
ಕಮಲಾಪುರ: ಬೀದರ್‌ನ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದಿಂದ ಹಮ್ಮಿಕೊಂಡಿರುವ ‘ಕಲ್ಯಾಣ ನಡಿಗೆ ಮತ್ತು ಹರಳಯ್ಯ ಜ್ಯೋತಿಯಾತ್ರೆ’ ಮಂಗಳವಾರ ಕಮಲಾಪುರ ತಲುಪಿದ್ದು, ಸಂಜೆ ಅವರು ಪ್ರದರ್ಶಿಸಿದ ಕಲ್ಯಾಣ ಕ್ರಾಂತಿ ನಾಟಕ ಜನಮನ ಸೆಳೆಯಿತು.
ಬಳ್ಳಾರಿಯ ಧಾತ್ರಿ ರಂಗ ಸಂಸ್ಥೆಯ ಕಲಾ ತಂಡದಿಂದ ಪ್ರದರ್ಶನಗೊಂಡ ಈ ನಾಟಕ ನೋಡುಗರ ಮೈನವಿರೇಳಿಸಿತು. ಬಸವಾದಿ ಶರಣರು ಮಾಡಿರುವ ತ್ಯಾಗ–ಬಲಿದಾನಗಳ ಜೊತೆಗೆ ಅವರ ಸಂದೇಶಗಳ ದರ್ಶನವಾಯಿತು. ಬೆಳಿಗ್ಗೆ ಜ್ಯೋತಿ ಯಾತ್ರೆಗೆ ಪಟ್ಟಣದ ಮಹಿಳೆಯರು, ಮುಖಂಡರು ಆರತಿ ಬೆಳಗಿ, ಪೂಜೆ ಸಲ್ಲಿಸಿ ಸ್ವಾಗತಿಸಿದರು.
ಮಧ್ಯಾಹ್ನ 2 ಗಂಟೆಗೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳೊಂದಿಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಹಾಗೂ ನೈತಿಕ ಮೌಲ್ಯಗಳ ಕುರಿತು ಸಂವಾದ ನಡೆಯಿತು. ವಿದ್ಯಾರ್ಥಿಗಳಿಗೆ ಬಸವಣ್ಣನವರ ‘ವಚನ ಸುಧೆ’ ಎಂಬ ಕಿರುಹೊತ್ತಿಗೆ ಉಚಿತವಾಗಿ ವಿತರಿಸಲಾಯಿತು.
ಕಲ್ಯಾಣ ನಡಿಗೆಯ ನೇತೃತ್ವದ ವಹಿಸಿರುವ ಬಸವಕುಮಾರ ಪಾಟೀಲ ಮಾತನಾಡಿ, ‘ಶರಣ ಹರಳಯ್ಯ–ಕಲ್ಯಾಣಮ್ಮ ದಂಪತಿ ಚಮ್ಮಾವುಗೆಗಳಿರುವ ಸೇಡಂ ತಾಲ್ಲೂಕಿನ ಬಿಜನಳ್ಳಿ ಗ್ರಾಮ ಬಸವಕಲ್ಯಾಣದ ತ್ರಿಪುರಾಂತ ಕೆರೆ ಸಮಗ್ರ ಅಭಿವೃದ್ಧಿ ಆಗಬೇಕೆಂಬ ಸದಾಶಯದೊಂದಿಗೆ ನಮ್ಮ ಬಯಕೆಯಾಗಿದೆ’ ಎಂದರು.
ಶಾಸಕ ಬಸವರಾಜ ಮತ್ತಿಮಡು, ಮಾಜಿ ಸಚಿವ ರೇವುನಾಯಕ ಬೆಳಮಗಿ, ಹಿರಿಯ ಮುಖಂಡರಾದ ಸುಭಾಷ ಬಿರಾದಾರ, ಬಸವರಾಜ ಮಾಲಿ ಪಾಟೀಲ, ರಾಜಕುಮಾರ ಕೋಟಿ, ಗುರು ಮಾಟೂರ, ಅಶೋಕ ಸುಗೂರ, ರಾಮಕೃಷ್ಣ ಖಡಕೆ, ಪಂಡರಿ ಬಾಳೂರೆ, ನಾಗಯ್ಯ ಸ್ವಾಮಿ ಮುಧೋಳ, ಶಂಕರಲಿಂಗ ಸ್ವಾಮೀಜಿ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.