ADVERTISEMENT

ಕಲಬುರಗಿ|ಪ್ರತ್ಯೇಕ ಸಚಿವಾಲಯಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ: ನನಸಾದ ದಶಕಗಳ ಕನಸು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 6:24 IST
Last Updated 17 ಸೆಪ್ಟೆಂಬರ್ 2025, 6:24 IST
ಕಲಬುರಗಿಯ ಕೆಕೆಆರ್‌ಡಿಬಿ ಕಚೇರಿ
ಕಲಬುರಗಿಯ ಕೆಕೆಆರ್‌ಡಿಬಿ ಕಚೇರಿ   

ಕಲಬುರಗಿ: 371 (ಜೆ) ಕಲಂ ಜಾರಿಯಾದ ಪರಿಣಾಮ ವಾರ್ಷಿಕ ಸಾವಿರಾರು ಕೋಟಿ ರೂಪಾಯಿ ಅನುದಾನ ಇದ್ದರೂ ನೇಮಕಾತಿ, ಮುಂಬಡ್ತಿ, ಯಾವ ಕ್ಷೇತ್ರಕ್ಕೆ ಅನುದಾನ ಹಂಚಿಕೆ ಮಾಡಬೇಕು ಎಂಬುದು ಸೇರಿದಂತೆ ಹಲವು ವಿಚಾರಗಳ ಕುರಿತು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಇದ್ದ ಅಡ್ಡಿಯು ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ರಚಿಸುವ ತೀರ್ಮಾನ ಕೈಗೊಳ್ಳುವ ಮೂಲಕ ನಿವಾರಣೆಯಾದಂತಾಗಿದೆ.

ಕಳೆದ ವರ್ಷ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಭಾಗವಹಿಸಲು ನಗರಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬೇಡಿಕೆಗೆ ಪ್ರತಿಕ್ರಿಯಿಸಿ ಪ್ರತ್ಯೇಕ ಸಚಿವಾಲಯ ರಚಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ಬೆಂಗಳೂರಿನಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಸಚಿವಾಲಯ ರಚನೆಗೆ ಅನುಮೋದನೆ ನೀಡಲಾಗಿದ್ದು, ಬುಧವಾರ ನಡೆಯುವ ‘ಕಲ್ಯಾಣ ಕರ್ನಾಟಕ ಉತ್ಸವ’ದ ಸಂದರ್ಭದಲ್ಲಿ ‘ಕಲ್ಯಾಣ’ಕ್ಕೆ ವಿಶೇಷ ಕೊಡುಗೆ ನೀಡಿದಂತಾಗಿದೆ.  

ಇದಕ್ಕಾಗಿ ದಶಕಗಳಿಂದಲೂ ಹೋರಾಟ ನಡೆಯುತ್ತಿತ್ತು. ಈ ಭಾಗದ ಏಳು ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು ಪ್ರಸ್ತುತ ರಾಜ್ಯ ಸರ್ಕಾರದ ಯೋಜನೆ, ಸಾಂಖ್ಯಿಕ ಇಲಾಖೆಯ ಅಧೀನದಲ್ಲಿ ಬರುತ್ತಿತ್ತು. ಇದೀಗ ಪ್ರತ್ಯೇಕ ಸಚಿವಾಲಯವಾಗಲಿದೆ. 

ADVERTISEMENT

ಸಚಿವಾಲಯಕ್ಕೆ ಒಬ್ಬರು ಹೆಚ್ಚುವರಿ ಕಾರ್ಯದರ್ಶಿ, ಮುಖ್ಯ ಎಂಜಿನಿಯರ್, ಎಲ್ಲ ಏಳು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತದೆ.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಗಾಗಿ ಕೆಲಸಗಳನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮತ್ತು ಅಭಿವೃದ್ಧಿ ಕಾಮಗಾರಿಗಳ ಮೇಲುಸ್ತುವಾರಿ ಮಾಡಲು ಸಚಿವಾಲಯವು ಹೆಚ್ಚಿನ ಇಂಬು ನೀಡಲಿದ್ದು, ಈ ಭಾಗದವರು ತಮ್ಮ ಕೆಲಸಗಳಿಗಾಗಿ ಬೆಂಗಳೂರಿಗೆ ಅಲೆಯುವುದು ತಪ್ಪುತ್ತದೆ ಎಂದು ನಂಬಲಾಗುತ್ತಿದೆ. 

ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಪ್ರತ್ಯೇಕ ಸಚಿವಾಲಯದ ಬೇಡಿಕೆಯು ತೀವ್ರವಾಗಿತ್ತು. ಅವರೂ ಸಚಿವಾಲಯದ ಭರವಸೆ ನೀಡಿದ್ದರಾದರೂ ಅದು ಹುಸಿಯಾಗಿತ್ತು. ನಂತರ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಅವರ ಮುಂದೆಯೂ ಈ ಬೇಡಿಕೆ ಇರಿಸಲಾಗಿತ್ತು. ಅವರೂ ಈಡೇರಿಸಿರಲಿಲ್ಲ. ಅಂತಿಮವಾಗಿ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯು ತೀರ್ಮಾನ ಕೈಗೊಂಡಿದೆ.

