ADVERTISEMENT

ಕಮಲಾಪುರ ಹೊರವಲಯದಲ್ಲಿ ಭೀಕರ ಅಪಘಾತ: ಪುತ್ರಿಯ ರಕ್ಷಿಸಿ ಬೆಂಕಿಯಲ್ಲಿ ಬೆಂದ ದಂಪತಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 1:45 IST
Last Updated 7 ಜೂನ್ 2022, 1:45 IST
ಕಲಬುರಗಿ ಜಿಲ್ಲೆಯ ಕಮಲಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಸಾವಿಗೀಡಾದ ಕುಟುಂಬಸ್ಥರ ರೋಧನ –ಪ್ರಜಾವಾಣಿ ಚಿತ್ರ
ಕಲಬುರಗಿ ಜಿಲ್ಲೆಯ ಕಮಲಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಸಾವಿಗೀಡಾದ ಕುಟುಂಬಸ್ಥರ ರೋಧನ –ಪ್ರಜಾವಾಣಿ ಚಿತ್ರ   

ಕಲಬುರಗಿ: ಬೀದರ್–ಶ್ರೀರಂಗಪಟ್ಟಣ ಹೆದ್ದಾರಿಯ ಕಮಲಾಪುರದ ಹೊರವಲಯದಲ್ಲಿ ಸಂಭವಿಸಿದ ಸರಕು ಸಾಗಣೆ ವಾಹನ ಮತ್ತು ಖಾಸಗಿ ಬಸ್‌ ಅಪಘಾತದಲ್ಲಿ ಮಗಳನ್ನು ರಕ್ಷಿಸಿದ ದಂಪತಿ ಬೆಂಕಿಯಲ್ಲಿ ಸುಟ್ಟು ಕರಕಲಾದರು.

ಜಿ.ಅರ್ಜುನ ಕುಮಾರ್ ಮತ್ತು ಸರಳಾದೇವಿ ಅರ್ಜುನ ಮೃತಪಟ್ಟವರು. ಪುತ್ರಿ ಪ್ರಣತಿಯನ್ನು ಬಸ್‌ನಿಂದ ಹೊರಹಾಕಿ ಅಪಾಯದಿಂದ ಪಾರು ಮಾಡಿದ ದಂಪತಿಗೆ ಪುತ್ರ ವಿವಾನಗೆ ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ.

‘ಬೆಳಿಗ್ಗೆ 6.30ರ ಸುಮಾರಿಗೆ ಸರಕುಸಾಗಣೆ ವಾಹನಕ್ಕೆ ಡಿಕ್ಕಿ ಹೊಡೆದು, ಸೇತುವೆಯ ಬದಿಯ ಹಳ್ಳದಲ್ಲಿ ಬಸ್ ಬಿತ್ತು. ಭಾರೀ ಶಬ್ಧ ಕೇಳಿಸುತ್ತಿದ್ದಂತೆ ಸುತ್ತಲಿನವರು ಓಡಿ ಬಂದು ಬೆಂಕಿಯ ಕೆನ್ನಾಲಿಗೆಯನ್ನೂ ಲೆಕ್ಕಿಸದೇ ಕೆಲವರು ಪ್ರಯಾಣಿಕರ ರಕ್ಷಣೆಗೆ ಮುಂದಾದರು. ಬೆಂಕಿಯ ತೀವ್ರತೆ ಹೆಚ್ಚಾದ ಕಾರಣ ಕೆಲವರು ಹಿಂದೆ ಸರಿದರು’ ಎಂದು ಸ್ಥಳೀಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ನಾನು ಬೆಳಿಗ್ಗೆ ನೀರು ಪೂರೈಕೆ ಘಟಕಕ್ಕೆ ಬಂದಾಗ, ಭಾರಿ ಶಬ್ದ ಕೇಳಿಸಿತು. ಸೇತುವೆ ಕೆಳಗಡೆ ಹಳ್ಳಕ್ಕೆ ಬಿದ್ದ ಬಸ್‌ಗೆ ಹೊತ್ತಿಕೊಂಡಿತ್ತು. ಹಿಂಬದಿಯಿಂದ ಪ್ರಯಾಣಿಕರು ಗಾಜು ಹೊಡೆದು ಹೊರ ಬರುತ್ತಿದ್ದರು. ಸ್ಥಳಕ್ಕೆ ಹೋಗಿ, ಇಬ್ಬರನ್ನು ಪಾರು ಮಾಡಿದೆ. ಬೆಂಕಿ ಕೆನ್ನಾಲೆ ಹೆಚ್ಚಾದಂತೆ ಒಳಗಿದ್ದವರ ಚೀರಾಟ ಜೋರಾಯಿತು. ಮತ್ತೆ ಇಬ್ಬರನ್ನು ಹೊರ ಎಳೆದೆವು. ದಂಪತಿಯೊಬ್ಬರು ಮಗಳನ್ನು ಎತ್ತಿ ಹೊರ ಕೊಟ್ಟರು. ಅವರನ್ನೂ ಹೊರ ತರುವಷ್ಟರಲ್ಲಿ ಬೆಂಕಿ ಎಲ್ಲಾ ಕಡೆ ವ್ಯಾಪಿಸಿತು’ ಎಂದು ಪ್ರತ್ಯಕ್ಷದರ್ಶಿ ಜೀವನ್ ತಿಳಿಸಿದರು.

