ADVERTISEMENT

ಕಲ್ಯಾಣ ಕರ್ನಾಟಕ ಉತ್ಸವ: ರಸ್ತೆ ಮಧ್ಯದಲ್ಲೇ ಸ್ವಾಗತ ‌ಕಮಾನು! 

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 7:42 IST
Last Updated 25 ಫೆಬ್ರುವರಿ 2023, 7:42 IST
   

ಕಲಬುರಗಿ: ಕಲ್ಯಾಣ ಕರ್ನಾಟಕ ‌ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯು ಆಯೋಜಿಸಿರುವ ಕಲ್ಯಾಣ ‌ಕರ್ನಾಟಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ನಾಳೆ (ಫೆ 26) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸಲಿದ್ದು, ಅವರ ಸ್ವಾಗತಕ್ಕಾಗಿ ಸೇಡಂ ರಸ್ತೆಯ ಮಧ್ಯದಲ್ಲೇ ಸ್ವಾಗತ ಕಮಾನುಗಳನ್ನು ಅಳವಡಿಸಲಾಗಿದೆ!

ಇದರಿಂದಾಗಿ ವಾಹನ ಸವಾರರಿಗೆ ಕಿರಿಕಿರಿಯಾಗಿದ್ದು, ಸರಾಗ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಹಿಂದೆಯೂ‌ ನಗರಕ್ಕೆ ಗಣ್ಯರು ಭೇಟಿ ನೀಡಿದಾಗ ಸ್ವಾಗತ ಕಮಾನುಗಳನ್ನು ಅಳವಡಿಸಲಾಗಿತ್ತು. ಆದರೆ, ರಸ್ತೆ ಮಧ್ಯದಲ್ಲಿ ಕಬ್ಬಿಣದ ಕಂಬ ಅಳವಡಿಸಿದ್ದು ಇದೇ ಮೊದಲು ಎಂದು ವಾಹನ ಸವಾರರು 'ಪ್ರಜಾವಾಣಿ'ಗೆ ಕರೆ ಮಾಡಿ ಆರೋಪಿಸಿದರು.

ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರ ಬೆಂಬಲಿಗರು ಈಗಾಗಲೇ ನಗರದಲ್ಲಿ ಹಲವೆಡೆ ಭಾರಿ ಗಾತ್ರದ ಬ್ಯಾನರ್‌ಗಳನ್ನು ರಸ್ತೆ ವಿಭಜಕದ ವಿದ್ಯುತ್ ಕಂಬಕ್ಕೆ ಅಳವಡಿಸಿದ್ದಾರೆ. ರಸ್ತೆಯ ಎರಡೂ ಬದಿಗೆ ಆ ಬ್ಯಾನರ್ ಹರಡಿಕೊಂಡಿದೆ. ಆದರೂ ವಾಹನ ಸವಾರರು ಅವುಗಳನ್ನು ತಪ್ಪಿಸಿಕೊಂಡು ಹೋಗುತ್ತಿದ್ದಾರೆ. ಅಂಥದರಲ್ಲಿ ಏಕಾಏಕಿ ಬೃಹತ್ ಸ್ವಾಗತ ಕಮಾನುಗಳನ್ನು ರಸ್ತೆ ಮಧ್ಯದಲ್ಲಿ ಅಳವಡಿಸಿದರೆ ಹೇಗೆ? ಮಹಾನಗರ ಪಾಲಿಕೆ, ಪೊಲೀಸರು ಕಂಡೂ ಕಾಣದಂತೆ ಸುಮ್ಮನಿರುವುದೇಕೆ ಎಂದು ವಾಹನ ಸವಾರ ಗುರುರಾಜ ಚವ್ಹಾಣ ಪ್ರಶ್ನಿಸಿದರು.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಜಾಲತಾಣ ವಿಭಾಗದ ಮುಖಂಡ ಭೀಮನಗೌಡ ಪರಗೊಂಡ, ಯಾವುದೇ ಬ್ಯಾನರ್ ಅಳವಡಿಸಬೇಕೆಂದರೆ ಮಹಾನಗರ ಪಾಲಿಕೆಯ ಅನುಮತಿ ಪಡೆಯಬೇಕು. ಜನರಿಗೆ ತೊಂದರೆಯಾಗುವಂತೆ ಸ್ವಾಗತ ಕಮಾನು ಅಳವಡಿಸಲು ಅವಕಾಶ ನೀಡಿದವರು ಯಾರು ಎಂದು ಪ್ರಶ್ನಿಸಿದರು.

ಶುಕ್ರವಾರ ಆರಂಭವಾಗಿರುವ ಕಲ್ಯಾಣ ಕರ್ನಾಟಕ ಉತ್ಸವ ನಗರದ ಹೊರವಲಯದ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.