ಪ್ರತ್ಯೇಕ ಸಚಿವಾಲಯ: ಯಾರು ಏನೆಂದರು?

ಸಚಿವಾಲಯ ಸ್ಥಾಪನೆಯಾಗಿರುವುದರಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಮತ್ತಷ್ಟು ಅಭಿವೃದ್ಧಿಗೆ ಸಾಧ್ಯವಾಗಲಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಕಾಮಗಾರಿಗಳನ್ನು ಸಕಾಲದಲ್ಲಿ ಪೂರೈಸುವ ಸಲುವಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯ 7 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಗೆ ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸುವ ಮೂಲಕ ಈ ಕಚೇರಿಗಳನ್ನು ಮತ್ತಷ್ಟು ಬಲಪಡಿಸಲೂ ಸಚಿವ ಸಂಪುಟ ನಿರ್ಧಾರ ತೆಗೆದುಕೊಂಡಿದೆ.
ಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ
ಕಳೆದ ವರ್ಷ ಮುಖ್ಯಮಂತ್ರಿ ಅವರು ಪ್ರತ್ಯೇಕ ಸಚಿವಾಲಯ ರಚಿಸುವ ಭರವಸೆ ನೀಡಿದ್ದರು. ಅದನ್ನು ಈಗ ಈಡೇರಿಸಿದ್ದಾರೆ. ಇದರಿಂದಾಗಿ ಈ ಭಾಗದಲ್ಲಿ ಅಭಿವೃದ್ಧಿ ಚಟುವಟಿಕೆಗಳು ವೇಗ ಪಡೆದುಕೊಳ್ಳಲಿವೆ. ನೀತಿ ನಿರೂಪಣೆಗಳನ್ನು ಸಚಿವಾಲಯವೇ ಸ್ವತಂತ್ರವಾಗಿ ತೆಗೆದುಕೊಳ್ಳಲಿದೆ. ನಮ್ಮ ಸರ್ಕಾರ ಈ ಭಾಗದ ಜನತೆಗೆ ಮಹತ್ವದ ಕೊಡುಗೆ ನೀಡಿದಂತಾಗಿದೆ.
ಡಾ.ಅಜಯ್ ಸಿಂಗ್ ಅಧ್ಯಕ್ಷ ಕೆಕೆಆರ್‌ಡಿಬಿ
ಪ್ರತ್ಯೇಕ ಸಚಿವಾಲಯವು ಸ್ವಾಗತಾರ್ಹ ಕ್ರಮ. ನಮ್ಮ ಜಿಲ್ಲಾ ಕೇಂದ್ರಗಳಷ್ಟೇ ಅಲ್ಲದೇ ಅತ್ಯಂತ ಕುಗ್ರಾಮಗಳ ಸಮಸ್ಯೆಗಳ ಬಗ್ಗೆಯೂ ಸಚಿವಾಲಯದ ಮುಖ್ಯಸ್ಥರು ಗಮನ ಹರಿಸಲು ಸಾಧ್ಯವಾಗಲಿದೆ. ಶಾಲೆ ಅಂಗನವಾಡಿ ಆರೋಗ್ಯ ಕೇಂದ್ರಗಳು ಆಂಬುಲೆನ್ಸ್‌ನಂತಹ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಲು ಸಾಧ್ಯವಾಗುತ್ತದೆ. ಮಾನವ ಅಭಿವೃದ್ಧಿ ಪ್ರಾದೇಶಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಗಟ್ಟಿಯಾದ ಕಾರ್ಯ ಯೋಜನೆ ರೂಪಿಸಬೇಕು. ಸಚಿವಾಲಯಕ್ಕೆ ಘೋಷಣೆಯಾಗುವ ಅನುದಾನ ಸಕಾಲಕ್ಕೆ ಬಿಡುಗಡೆಯಾಗಬೇಕು. ವಿವಿಧ ಇಲಾಖೆಗಳನ್ನೊಳಗೊಂಡ ತಜ್ಞರ ಸಮಿತಿ ಮೇಲ್ವಿಚಾರಣಾ ಸಮಿತಿ ಹಾಗೂ ಕಾಮಗಾರಿಗಳು ಅನುಷ್ಠಾನಗೊಂಡ ಬಗ್ಗೆ ಪರಿಶೀಲನಾ ಸಮಿತಿಯನ್ನು ರಚಿಸಬೇಕು. 
ಸಂಗೀತಾ ಕಟ್ಟಿಮನಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸದಸ್ಯೆ
ಸರ್ಕಾರದ ಈ ತೀರ್ಮಾನವನ್ನು ಕೆಕೆಸಿಸಿಐ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ. ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪೂರಕ ನಿರ್ಧಾರವನ್ನು ಕೈಗೊಳ್ಳಬೇಕು. ಇಷ್ಟಾಗಿಯೂ ಅಭಿವೃದ್ಧಿ ಆಗದಿದ್ದರೆ ಪ್ರತ್ಯೇಕ ರಾಜ್ಯದ ಹೋರಾಟವನ್ನು ಪ್ರಾರಂಭಿಸುವುದು ಅನಿವಾರ್ಯವಾಗುತ್ತದೆ.
ಶರಣಬಸಪ್ಪ ಪಪ್ಪಾ ಕೆಕೆಸಿಸಿಐ ಅಧ್ಯಕ್ಷ
ಪ್ರತ್ಯೇಕ ಸಚಿವಾಲಯ ರಚಿಸುವ ತೀರ್ಮಾನವನ್ನು ಕೈಗೊಳ್ಳುವ ಮೂಲಕ ಸರ್ಕಾರ ನಮ್ಮ ದಶಕಗಳ ಬೇಡಿಕೆಗೆ ಸ್ಪಂದಿಸಿದಂತಾಗಿದೆ. ಇದರಿಂದಾಗಿ ಪ್ರತಿಯೊಂದು ಕೆಲಸಕ್ಕೂ ಬೆಂಗಳೂರಿಗೆ ಅಲೆಯುವುದು ತಪ್ಪುತ್ತದೆ. ನೀರಾವರಿ ಕೈಗಾರಿಕೆಗೆ ಸಂಬಂಧಿಸಿದ ಬೇಡಿಕೆಗಳಿಗೆ ಮುಖ್ಯಮಂತ್ರಿ ಸ್ಪಂದಿಸಬಹುದು. 371 (ಜೆ)ಗೆ ಸಂಬಂಧಿಸಿದಂತೆ ಸಚಿವಾಲಯವೇ ಸ್ವತಂತ್ರವಾಗಿ ಸುತ್ತೋಲೆಗಳನ್ನು ಹೊರಡಿಸಬಹುದು. 
ಲಕ್ಷ್ಮಣ ದಸ್ತಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ
ಯಾವಾಗಲೋ ಆಗಬೇಕಿದ್ದ ಘೋಷಣೆ 371 (ಜೆ) ಕಲಂ ಜಾರಿಗೆ ಬಂದ 15 ವರ್ಷಗಳ ಬಳಿಕವಾದರೂ ಆಗುತ್ತಿರುವುದು ಸ್ವಾಗತಾರ್ಹ. ಇದರೊಂದಿಗೆ ಉದ್ಯೋಗ ಸೃಷ್ಟಿಗೂ ಸರ್ಕಾರ ಆದ್ಯತೆ ನೀಡಬೇಕು. ಜಿಲ್ಲೆಯವರೇ ಆದ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿಯಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ಆರಂಭಿಸಬೇಕು.
ಸುನೀಲ ಕುಲಕರ್ಣಿ ಸಂಚಾಲಕ ಕಲ್ಯಾಣ ಕರ್ನಾಟಕ ಗ್ರಾಹಕ ವೇದಿಕೆ