‘ಬಾಳಿ ಬದುಕಬೇಕಾದವರು ಕಣ್ಣೆದುರೇ ಬಸ್‌ನಲ್ಲಿ ಸುಟ್ಟು ಹೋಗಿದ್ದು ಕಂಡು ತುಂಬಾ ದುಃಖ ಆಗುತ್ತಿದೆ. ಅಂಗಡಿ ತೆರೆಯಲು ಮನಸ್ಸು ಒಪ್ಪುತ್ತಿಲ್ಲ. ಎಲ್ಲವೂ ಕಣ್ಣಿಗೆ ಕಟ್ಟಿದಂತಿದೆ’ ಎಂದು ಚಹಾ ಮಳಿಗೆಯ ಮಹಿಳೆ ನಿರ್ಮಲಾ ಮಾನೆ ಅವರು ತಿಳಿಸಿದರು.

ದುಃಖ ತಡೆಯದ ಸ್ನೇಹಿತರು, ಸಂಬಂಧಿಗಳು

ಅವಘಡದ ಸುದ್ದಿ ತಿಳಿದು ಸ್ಥಳಕ್ಕೆ ಬಂದು ಸ್ನೇಹಿತರು ಸುಟ್ಟು ಕರಕಲಾಗಿ ಬಸ್ ಕಿಟಕಿ, ಬೂದಿ ಅಡಿ, ನೆಲದ ಮೇಲೆ ಬಿದ್ದ ಮಾಂಸದ ಮುದ್ದೆಯಾದ ದೇಹಗಳ ಕಂಡು ಗದ್ಗದಿತರಾದರು. ಬಸ್ ಮುಂಭಾಗದ ಬಾಲಕನ ಅರೆಬೆಂದ ದೇಹ ನೋಡುತ್ತಿದ್ದಂತೆ ಅರ್ಜುನ ಕುಮಾರನ ಸ್ನೇಹಿತ ಪವನ್, ಮತ್ತು ಆನಂದ ಅವರ ಕಣ್ಣಾಲೆಗಳು ತುಂಬಿ ಬಂದವು.

ಮೃತರ ಮತ್ತು ಗಾಯಾಳುಗಳ ಬಗ್ಗೆ ಪೊಲೀಸರು, ಮಾಧ್ಯಮದವರು ಕೇಳಿತ್ತಿದ್ದ ಪ್ರಶ್ನೆಗಳಿಗೆ ಉಮ್ಮಳಿಸಿ ಬರುತ್ತದೆ ದುಃಖವನ್ನು ತಡೆದು ಭಾವುಕರಾಗಿ ಉತ್ತರಿಸಲು ಯತ್ನಿಸಿದ್ದು ಕಂಡುಬಂತು. ಕಟುಂಬಸ್ಥರು ಪರಸ್ಪರ ಅಪ್ಪಿಕೊಂಡು ಕಣ್ಣೀರಿಟ್ಟು ತಮಗೆ ತಾವೇ ಸಾಂತ್ವಾನ ಹೇಳಿಕೊಂಡಿದ್ದು ಅಲ್ಲಿದ್ದವರ ಮನಕಲಕುವಂತಿತ್ತು.

‘ರಕ್ಷಣೆಗೆ ಬಾರದೆ ಮೊಬೈಲ್ ವಿಡಿಯೊ’

‘ಬಸ್ ಒಳಗಿದ್ದ ಪ್ರಯಾಣಿಕರ ಚೀರಾಟ ಕೇಳಿ ಹೆದರಿಕೆಯಾಯಿತು. ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳನ್ನು ತಡೆದು ರಕ್ಷಣೆಗೆ ಬರುವಂತೆ ಪದೇ ಪದೇ ಕೋರಿದೆ.

ಆದರೆ, ಅವರ್‍ಯಾರು ಹತ್ತಿರ ಸುಳಿಯಲಿಲ್ಲ. ಅಲ್ಲಲ್ಲಿ ನಿಂತಿದ್ದ ಕೆಲವರು ಮೊಬೈಲ್‌ ವಿಡಿಯೊ ಮಾಡುವುದರಲ್ಲಿ ನಿರತವಾಗಿದ್ದರು. ಬೆಂಕಿಯಲ್ಲಿ ಸುಟ್ಟು ಹೋಗುತ್ತಿರುವವರ ಬಗ್ಗೆ ಅವರು ಸ್ವಲ್ಪವೂ ಕನಿಕರ ತೋರಲಿಲ್ಲ. ಇನ್ನಷ್ಟು ಜೀವ ಉಳಿಸಲು ಆಗಲಿಲ್ಲ ಎಂಬ ಬೇಸರದಿಂದ ಮನೆಗೆ ಹೋದೆ’ ಎಂದು ಜೀವನ್ ಅವರು ಬೆಂಕಿಯಿಂದ ಕೈಗಾದ ಗಾಯ ತೋರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.