೆ.
ವೆಂಕಟರಾವ ಬಡತನದ ಪ್ರಯುಕ್ತ ಎಸ್ಸೆಸ್ಸೆಲ್ಸಿ ನಂತರ ವಿದ್ಯಾಭ್ಯಾಸ ಮೊಟಕುಗೊಳಿಸಿದರು. ಕಲಬುರ್ಗಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ, ತೋಟಗಾರಿಕೆ ಹಾಗೂ ಕೃಷಿ ತಂತ್ರಜ್ಞರ ಮಾರ್ಗದರ್ಶನದನ್ವಯ ಮಧ್ಯಮ ಫಲವತ್ತತೆಯ ತಮ್ಮ ಒಂದು ಎಕರೆ ಜಮೀನನ್ನು ಅಗತ್ಯಕ್ಕನುಗುಣವಾಗಿ ಮಾರ್ಪಡಿಸಿದರು. ತೋಟಗಾರಿಕೆ ಅಧಿಕಾರಿಯೊಬ್ಬರ ಪ್ರೇರಣೆಯಿಂದ ಸೀತಾಫಲ ಬೆಳೆಯಲು ನಿರ್ಧರಿಸಿ, ತೆಲಂಗಾಣ ರಾಜ್ಯದ ಸಂಗಾರೆಡ್ಡಿಯಿಂದ 2009ರಲ್ಲಿ ಬಾಲಾನಗರ ತಳಿಯ 125 ಸೀತಾಫಲ ಸಸಿಗಳನ್ನು ತಂದು ₹ 25 ಸಾವಿರ ವೆಚ್ಚದಲ್ಲಿ ನಾಟಿ ಮಾಡಿದರು. ಈ ಗಿಡಗಳು ಹುಲುಸಾಗಿ ಬೆಳೆದು ಮೂರು ವರ್ಷಕ್ಕೇ ಫಸಲು ನೀಡಲು ಪ್ರಾರಂಭಿಸಿದ್ದರಿಂದ ಮೊದಲನೇ ಫಸಲಿನ 31.25 ಕ್ವಿಂಟಲ್ ಮಾರಾಟದಿಂದ ₹ 1.09 ಲಕ್ಷ ರೂ. ಲಾಭ ಪಡೆದರು.
ವರ್ಷಕ್ಕೊಂದು ಸಲ ಆಗಸ್ಟ್ 3ನೇ ವಾರದಿಂದ ಎರಡುವರೆ ತಿಂಗಳವರೆಗೆ ಪ್ರತಿ ಗಿಡದಿಂದ ಸರಾಸರಿ 50 ಕೆ.ಜಿ.ಯಂತೆ ಒಟ್ಟು 62 ಕ್ವಿಂಟಾಲ್ ಸೀತಾಫಲದ ಇಳುವರಿ ಪಡೆದು ಸರಾಸರಿ ಎರಡೂವರೆ ಲಕ್ಷ ಗಳಿಸುತ್ತಿದ್ದಾರೆ. ಪ್ರಸಕ್ತ ವರ್ಷದ ಅತಿವೃಷ್ಟಿಯಿಂದ ಕೇವಲ 37 ಕ್ವಿಂಟಾಲ್ ಇಳುವರಿ ಬಂದಿದೆಯಾದರೂ ಮಾರಾಟ ಬೆಲೆ ಹೆಚ್ಚಿರುವುದರಿಂದ ₹ 2.50 ಲಕ್ಷ ಪಡೆದಿದ್ದಾರೆ.
ಒಂದು ಬುಟ್ಟಿಯಲ್ಲಿ 30ರಂತೆ ಸೀತಾಫಲ ತುಂಬಿ ಪ್ರತಿ ಬುಟ್ಟಿಗೆ ₹ 750ರಂತೆ ಕಲಬುರ್ಗಿಯಲ್ಲೇ ಪುಣೆ, ಹೈದರಾಬಾದ್, ಕಲಬುರ್ಗಿ ಮಾರಾಟಗಾರರು ಖರೀದಿಸುತ್ತಾರೆ. ಬಳ್ಳಾರಿ, ಹುಬ್ಬಳ್ಳಿ, ಬೆಂಗಳೂರಿಗೂ ಪಾರ್ಸೆಲ್ ಮೂಲಕ ಕಳುಹಿಸಿದ್ದಾರೆ. ಮುಂದಿನ ವರ್ಷ ತಮ್ಮದೇಯಾದ ಬ್ರ್ಯಾಂಡಿನಲ್ಲಿ ಸೀತಾಫಲ ಮಾರಾಟಕ್ಕೆ ಯೋಜಿಸಿದ್ದಾರೆ. ಅವರ ಸಂಪರ್ಕ ಸಂಖ್ಯೆ 97404 85727.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.