ADVERTISEMENT

ಕಲ್ಯಾಣ ಕರ್ನಾಟಕದ 30 ಸಾವಿರ ಹುದ್ದೆ ಭರ್ತಿ:ಡಾ.ಶರಣಪ್ರಕಾಶ್ ಪಾಟೀಲ

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 7:45 IST
Last Updated 28 ಫೆಬ್ರುವರಿ 2026, 7:45 IST
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಜಯದೇವ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಚಿಕಿತ್ಸೆಗೆ ಬಂದಿದ್ದ ವೃದ್ಧನನ್ನು ಮಾತನಾಡಿಸಿದರು. ಡಾ.ವೀರೇಶ ಪಾಟೀಲ, ಡಾ.ಅರುಣಕುಮಾರ್ ಹರಿದಾಸ್ ಸೇರಿದಂತೆ ಇತರರು ಈ ಸಂದರ್ಭದಲ್ಲಿದ್ದರು
–ಪ್ರಜಾವಾಣಿ ಚಿತ್ರ
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಜಯದೇವ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಚಿಕಿತ್ಸೆಗೆ ಬಂದಿದ್ದ ವೃದ್ಧನನ್ನು ಮಾತನಾಡಿಸಿದರು. ಡಾ.ವೀರೇಶ ಪಾಟೀಲ, ಡಾ.ಅರುಣಕುಮಾರ್ ಹರಿದಾಸ್ ಸೇರಿದಂತೆ ಇತರರು ಈ ಸಂದರ್ಭದಲ್ಲಿದ್ದರು –ಪ್ರಜಾವಾಣಿ ಚಿತ್ರ    

ಕಲಬುರಗಿ: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 53 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡಿದ್ದು, ಅದರಲ್ಲಿ 30 ಸಾವಿರ ಹುದ್ದೆಗಳು ಕಲ್ಯಾಣ ಕರ್ನಾಟಕಕ್ಕೇ ಸಿಗಲಿವೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ ತಿಳಿಸಿದರು.

ನಗರದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಂದು ತಿಂಗಳಲ್ಲಿ ನೇಮಕಾತಿ ಅಧಿಸೂಚನೆ ಹೊರಬೀಳಲಿದ್ದು, ಮುಂದಿನ ಆರು ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಒಳ ಮೀಸಲಾತಿಗೆ ಸಂಬಂಧಿಸಿದ ಗೊಂದಲ ಇದ್ದುದರಿಂದ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿತ್ತು. ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 2 ಸಾವಿರ ಹುದ್ದೆಗಳು ಖಾಲಿ ಇವೆ. ಅವುಗಳ ಭರ್ತಿಗೂ ಕ್ರಮ ಕೈಗೊಳ್ಳಲಾಗುವುದು. ಖಾಲಿ ಹುದ್ದೆಗಳನ್ನು ಸದ್ಯಕ್ಕೆ ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲಾಗಿದೆ’ ಎಂದರು.

‘ಕಲ್ಯಾಣ ಕರ್ನಾಟಕದಲ್ಲಿ ಈಗಾಗಲೇ ಐದು ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಮತ್ತೆ 5 ಸಾವಿರ ಹುದ್ದೆಗಳ ಭರ್ತಿ ನಡೆಯಲಿದೆ’ ಎಂದು ಡಾ.ಶರಣಪ್ರಕಾಶ್ ಮಾಹಿತಿ ನೀಡಿದರು. 

ADVERTISEMENT

ಕಲಬುರಗಿ ನಗರದಲ್ಲಿ ಕ್ಯಾನ್ಸರ್ ಆಸ್ಪತ್ರೆಗೆ ಹೆಚ್ಚುವರಿ ಹಾಸಿಗೆಗಳ ಅಳವಡಿಕೆ, ತೀವ್ರ‌ ನಿಗಾ ಘಟಕ, ಸುಟ್ಟ ಗಾಯಗಳ ಘಟಕ, ತಾಯಿ-ಮಕ್ಕಳ ಆಸ್ಪತ್ರೆ ಕಾಮಗಾರಿ ಭರದಿಂದ ಸಾಗಿವೆ. ಇದಲ್ಲದೆ ನಿಮ್ಹಾನ್ಸ್ ಶಾಖೆ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಡಯಾಬಿಟಾಲಜಿ ಇನ್‌ಸ್ಟಿಟ್ಯೂಟ್ ಸೇರಿದಂತೆ ಹಲವು ಆರೋಗ್ಯ ಕೇಂದ್ರಗಳನ್ನು ಸಹ ಸ್ಥಾಪಿಸಲಾಗುತ್ತಿದೆ ಎಂದರು.

