ADVERTISEMENT

ಕಲಬುರಗಿ | ಬದುಕು ಬೆಳಗಿದ ಕನ್ನಡ: ಶರಣಪ್ಪ ಎಸ್‌.ಡಿ.

ಕಸಾಪ ಜಿಲ್ಲಾ ಸಮಿತಿಯಿಂದ ರಾಜ್ಯೋತ್ಸವ ಗೌರವ ಪುರಸ್ಕಾರ ಸಮಾರಂಭ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 5:26 IST
Last Updated 19 ನವೆಂಬರ್ 2025, 5:26 IST
ಕಲಬುರಗಿಯ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿ ಭಾನುವಾರ ಆಯೋಜಿಸಿದ್ದ ರಾಜ್ಯೋತ್ಸವ ಗೌರವ ಪುರಸ್ಕಾರ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು
ಕಲಬುರಗಿಯ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿ ಭಾನುವಾರ ಆಯೋಜಿಸಿದ್ದ ರಾಜ್ಯೋತ್ಸವ ಗೌರವ ಪುರಸ್ಕಾರ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಕಲಬುರಗಿ: ‘ಕನ್ನಡ ಹಾಗೂ ಶಿಕ್ಷಣದಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ’ ಎಂದು ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್‌.ಡಿ. ಹೇಳಿದರು.

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿ ಭಾನುವಾರ ಆಯೋಜಿಸಿದ್ದ ರಾಜ್ಯೋತ್ಸವ ಗೌರವ ಪುರಸ್ಕಾರ ಸಮಾರಂಭದಲ್ಲಿ ‘ಕನ್ನಡದ ಚಿನ್ನ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಗಡಿ ಅಂಚಿನ ಗ್ರಾಮದ ಸಾಮಾನ್ಯ ಕುಟುಂಬದಿಂದ ಬಂದ ನನಗೆ ಕನ್ನಡ ಹಾಗೂ ಶಿಕ್ಷಣ ದಾರಿ ತೋರಿವೆ. ಕನ್ನಡ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಶಾಂತಿ ಹಾಗೂ ಸಮಾಧಾನ ಈ ನೆಲದ ಅಂತಃಸತ್ವವಾಗಿದೆ. ಅದನ್ನು ಉಳಿಸಿ–ಬೆಳೆಸುವುದು ಎಲ್ಲರ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಕಸಾಪದ ಜೊತೆ ಕೈಜೋಡಿಸಬೇಕು. ಮಕ್ಕಳಿಗೆ ಕನ್ನಡ ಭಾಷೆಯ ಮೇಲೆ ಒಲುಮೆ ಬೆಳೆಸಬೇಕು’ ಎಂದರು.

ADVERTISEMENT

‘ಪೋಷಕರು ಮನೆಯಲ್ಲಿ ಮಕ್ಕಳ ಜೊತೆ ಸಮಯ ಕಳೆಯಬೇಕು. ಅಂಕ ಹಾಗೂ ಮನೆ ಪಾಠದ ಕುರಿತಾದ ಪ್ರಶ್ನೆಗಳನ್ನು ಅವರ ಮುಂದೆ ಇಡುವ ಮೂಲಕ ಒತ್ತಡದ ವಾತಾವರಣ ಸೃಷ್ಟಿಸಬಾರದು’ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಕರ್ನಾಟಕದವರು ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕ ಸೇವೆಗಳ ಪರೀಕ್ಷೆಯನ್ನು ಪಾಸು ಮಾಡುತ್ತಿರುವುದು ಸಂತಸದ ಸಂಗತಿ. ಕಲಬುರಗಿ ಜಿಲ್ಲೆಯವರೇ ಆದ ಶರಣಪ‍್ಪನವರು ಸಾಮಾನ್ಯ ಕುಟುಂಬದಿಂದ ಬಂದು ಸಾಧನೆ ಮಾಡಿದ್ದಾರೆ. ಜಿಲ್ಲೆಯ ಮಕ್ಕಳು ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು. ಅವರನ್ನು ‍ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಶ್ಲಾಘನೀಯ’ ಎಂದರು.

‘ಪ್ರತಿಯೊಬ್ಬರಲ್ಲಿಯೂ ‍ಪ್ರತಿಭೆ ಇರುತ್ತದೆ. ಪ್ರೋತ್ಸಾಹ ಸಿಕ್ಕಾಗ ಅದು ಹೊರಗೆ ಬರಲು ಸಾಧ್ಯ. ಇಂದು ಹೆಣ್ಣು ಮಕ್ಕಳಿಗೆ ಸಾಕಷ್ಟು ಅವಕಾಶಗಳು ಸಿಗುತ್ತಿವೆ. ಅವರೂ ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಕಸಾಪ ಜಿಲ್ಲಾ ಸಮಿತಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ‘ಅಧಿಕಾರಿಗಳ ಕನ್ನಡ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಇದೇ ಮೊದಲು. ನೆಲದ ಋಣ ತೀರಿಸುವುದು ಎಲ್ಲರ ಜವಾಬ್ದಾರಿ. ಕಸಾಪ ಆ ಕೆಲಸ ಮಾಡುತ್ತಿದೆ. ಇಲ್ಲಿಯವರೆಗೂ ವಿವಿಧ ಸಮ್ಮೇಳನಗಳನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸೂಫಿ ಸಾಹಿತ್ಯ ಸಮ್ಮೇಳನ ಹಾಗೂ ಪೊಲೀಸ್ ಸಾಹಿತ್ಯ ಸಮ್ಮೇಳನ ಮಾಡಲಾಗುವುದು’ ಎಂದರು.

ಸಾಹಿತಿಗಳಾದ ಎ.ಕೆ.ರಾಮೇಶ್ವರ, ಸ್ವಾಮಿರಾವ ಕುಲಕರ್ಣಿ, ಎಸ್‌.ಬಿ.ಹೊಸಮನಿ, ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಹಾಗೂ ಶರಣರಾಜ ಛಪ್ಪರಬಂದಿ ಹಾಜರಿದ್ದರು.

ಪ್ರತಿಯೊಬ್ಬರಲ್ಲಿಯೂ ಇದೆ ಪ್ರತಿಭೆ ಮುಂದಿನ ದಿನಗಳಲ್ಲಿ ಸೂಫಿ ಸಾಹಿತ್ಯ ಸಮ್ಮೇಳನ ಶಾಂತಿ ಈ ನೆಲದ ಅಂತಃಸತ್ವ

ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲಾ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಅನಿತಾ ಆರ್‌. ಭೀಮರಾವ ಟಿ.ಟಿ. ಜಗನ್ನಾಥ ಶೇಗಜಿ ರಾಜಶೇಖರ ಸಿರಿ ಭೀಮಣ್ಣ ಸಾಲಿ ಅಪ್ಪಾಸಾಹೇಬ ಗುಂಡೆ ಕುಪೇಂದ್ರ ಬರಗಾಲಿ ನಿಂಗಣ್ಣ ವಿಶ್ವಕರ್ಮ ವಿಶ್ವನಾಥ ಸ್ವಾಮಿ ರಮೇಶ ಡಿ.ಜೋಶಿ ಅಥರ್ ಮೋಯಿಜ್ ಅರುಣಕುಮಾರ ಲೋಯಾ ಹಣಮಂತರಾವ ಭೂಸನೂರ ಬಿ.ಎಸ್‌.ದೇಸಾಯಿ ಶರಣಕುಮಾರ ಕಂಠಿ ಹಾಗೂ ರೇಣುಕಾಚಾರ್ಯ ಸ್ಥಾವರಮಠ ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.