ADVERTISEMENT

ಕಲಬುರ್ಗಿಯಲ್ಲಿ ಎರಡನೇ ದಿನ ಇನ್ನಷ್ಟು ಬಿಗಿ ‘‌ಲಾಕ್‌’

​ಪ್ರಜಾವಾಣಿ ವಾರ್ತೆ
Published 21 ಮೇ 2021, 5:42 IST
Last Updated 21 ಮೇ 2021, 5:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಲಬುರ್ಗಿ: ಕೊರೊನಾ ನಿಯಂತ್ರಣಕ್ಕಾಗಿ ಜಾರಿ ಮಾಡಿದ ಸಂಪೂರ್ಣ ಲಾಕ್‌ಡೌನ್‌ಗೆ ಎರಡನೇ ದಿನವಾದ ಶುಕ್ರವಾರ ಜಿಲ್ಲೆಯ ಜನ ಅಭೂತಪೂರ್ವವಾಗಿ ಸ್ಪಂದಿಸಿದರು‌. ನಗರವೂ ಸೇರಿದಂತೆ ಜಿಲ್ಲೆಯ ಎಲ್ಲ ಪಟ್ಟಣಗಳು ಸ್ತಬ್ಧಗೊಂಡಿವೆ.

ನಗರದ ಜನನಿಬಿಡ ಪ್ರದೇಶಗಳಾದ ಎಪಿಎಂಸಿ, ಶಹಾಬಜಾರ್‌, ಮುಸ್ಲಿಂ ಚೌಕ, ಸೂಪರ್‌ ಮಾರ್ಕೆಟ್‌, ಕಣ್ಣಿ ಮಾರ್ಕೆಟ್‌, ಬಸ್‌ ನಿಲ್ದಾಣ, ರಾಷ್ಟ್ರಪತಿ ಚೌಕ ಮುಂತಾದ ಪ್ರದೇಶಗಳು ಬಿಕೋ ಎನ್ನುತ್ತಿವೆ. ವಾಣಿಜ್ಯ ಮಳಿಗೆಗಳು ಬಾಗಿಲು ತೆರೆಯಲೇ ಇಲ್ಲ.

ಬೀದಿ ಬದಿ ಹಾಗೂ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುವುದನ್ನು ಗುರುವಾರವೇ ನಿಷೇಧಿಸಿದ್ದರಿಂದ ಶುಕ್ರವಾರ ಯಾರೂ ಈ ಪ್ರಯತ್ನ ಮಾಡಲಿಲ್ಲ. ವಿವಿಧ ಬಡಾವಣೆಗಳಲ್ಲಿ ತಳ್ಳುವ ಗಾಡಿಗಳ ಮೂಲಕ ತರಕಾರಿ ಮಾರಲು ಮಾತ್ರ ಅವಕಾಶ ನೀಡಲಾಗಿದೆ.

ADVERTISEMENT

‌ಎಂದಿನಂತೆ ಬೆಳಿಗ್ಗೆ ಹಾಲು, ಪೇಪರ್‌ ಮಾರಾಟ ಮಾಡುವವರು ಮಾತ್ರ ಓಡಾಡುತ್ತಿದ್ದರು. ವೈದ್ಯಕೀಯ ತುರ್ತು ಇರುವ ಕಾರಣ ಕೆಲವು ಬೈಕ್‌ ಹಾಗೂ ಕಾರ್‌ಗಳು ಸಂಚರಿಸಿದವು. ಪೊಲೀಸರು ಅವುಗಳನ್ನು ನಿಲ್ಲಿಸಿ ದಾಖಲೆ ಪರಿಶೀಲಣೆ ನಡೆಸಿದರು.

ಶುಕ್ರವಾರ ಕೂಡ ರೈಲಿನ ಮೂಲಕ ಮುಂಬೈನಿಂದ ಬಂದ ಎರಡು ಕುಟುಂಬಗಳು ಮನೆಗೆ ಮರಳಲು ಯಾವುದೇ ವಾಹನ ಇಲ್ಲದ ಕಾರಣ, ಇಲ್ಲಿನ ಎಸ್‌ವಿಪಿ ವೃತ್ತದ ಬಸ್‌ ನಿಲ್ದಾಣದಲ್ಲೇ ಕಾದು ಕುಳಿತವು. ಕುಟುಂಬದೊಂದಿಗೆ ಬಂದ ಆರು ಮಕ್ಕಳು ಖಾಲಿ ರಸ್ತೆಯಲ್ಲಿ ಆಟವಾಡಿ ನಲಿದರು.

ತಾಲ್ಲೂಕು ಕೇಂದ್ರಗಳಲ್ಲೂ ಬಿಗಿ: ಜಿಲ್ಲೆಯ ಶಹಾಬಾದ್‌ ನಗರ, ಸೇಡಂ, ಜೇವರ್ಗಿ, ಚಿಂಚೋಳಿ, ಕಮಲಾಪುರ, ವಾಡಿ, ಆಳಂದ, ಅಫಜಲಪುರ, ಯಡ್ರಾಮಿ ಸೇರಿದಂತೆ ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಬಿಗಿ ಬಂದೋ ಬಸ್ತ್‌ ಕೈಗೊಳ್ಳಲಾಗಿದೆ.

ದಿನದಿಂದ ದಿನಕ್ಕೆ ಸೋಂಕಿತರು ಹಾಗೂ ಸಾವಿನ ಸಂಖ್ಯೆ ತೀವ್ರವಾದ ಕಾರಣ ಗ್ರಾಮೀಣ ಪ್ರದೇಶದಲ್ಲೂ ಕೋವಿಡ್‌ ಭಯ ಮನೆ ಮಾಡಿದೆ. ಹೀಗಾಗಿ ಹಳ್ಳಿಗಳ ಜನ ಕೂಡ ಮನೆ ಬಿಟ್ಟು ಹೊರಬರದೇ ಲಾಕ್‌ಡೌನ್‌ಗೆ ಸಹಕರಿಸಿದ್ದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.