
ಕಮಲಾಪುರ: ಸರ್ಕಾರಿ ಶಾಲೆಗಳ ಬಗ್ಗೆ ತಾತ್ಸಾರ ತೋರುವವರನ್ನು ಸರ್ಕಾರಿ ಶಾಲೆಗಳತ್ತ ಸೆಳೆದು ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವುದರ ಜತೆಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ರಾಜ್ಯ ಸರ್ಕಾರ ಮಂಜೂರು ಮಾಡಿದ್ದ ಕಮಲಾಪುರ ಕೆಪಿಎಸ್ ಶಾಲೆ ನಾಮಫಲಕಕ್ಕೆ ಮಾತ್ರ ಸೀಮಿತವಾಗಿದೆ.
ದಶಕದ ಹಿಂದೆ ಸಾವಿರಾರು ವಿದ್ಯಾರ್ಥಿಗಳಿದ್ದ ಈ ಪ್ರೌಢಶಾಲೆಯಲ್ಲಿ ಈಗ ಕೇವಲ 53 ವಿದ್ಯಾರ್ಥಿಗಳಿದ್ದಾರೆ. ಮಳೆಯಾದರೆ ಸಾಕು ಶಾಲೆ ಆವರಣ ಕೆರೆಯಂತಾಗಿ ತರಗತಿ ಕೋಣೆಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಸುತ್ತಲಿನ ಹತ್ತಾರು ಗ್ರಾಮಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಭವಿಷ್ಯ ರೂಪಿಸಿದ ಶಾಲೆಯ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ.
ಹಳೆಯ ವಿದ್ಯಾರ್ಥಿಗಳು ಶಾಲೆ ನೋಡಿ ಮಮ್ಮಲ ಮರುಗುತ್ತಿದ್ದಾರೆ. ಅವ್ಯವಸ್ಥೆ ಮನಗಂಡು ಈ ಶಾಲೆಗೆ ಮರುಜೀವ ನೀಡಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕು ಎನ್ನುವ ಉದ್ದೇಶದಿಂದ ಸ್ಥಳೀಯ ನಾಯಕರು, ಶಾಸಕರ ಪ್ರಯತ್ನದಿಂದ ಈ ಶಾಲೆಯನ್ನು 2022–2023ರಲ್ಲಿ ಕೆಪಿಎಸ್‌ಗೆ ಉನ್ನತೀಕರಿಸಲಾಗಿತ್ತು. ಆದರೆ, ಉದ್ದೇಶ ಮಾತ್ರ ಈಡೇರಿಲ್ಲ.
ಐದು ಕಿ.ಮೀ ವ್ಯಾಪ್ತಿಯ ಶಾಲೆಗಳನ್ನು ಕೆಪಿಎಸ್‌ನಲ್ಲಿ ವಿಲೀನಗೊಳಿಸಬೇಕು. ಆದರೆ, ಕಮಲಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು (ಬಾಲಕರ), ಸರ್ಕಾರಿ ಪ್ರೌಢಶಾಲೆ (ಬಾಲಕರ), ಸರ್ಕಾರಿ ಕನ್ಯಾ ಪ್ರೌಢಶಾಲೆ, ಪ್ರಾಯೋಗಿಕ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಕನ್ಯಾ ಪ್ರಾಥಮಿಕ ಶಾಲೆ, ಬೆಳಕೋಟಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಮಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉರ್ದು ಶಾಲೆಯನ್ನು ಮಾತ್ರ ವಿಲೀನಗೊಳಿಸಲಾಗಿದೆ. ಇನ್ನೂ ಕೆಲವು ಶಾಲೆಗಳು ಇದರ ವ್ಯಾಪ್ತಿಗೆ ಒಳಪಟ್ಟಿಲ್ಲ.
ಶಾಲೆಗೆ ಅಗತ್ಯ ಮೂಲಸೌಕರ್ಯಕ್ಕೆ ಸದ್ಯ ₹28 ಲಕ್ಷ ಅನುದಾನ ಬಿಡುಗಡೆಯಾಗಿದೆ. ಎಸ್‌ಡಿಎಂಸಿ ರಚನೆಯಾಗದ ಕಾರಣ ಈ ಹಣ ಬಳಸುವಂತಿಲ್ಲ. ಶಾಸಕರ ಅಧ್ಯಕ್ಷತೆಯಲ್ಲಿ ಆಗಬೇಕಾದ ಎಸ್‌ಡಿಎಂಸಿ ರಚನೆ ನನೆಗುದಿಗೆ ಬಿದ್ದಿದೆ. ಸದ್ಯ ಇರುವ ಕಟ್ಟಡದಲ್ಲಿ ನೆಲಹಾಸು, ಚಾವಣಿ ದುರಸ್ತಿ, ಬಣ್ಣ ಬಳಿಯುವುದಕ್ಕಾಗಿ ₹1.74 ಕೋಟಿ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಬಾಕಿ ಇದೆ.
ಪೂರ್ವ ಪ್ರಾಥಮಿಕದಿಂದ ಪಿಯುಸಿವರೆಗೆ ಒಂದೇ ಕ್ಯಾಂಪಸ್‌ನಲ್ಲಿ ಶಿಕ್ಷಣ ಒದಗಿಸಬೇಕು. ಶಾಲಾ ಆವರಣಕ್ಕೆ, ಅಗತ್ಯಕ್ಕೆ ತಕ್ಕಂತೆ ಕಟ್ಟಡಗಳನ್ನು ನಿರ್ಮಿಸಬೇಕು. ಶಾಲೆಗಳಿಗೆ ಮಕ್ಕಳನ್ನು ಕರೆದುಕೊಂಡು ಬರಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೆಪಿಎಸ್ ಶಾಲೆಗಳಲ್ಲಿ ಮಕ್ಕಳಿಗೆ ನೀಡಬೇಕು. ಎರಡು ವರ್ಷಕಳೆದರೂ ದಾಖಲಾತಿ ಸೇರಿದಂತೆ ಭೌತಿಕ, ಶೈಕ್ಷಣಿಕ ಯಾವೊಂದು ಕಾರ್ಯಗಳು ನಡೆದಿಲ್ಲ. ಮಂಜೂರಾದ ಶಾಲೆ ಕಾರ್ಯರೂಪಕ್ಕೆ ತರುವುದು ಗೊಂದಲದ ಗೂಡಾಗಿದೆ ಎಂದು ಶಿಕ್ಷಣ ಪ್ರೇಮಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ಇರುವ ಕಟ್ಟಡದ ದುರಸ್ತಿಗೆ ಹಣ ಮಂಜೂರು ಮಾಡಲಾಗಿದೆ. ಕೂಡಲೇ ಎಸ್‌ಡಿಎಂಸಿ ರಚನೆ ಮಾಡಿ ಅನುದಾನ ಬಳಕೆಗೆ ಕ್ರಮ ಕೈಗೊಳ್ಳಲಾಗುವುದು..ಬಸವರಾಜ ಮತ್ತಿಮಡು, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.