ಜಯದೇವದಲ್ಲಿ ಆಸ್ಪತ್ರೆ ಪಡೆಯುವವರ ಸಂಖ್ಯೆ ದ್ವಿಗುಣ: ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ ಎಂದು ಸಚಿವರು ತಿಳಿಸಿದರು.

2025ನೇ ಸಾಲಿನಲ್ಲಿ ಆಸ್ಪತ್ರೆಯಲ್ಲಿ ಒಪಿಡಿ (ಹೊರರೋಗಿ ವಿಭಾಗ) ತೋರಿಸಿಕೊಂಡವರು 1,27,656. 2024ರಲ್ಲಿ ಇದರ‌ ಸಂಖ್ಯೆ 66,761 ಇತ್ತು. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಇಸಿಜಿ 4,71,676 ಪರೀಕ್ಷೆಗಳನ್ನು ನಡೆಸಲಾಗಿದೆ. 2ಡಿ ಎಕೊ ಪರೀಕ್ಷೆಗಳ ಸಂಖ್ಯೆ ಕೂಡ 3 ಲಕ್ಷದ ಗಡಿಯನ್ನು ತಲುಪಿದೆ. ಆಸ್ಪತ್ರೆ ಆರಂಭವಾಗಿನಿಂದ ಇಲ್ಲಿಯವರೆಗೆ (2016–2025) 10 ವರ್ಷಗಳ ಅವಧಿಯಲ್ಲಿ ಓಪಿಡಿ ಚಿಕಿತ್ಸೆ ಪಡೆದವರು 6,68,865. 4,71,676‌ ಜನ ಇಸಿಜಿ ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಭಾರ ಅಧೀಕ್ಷಕ ಡಾ. ವೀರೇಶ್ ಪಾಟೀಲ, ವೈದ್ಯ ಡಾ.ಅರುಣಕುಮಾರ್ ಹರಿದಾಸ್, ಲೈಸನ್ ಅಧಿಕಾರಿ ಸಂತೋಷ್ ಉಪಸ್ಥಿತರಿದ್ದರು.

ಪ್ರಸ್ತುತ ಜಯದೇವ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞರು ಸ್ಟಾಫ್ ನರ್ಸ್ ಡಿ ಗ್ರೂಪ್ ಸಿಬ್ಬಂದಿ ಸೇರಿದಂತೆ 310 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತೆ ಐವರು ಹೃದ್ರೋಗ ತಜ್ಞರನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ
ಡಾ.ಶರಣಪ್ರಕಾಶ್ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವ

‘ಕಲಬುರಗಿ ಮೇಲೆ ಕೇಂದ್ರ ಸರ್ಕಾರದ ದ್ವೇಷ’ ಕಲಬುರಗಿಯು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕ್ಷೇತ್ರ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ ಎಂದು ಸಚಿವ ಡಾ.ಶರಣಪ್ರಕಾಶ್ ಪಾಟೀಲ ಆರೋಪಿಸಿದರು.

ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಹೆಜ್ಜೆ ಹೆಜ್ಜೆಗೂ ಕಲಬುರಗಿ ಪ್ರಗತಿಗೆ ಅಡ್ಡಿಯಾಗುತ್ತಿದ್ದು ಕಲಬುರಗಿ–ಬೆಂಗಳೂರು ಮಧ್ಯೆ ಸಂಚರಿಸುತ್ತಿದ್ದ ವಿಮಾನವನ್ನು ಸ್ಥಗಿತಗೊಳಿಸುವ ಮೂಲಕ ಹೀನ ರಾಜಕಾರಣಕ್ಕೆ ಮುಂದಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರ‌ ವಿಶೇಷ ಆಸಕ್ತಿಯಿಂದ ರಾಜ್ಯ ಸರ್ಕಾರವೇ ಸಂಪೂರ್ಣ ಅನುದಾನ ಭರಿಸಿ 700 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಸೌಲಭ್ಯದೊಂದಿಗೆ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಕೇಂದ್ರ ಸರ್ಕಾರವು ತಾರತಮ್ಯ ಧೋರಣೆ ಬಿಟ್ಟು ವಿಮಾನ ಸಂಚಾರ ಆರಂಭಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.