
ಕಲ್ಯಾಣ ಕರ್ನಾಟಕ ಚಿತ್ರ ಸಂತೆಗೆ ಚಾಲನೆ ನೀಡಿದ ಶರಣಬಸವ ವಿ.ವಿ. ಕುಲಾಧಿಪತಿ ದಾಕ್ಷಾಯಣಿ ಎಸ್.ಅಪ್ಪ ಅವರು ಕಲಾಕೃತಿಗಳನ್ನು ವೀಕ್ಷಿಸಿದರು.
ಕಲಬುರಗಿ: ಶತಮಾನಗಳಿಂದಲೂ ಚಿತ್ರಕಲೆಯಲ್ಲಿ ಹೆಸರು ಮಾಡಿರುವ ಕಲಬುರಗಿ ಜಿಲ್ಲೆಯಲ್ಲಿ ಚಿತ್ರಕಲಾವಿದರಿಗೆ ಬರವಿಲ್ಲ. ತಮ್ಮ ಪ್ರತಿಭೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಉದ್ದೇಶದಿಂದ ನಗರದ ಪಬ್ಲಿಕ್ ಗಾರ್ಡನ್ ಸಮೀಪದ ಇಂದಿರಾ ಗಾಜಿನಮನೆಯ ಆವರಣದಲ್ಲಿ ಕಲ್ಯಾಣ ಕರ್ನಾಟಕದ ಸುಮಾರು 75 ಕಲಾವಿದರು ತಂದಿದ್ದ ಸಾವಿರಾರು ಚಿತ್ರಗಳನ್ನು ಮಂಗಳವಾರ ಸಾರ್ವಜನಿಕರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರಸಂತೆಯಲ್ಲಿ ಚಿತ್ರ ನೋಡುವುದಷ್ಟೇ ಅಲ್ಲದೇ ಒಂಟೆ, ಕುದುರೆ ಮೇಲೆ ಕುಳಿತುಕೊಳ್ಳುವ, ನೆಚ್ಚಿನ ಹಾಡುಗಳನ್ನು ಕೇಳುವ ಅವಕಾಶವನ್ನೂ ಸಂಘಟಕರು ಕಲ್ಪಿಸಿದ್ದರು.
ಡೆಕ್ಕನ್ ಆರ್ಟ್ ಸೊಸೈಟಿ, ರೇಶ್ಮಿ ಎಜುಕೇಶನಲ್ ಅಂಡ್ ಚಾರಿಟಬಲ್ ಟ್ರಸ್ಟ್, ಕಲಾನಮನ ಟ್ರಸ್ಟ್, ಆಲ್ ಅಮೀನ್ ಎಜುಕೇಶನ್ ಸೊಸೈಟಿ, ಇಂಡಿಯನ್ ರಾಯಲ್ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್, ಸ್ನೇಹ ಲಲಿತಕಲಾ ಬಳಗ, ಜನಕಲ್ಯಾಣ ಚಾರಿಟಬಲ್ ಟ್ರಸ್ಟ್, ಆರ್ಟ್ ಗ್ಯಾಲರಿ 200, ಫನ್ ಅಕಾಡೆಮಿ, ಎನ್.ಕೆ.ಆರ್ಟ್ ಅಂಡ್ ಕಲ್ಚರಲ್ ಸೊಸೈಟಿ, ನೀಲಾ ಆರ್ಟ್ಸ್ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಮೊದಲನೇ ಕಲ್ಯಾಣ ಕರ್ನಾಟಕ ಚಿತ್ರಸಂತೆಯನ್ನು ಆಯೋಜಿಸಲಾಗಿತ್ತು.
