ADVERTISEMENT

ಇಂದು ಬಿಗಿ ಭದ್ರತೆಯಲ್ಲಿ ಕನ್ಹಯ್ಯಕುಮಾರ್‌ ಉಪನ್ಯಾಸ

ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಕುಲಪತಿ, ಕುಲಸಚಿವರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 21:01 IST
Last Updated 14 ಅಕ್ಟೋಬರ್ 2019, 21:01 IST
ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸಭೆಯ ಬಳಿಕ ಹಂಗಾಮಿ ಕುಲಪತಿ ಪ್ರೊ.ಪರಿಮಳಾ ಅಂಬೇಕರ್‌ ಅವರು ಕನ್ಹಯ್ಯಕುಮಾರ್‌ ಉಪನ್ಯಾಸಕ್ಕೆ ಅನುಮತಿ ನೀಡುವ ನಿರ್ಣಯ ಪ್ರಕಟಿಸಿದರು. ಡಾ.ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಪ್ರೊ.ಎಸ್‌.ಪಿ.ಮೇಲಕೇರಿ, ಕುಲಸಚಿವ ಪ್ರೊ.ಸಿ.ಸೋಮಶೇಖರ್‌, ಸಿಪಿಐ (ಎಂ) ಮುಖಂಡ ಮಾರುತಿ ಮಾನ್ಪಡೆ ಇದ್ದರು
ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸಭೆಯ ಬಳಿಕ ಹಂಗಾಮಿ ಕುಲಪತಿ ಪ್ರೊ.ಪರಿಮಳಾ ಅಂಬೇಕರ್‌ ಅವರು ಕನ್ಹಯ್ಯಕುಮಾರ್‌ ಉಪನ್ಯಾಸಕ್ಕೆ ಅನುಮತಿ ನೀಡುವ ನಿರ್ಣಯ ಪ್ರಕಟಿಸಿದರು. ಡಾ.ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಪ್ರೊ.ಎಸ್‌.ಪಿ.ಮೇಲಕೇರಿ, ಕುಲಸಚಿವ ಪ್ರೊ.ಸಿ.ಸೋಮಶೇಖರ್‌, ಸಿಪಿಐ (ಎಂ) ಮುಖಂಡ ಮಾರುತಿ ಮಾನ್ಪಡೆ ಇದ್ದರು   

ಕಲಬುರ್ಗಿ: ದೆಹಲಿಯ ಜವಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಕುಮಾರ್‌ ಇದೇ 15ರಂದು ಗುಲಬರ್ಗಾ ವಿ.ವಿ.ಯಲ್ಲಿ ಉಪನ್ಯಾಸ ನೀಡಲಿರುವ ಕಾರ್ಯಕ್ರಮಕ್ಕೆ ಶ್ರೀರಾಮಸೇನೆ ಬೆದರಿಕೆ ಒಡ್ಡಿರುವುದರಿಂದ ಹೆಚ್ಚಿನ ಪೊಲೀಸ್‌ ಭದ್ರತೆಯನ್ನು ಒದಗಿಸಲಾಗುತ್ತಿದೆ.

‘ಗುಲಬರ್ಗಾ ವಿ.ವಿ.ಯ ಡಾ.ಬಿ.ಆರ್‌.ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಆಯೋಜಿಸಿರುವ ಕಾರ್ಯಕ್ರಮ ರದ್ದುಗೊಳಿಸಬೇಕು. ಇಲ್ಲದಿದ್ದರೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಮುತ್ತಿಗೆ ಹಾಕುವುದಾಗಿ ಶ್ರೀರಾಮಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಿಕಾಂತ ಸ್ವಾದಿ ಅವರು ಬೆದರಿಕೆ ಹಾಕಿದ್ದಾರೆ. ಹೀಗಾಗಿ, ವಿಶ್ವವಿದ್ಯಾಲಯ ಠಾಣೆಯ ಪೊಲೀಸರಷ್ಟೇ ಅಲ್ಲದೇ ಕಮಿಷನರೇಟ್‌ ವ್ಯಾಪ್ತಿಯ ಬೇರೆ ಠಾಣೆಗಳ ಸಿಬ್ಬಂದಿಯನ್ನೂ ನಿಯೋಜಿಸುತ್ತಿದ್ದೇವೆ’ ಎಂದು ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ ‘ಪ್ರಜಾವಾಣಿ’ಗೆ ತಿಳಿಸಿದರು.