ಪ್ರಯೋಜನಗಳೇನು?

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರದಲ್ಲಿ ಬಾಕಿ ಇರುವ ಅನುಮೋದನೆಗಳನ್ನು ಸಚಿವಾಲಯದ ಮೂಲಕ ಕೊಡಿಸಬಹುದು. ಸಚಿವಾಲಯವನ್ನು ಸ್ವತಂತ್ರವಾಗಿ ನಡೆಸಲು ಅಗತ್ಯವಿರುವ ಅಧಿಕಾರಿಗಳು ಸಿಬ್ಬಂದಿಯ ಹುದ್ದೆಗಳನ್ನು ಸೃಜಿಸಬಹುದು. ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇದಕ್ಕಾಗಿಯೇ ಪ್ರತ್ಯೇಕ ವಿಭಾಗವನ್ನು ರಚಿಸಬಹುದು. ಶಿಕ್ಷಣ ಆರೋಗ್ಯ ರಸ್ತೆ ಕುಡಿಯುವ ನೀರು ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅಭಿವೃದ್ಧಿ ಯೋಜನೆಗಳನ್ನು ಸಚಿವಾಲಯದ ಮುಖ್ಯಸ್ಥರೇ ಕೈಗೊಳ್ಳಬಹುದು. ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಸಚಿವಾಲಯದ ಸಚಿವರು ಮುಖ್ಯ ಕಾರ್ಯದರ್ಶಿ ಗೃಹ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಮಾಲೋಚನೆ ನಡೆಸಬಹುದು. ದಶಕಗಳಿಂದ ಬಾಕಿ ಉಳಿದಿರುವ ಕಲ್ಯಾಣ ಕರ್ನಾಟಕ ವೃಂದದ ಅಧಿಕಾರಿ ನೌಕರರಿಗೆ ಮುಂಬಡ್ತಿ ವರ್ಗಾವಣೆಗೆ ಸಂಬಂಧಿಸಿದ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು. ಸ್ವತಂತ್ರವಾಗಿ ಸುತ್ತೋಲೆಗಳನ್ನು ಹೊರಡಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.