ಕಾಳಗಿ: ಇಲ್ಲಿನ ಪಟ್ಟಣ ಪಂಚಾಯಿತಿ ಸಾರ್ವತ್ರಿಕ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಜು.11ರಂದು ರಾಜ್ಯಪತ್ರದಲ್ಲಿ ಪ್ರಕಟಿಸಿ ಘೋಷಣೆ ಮಾಡಿದೆ. ಜಿಲ್ಲಾಧಿಕಾರಿ ಜು.29ರಂದು ಅಧಿಸೂಚನೆ ಹೊರಡಿಸಲಿದ್ದಾರೆ. ಈ ನಿಮಿತ್ತ ಮತದಾರರ ಪಟ್ಟಿ ಸೇರಿದಂತೆ ಚುನಾವಣೆಗೆ ಸಂಬಂಧಪಟ್ಟ ಸಿದ್ಧತೆಗಳು ಮಾಡಿಕೊಳ್ಳಲಾಗುತ್ತಿದೆ ಎಂದು ತಹಶೀಲ್ದಾರ್ ಪೃಥ್ವಿರಾಜ ಪಾಟೀಲ ತಿಳಿಸಿದ್ದಾರೆ.
ಕಾಳಗಿ ಅಧಿಕೃತ ತಾಲ್ಲೂಕು ಎಂದು 2018 ಮಾರ್ಚ್ 10 ರಂದು ಘೋಷಣೆಯಾದ ನಂತರ 2019 ಜುಲೈ 29ರಂದು ಕಾಳಗಿ ಪಟ್ಟಣ ಪಂಚಾಯಿತಿ ಅಸ್ತಿತ್ವಕ್ಕೆ ಬಂದಿದೆ. ಈ ಮೊದಲು 2015ರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ (ಡೊಣ್ಣೂರ ಸೇರಿ) 8 ವಾರ್ಡ್‌ನ ಒಟ್ಟು 26 ಸದಸ್ಯರೇ ಪಟ್ಟಣ ಪಂಚಾಯಿತಿ ಪ್ರತಿನಿಧಿಗಳಾಗಿ 2020ರವರೆಗೆ ಮುಂದುವರಿದಿದ್ದರು. ಇವರ ಅಧಿಕಾರ ಅವಧಿ 2020ಕ್ಕೆ ಮುಗಿದರೂ, ಚುನಾವಣೆ ನಡೆದಿರಲಿಲ್ಲ. ಈವರೆಗೆ (5ವರ್ಷ) ಕೇವಲ ಮುಖ್ಯಾಧಿಕಾರಿ, ತಹಶೀಲ್ದಾರ್ ಆಡಳಿತ ಜಾರಿಯಲ್ಲಿತ್ತು. 10 ವರ್ಷಗಳ ಬಳಿಕ ಸ್ಥಳೀಯ ಮೊದಲ ಸಾರ್ವತ್ರಿಕ ಚುನಾವಣೆಗೆ ಹಸಿರು ನಿಶಾನೆ ದೊರೆತಿದೆ.
ಡೊಣ್ಣೂರ ಹೊರತುಪಡಿಸಿ ಕಾಳಗಿ ಪಟ್ಟಣ ಹಾಗೂ ಲಕ್ಷ್ಮಣನಾಯಕ ತಾಂಡಾ, ಸುಬ್ಬುನಾಯಕ ತಾಂಡಾ, ನಾಮುನಾಯಕ ತಾಂಡಾ, ಚಿಕ್ಕಂಡಿ ತಾಂಡಾ, ಕರೆಕಲ್ ತಾಂಡಾ, ದೇವಿಕಲ್ ತಾಂಡಾ ಒಳಗೊಂಡು 2011ರ ಜನಗಣತಿ ಪ್ರಕಾರ ಒಟ್ಟು 11ವಾರ್ಡ್‌ಳನ್ನು ರಚಿಸಲಾಗಿದೆ. ಪ್ರತಿ ವಾರ್ಡ್‌ಗೆ ಒಂದರಂತೆ 11 ಸ್ಥಾನಗಳ ಮೀಸಲಾತಿ ಪ್ರಕಟಿಸಲಾಗಿದೆ.
ಇದೇ ಮೀಸಲಾತಿ ಹಾಗೂ ವಾರ್ಡ್ ಅನ್ವಯ ಆಗಸ್ಟ್ 17 ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಆಗಸ್ಟ್ 5 ಕೊನೆ ದಿನವಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಆಕಾಂಕ್ಷಿಗಳ ಚಲನ ವಲನ ಹೆಚ್ಚಾಗಿದೆ.
ವಾರ್ಡ್‌ವಾರು ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ. ಈ ಕಾರ್ಯ ಮೂರುದಿನಗಳಲ್ಲಿ ಮುಗಿಸಿ ನೋಟಿಸ್ ಬೋರ್ಡಿಗೆ ಹಾಕಲಾಗುವುದು. ವೀಕ್ಷಣೆಗೆ ಒಂದುವಾರ ಕಾಲಾವಕಾಶ ನೀಡಿ ನಂತರದಲ್ಲಿ ಮತದಾರರ ಪಟ್ಟಿ ಅಂತಿಮಗೊಳಿಸಲಾಗುವುದು.ಪೃಥ್ವಿರಾಜ ಪಾಟೀಲ ತಹಶೀಲ್ದಾರ್ ಕಾಳಗಿ
ಮೀಸಲಾತಿ ವಿವರ ವಾರ್ಡ್ ಸಂಖ್ಯೆ;ಪ್ರಾದೇಶಿಕ ಕ್ಷೇತ್ರ;ಮೀಸಲಾತಿ 1;ಇಳಿಗೇರ ಗಲ್ಲಿ;ಸಾಮಾನ್ಯ 2;ಮಲ್ಲಿಕಾರ್ಜುನ ಗುಡಿ ಏರಿಯಾ;ಸಾಮಾನ್ಯ 3; ಕಾಳಿಕಾದೇವಿ ಗುಡಿ ಏರಿಯಾ;ಸಾಮಾನ್ಯ (ಮಹಿಳೆ) 4; ಕುರುಬರ ಗಲ್ಲಿ;ಪರಿಶಿಷ್ಟ ಪಂಗಡ 5;ಬಸವೇಶ್ವರ ಗುಡಿ ಏರಿಯಾ;ಸಾಮಾನ್ಯ 6;ಬೇಗರ ಗಲ್ಲಿ;ಸಾಮಾನ್ಯ (ಮಹಿಳೆ) 7;ರಾಮನಗರ;ಪರಿಶಿಷ್ಟ ಜಾತಿ 8;ಪೊಲೀಸ್ ಸ್ಟೇಷನ್ ಏರಿಯಾ;ಸಾಮಾನ್ಯ (ಮಹಿಳೆ) 9;ಲಕ್ಷ್ಮಣನಾಯಕ ಮತ್ತು ಸುಬ್ಬುನಾಯಕ ತಾಂಡಾ;ಪರಿಶಿಷ್ಟ ಜಾತಿ (ಮಹಿಳೆ) 10;ನಾಮುನಾಯಕ ಮತ್ತು ಚಿಕ್ಕಂಡಿತಾಂಡಾ;ಪರಿಶಿಷ್ಟ ಜಾತಿ 11;ಕರೆಕಲ್ ಮತ್ತು ದೇವಿಕಲ್ ತಾಂಡಾ;ಪರಿಶಿಷ್ಟ ಜಾತಿ (ಮಹಿಳೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.