ನದಿ, ಬೆಟ್ಟ, ಕೋಟೆಗಳು, ಭಾವಚಿತ್ರಗಳು ಸೇರಿದಂತೆ ಮನಕ್ಕೆ ಮುದನೀಡುವ ಚಿತ್ರಗಳು ಅಲ್ಲಿ ಅನಾವರಣಗೊಂಡಿದ್ದವು. ಹಲವು ಪೇಂಟಿಂಗ್‌ಗಳು ಮಾರಾಟಕ್ಕೂ ಲಭ್ಯವಿದ್ದವು. ಮುಖದ ಮೇಲೆ ಚಿತ್ರ ಬಿಡಿಸಿಕೊಳ್ಳಲು ಯುವಕ, ಯುವತಿಯರು ಸಾಲಿನಲ್ಲಿ ನಿಂತಿದ್ದರು.
ಮುಖ್ಯ ಅತಿಥಿಯಾಗಿದ್ದ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂದೆ, ಮುಂದಿನ ಬಾರಿ ಇಂತಹ ಕಾರ್ಯಕ್ರಮಗಳಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳಿಗೆ ಪಾಲಿಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕಲ್ಯಾಣದಲ್ಲಿ ಪ್ರತಿಭಾವಂತ ಚಿತ್ರ ಕಲಾವಿದರಿದ್ದು ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಮಾತ್ರ ಕಲಾವಿದರು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ. ಇಂತಹ ಚಿತ್ರಸಂತೆ ಮೂಲಕ ಅಂಥವರನ್ನು ಗುರುತಿಸಿ ಬೆಳೆಸಬೇಕು.ದಾಕ್ಷಾಯಣಿ ಎಸ್.ಅಪ್ಪ, ಶರಣಬಸವ ವಿ.ವಿ. ಕುಲಾಧಿಪತಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವೇಂದ್ರ ತೋಟ್ನಳ್ಳಿ, ‘ಎಲ್ಲಾ ಜಿಲ್ಲೆಗಳ ಕಲಾವಿದರನ್ನು ಒಳಗೊಂಡು ಮೊದಲ ಬಾರಿಗೆ ಆಯೋಜಿಸಲಾದ ಕಲ್ಯಾಣ ಕರ್ನಾಟಕ ಚಿತ್ರಸಂತೆಗೆ ಅತ್ಯುತ್ತಮ ಪ್ರತಿಕ್ರಿಯೆ ಪಡೆದಿದೆ. ಒಂದು ದಿನದ ಈ ಕಲಾ ಕಾರ್ಯಕ್ರಮದಲ್ಲಿ 70ಕ್ಕೂ ಹೆಚ್ಚು ಮಳಿಗೆಗಳು ಹಾಗೂ ಸುಮಾರು ಸಾವಿರಕ್ಕೂ ಹೆಚ್ಚು ಕಲಾಕೃತಿಗಳು ಪ್ರದರ್ಶನಗೊಂಡವು’ ಎಂದರು.
ಚಿತ್ರಸಂತೆಯ ಆಯೋಜಕರಾದ ಶಾಹೇದ್ ಪಾಶಾ, ಸುಬ್ಬಯ್ಯ ನೀಲಾ, ರಾಜಶೇಖರ ಶಾಮಣ್ಣ, ಬಸವರಾಜ ಕಲೆಗಾರ್, ಮೊಹಮ್ಮದ್ ಆಯಾಜುದ್ದೀನ್ ಪಟೇಲ್, ರೆಹಮಾನ್ ಪಟೇಲ್, ಶರಣು ಪಟ್ಟಣಶೆಟ್ಟಿ, ರಾಮಗಿರಿ ಪೊಲೀಸ್ ಪಾಟೀಲ್, ರಾಜಶೇಖರ ಶಾಮಣ್ಣ, ರೆಹಮಾನ್ ಪಟೇಲ್, ನಾರಾಯಣ ಜೋಶಿ, ಮೀನಾಕ್ಷಿ ಗುತ್ತೇದಾರ, ಅಂಬಯ್ಯ ಗುತ್ತೇದಾರ, ರಾಜಶೇಖರ, ಭಾಗ್ಯಶ್ರೀ ಕುಲಕರ್ಣಿ, ಶಿಲ್ಪಾ ನರೋಣ ಇತರರಿದ್ದರು. ಕಾವೇರಿ ಹಿರೇಮಠ ಪ್ರಾರ್ಥಿಸಿದರು.