ಕನ್ಹಯ್ಯ ಉಪನ್ಯಾಸ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕೋ ಬೇಡವೋ ಎಂಬುದನ್ನು ಚರ್ಚಿಸಲು ಹಂಗಾಮಿ ಕುಲಪತಿ ಪ್ರೊ.ಪರಿಮಳಾ ಅಂಬೇಕರ್ ಅವರುಸೋಮವಾರ ಕರೆದಿದ್ದ ಸಿಂಡಿಕೇಟ್‌ ಸಭೆಗೆ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ನುಗ್ಗಲು ಯತ್ನಿಸಿದರು. ಕೂಡಲೇ ಎಚ್ಚೆತ್ತ ವಿಶ್ವವಿದ್ಯಾಲಯ ಠಾಣೆಯ ಪೊಲೀಸರು ಹೆಚ್ಚುವರಿ ಸಿಬ್ಬಂದಿಯನ್ನು ಕರೆಸಿಕೊಂಡರು. ಸಭೆ ಮುಕ್ತಾಯವಾದ ಬಳಿಕ ಕುಲಪತಿ ಉಪನ್ಯಾಸಕ್ಕೆ ಅನುಮತಿ ನೀಡುವ ನಿರ್ಣಯವನ್ನು ಪ್ರಕಟಿಸುವವರೆಗೂಖುದ್ದು ಪೊಲೀಸ್‌ ಇನ್‌ಸ್ಪೆಕ್ಟರ್‌ ಸಂಗಮನಾಥ ಹಿರೇಮಠ ಅವರೇ ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದರು.

ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯವೇ ಈ ಉಪನ್ಯಾಸ ಏರ್ಪಡಿಸಿದ್ದಕ್ಕೆ ಶ್ರೀರಾಮಸೇನೆ ಹಾಗೂ ಬಿಜೆಪಿ ಮುಖಂಡರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಸಂಘಟನೆಗಳ ಕಾರ್ಯಕರ್ತರು ಕಾರ್ಯಕ್ರಮ ತಡೆಯಲು ಯತ್ನಿಸುವ ಸಾಧ್ಯತೆ ಇರುವುದರಿಂದ ಡಾ.ಅಂಬೇಡ್ಕರ್‌ ಭವನದ ಸುತ್ತಮುತ್ತ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ ಎಂದು ಕಮಿಷನರ್‌ ನಾಗರಾಜ ತಿಳಿಸಿದರು.

**
ವಿ.ವಿ.ಯಿಂದಲೇ ಮೊದಲು ಉಪನ್ಯಾಸಕ್ಕೆ ಆಹ್ವಾನ ನೀಡಿದ್ದೆವು. ಆದರೆ ಸಿಂಡಿಕೇಟ್‌ ಸಭೆಯ ಬಳಿಕ ಅದನ್ನು ಖಾಸಗಿಯಾಗಿ ಆಯೋಜಿಸಲು ಅನುಮತಿ ನೀಡಲಾಗಿದೆ. ಹೀಗಾಗಿ, ನಾವು ಭಾಗವಹಿಸದಿರಲು ತೀರ್ಮಾನಿಸಿದ್ದೇವೆ.
‍ಪ್ರೊ.ಪರಿಮಳಾ ಅಂಬೇಕರ್‌, ಹಂಗಾಮಿ ಕುಲಪತಿ, ಗುಲಬರ್ಗಾ ವಿ.ವಿ.

**
‘ಸಾರ್ವಜನಿಕರು ಬಹಿಷ್ಕಾರ ಹಾಕಬೇಕು’
ಗುಲಬರ್ಗಾ ವಿಶ್ವವಿದ್ಯಾಲಯ ವಿಪರೀತವೆನ್ನುವಷ್ಟು ಒಂದು ಜಾತಿ ವ್ಯವಸ್ಥೆಯ ಪಾಶದಲ್ಲಿದೆ ಎನ್ನುವ ಆರೋಪವೀಗ ಸಾಬೀತಾಗಿದೆ ಎಂದು ಶ್ರೀರಾಮಸೇನೆ ರಾಜ್ಯ ಘಟಕದ ಅಧ್ಯಕ್ಷ, ಅಂದೋಲಾದ ಸಿದ್ಧಲಿಂಗ ಸ್ವಾಮೀಜಿ ಟೀಕಿಸಿದ್ದಾರೆ.

‘ಇಲ್ಲಿಯ ಕುಲಪತಿ ವಿಶ್ವವಿದ್ಯಾಲಯದ ಕುಲಪತಿಗಳಾಗದೇ ದೇಶ ವಿರೋಧಿ ಕುಲಪತಿಗಳ ಅಧಿಪತಿಗಳಾಗಿದ್ದಾರೆ ಎನ್ನುವುದಕ್ಕೆ ಕನ್ಹಯ್ಯಕುಮಾರ್ ಉಪನ್ಯಾಸ ಮಾಡಲು ಅನುಮತಿ ನೀಡಿದ್ದೇ ಸಾಕ್ಷಿ. ಇಂತಹ ಉಪನ್ಯಾಸಗಳಿಂದ ದೇಶದ್ರೋಹಿ ವಿಚಾರಗಳೇ ಬರುತ್ತವೆಯೇ ಹೊರತು ದೇಶಭಕ್ತಿ ಮೂಡುವುದಿಲ್ಲ. ಇಂತಹ ಸಭೆಗಳಿಗೆ ಸಾರ್ವಜನಿಕರು ಬಹಿಷ್ಕಾರ ಹಾಕಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.