ಚಿಂತಕ ಪ್ರೊ.ಆರ್.ಕೆ.ಹುಡಗಿ, ಹಿರಿಯ ವೈದ್ಯ ಡಾ.ಎಸ್.ಎಸ್.ಗುಬ್ಬಿ, ಲಲಿತಕಲಾ ಅಕಾಡೆಮಿ ಸದಸ್ಯ ಬಸವರಾಜ ಜಾನೆ, ಕಲಾವಿದೆ ಮಂಜುಳಾ ಜಾನೆ, ಅಂದಾನಿ ಫೈನ್ ಆರ್ಟ್ ಕಾಲೇಜಿನ ಉಪನ್ಯಾಸಕ ಚಂದ್ರಹಾಸ ವೈ. ಜಾಲಿಹಾಳ, ಅಶೋಕ ಶೆಟಕಾರ, ಬಿ.ಎನ್.ಪಾಟೀಲ ಇತರರು ಚಿತ್ರಗಳನ್ನು ವೀಕ್ಷಿಸಿದರು.
ಶರಣಬಸವ ವಿಶ್ವವಿದ್ಯಾಲಯದ ದೃಶ್ಯಕಲಾ ವಿದ್ಯಾರ್ಥಿಗಳು, ಇಂಡಿಯನ್ ರಾಯಲ್ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್ ಹಾಗೂ ಎಂಎಂಕೆ ದೃಶ್ಯಕಲಾ ಕಾಲೇಜಿನ ವಿದ್ಯಾರ್ಥಿಗಳ ಕಲಾಕೃತಿಗಳು ಜನರ ಗಮನ ಸೆಳೆದವು.
ವಿವಿಧ ಶಾಲೆಗಳ ಸುಮಾರು 300 ವಿದ್ಯಾರ್ಥಿಗಳು ಸ್ಥಳದಲ್ಲೇ ನಡೆದ ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡಲಾಯಿತು.
ವಿಭಿನ್ನ ಪ್ರಕಾರದ ಕಲಾಕೃತಿಗಳು
ಚಿತ್ರಸಂತೆಯಲ್ಲಿ ಜಲವರ್ಣ ಆಕ್ರಿಲಿಕ್ ಮಧುಬನಿ ತೈಲವರ್ಣ ಡಿಜಿಟಲ್ ಪೇಂಟಿಂಗ್ ಫೋಟೊಗ್ರಫಿ ಸೇರಿ ನಾನಾ ಪ್ರಕಾರದ ಕಲಾಕೃತಿಗಳು ಗಮನಸೆಳೆದವು. ಸುಬ್ಬಯ್ಯ ಎಂ. ನೀಲಾ ಅವರು ಚಿತ್ರಿಸಿದ ಶರಣಬಸವೇಶ್ವರರ ಪವಾಡಗಳ ಬೃಹತ್ ಕಲಾಕೃತಿಗಳು ಕಲಾವಿದರಾದ ಮೀನಾಕ್ಷಿ ಗುತ್ತೇದಾರ ಗೋಪಾಲ ಅವರ ಪರಿಸರದ ಚಿತ್ರಗಳು ಗಮನ ಸೆಳೆದವು. ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ಬಿಡಿಸಿದ ಚಿತ್ರಗಳು ರಾಧಾಕೃಷ್ಣ ಕಲ್ಯಾಣದ ಚರಿತ್ರೆ ಬುದ್ಧ ಬಸವ ಅಂಬೇಡ್ಕರ್ ಬಹಮನಿ ಕೋಟೆ ಶರಣಬಸವೇಶ್ವರ ದೇವಸ್ಥಾನ ಖಾಜಾ ಬಂದಾನವಾಜ್ ದರ್ಗಾದ ಗುಮ್ಮಟಗಳು ರಾಷ್ಟ್ರಪಿತರ ಚಿತ್ರಗಳು ಕಲಾ ಮಳಿಗೆಯಲ್ಲಿ ಗಮನ ಸೆಳೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.