ADVERTISEMENT

230 ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ

ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕೊಟ್ಟೂರಿನ ಕುಸುಮಾ ಉಜ್ಜಿನಿಗೆ ₹ 25 ಸಾವಿರ ನಗದು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 14:39 IST
Last Updated 16 ಫೆಬ್ರುವರಿ 2020, 14:39 IST
ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿನಿ ಕುಸುಮಾ ಉಜ್ಜಿನಿ ಅವರಿಗೆ ಕಲಬುರ್ಗಿಯಲ್ಲಿ ಭಾನುವಾರ ಬಸವರಾಜ ಪಾಟೀಲ ಸೇಡಂ ಹಾಗೂ ಟಿ.ಎಸ್‌.ನಾಗಾಭರಣ ₹ 25 ಸಾವಿರ ಮೊತ್ತದ ಡಿ.ಡಿ. ಹಾಗೂ ಅಭಿನಂದನಾ ಪತ್ರ ನೀಡಿದರು
ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿನಿ ಕುಸುಮಾ ಉಜ್ಜಿನಿ ಅವರಿಗೆ ಕಲಬುರ್ಗಿಯಲ್ಲಿ ಭಾನುವಾರ ಬಸವರಾಜ ಪಾಟೀಲ ಸೇಡಂ ಹಾಗೂ ಟಿ.ಎಸ್‌.ನಾಗಾಭರಣ ₹ 25 ಸಾವಿರ ಮೊತ್ತದ ಡಿ.ಡಿ. ಹಾಗೂ ಅಭಿನಂದನಾ ಪತ್ರ ನೀಡಿದರು   

ಕಲಬುರ್ಗಿ: ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯನ್ನು ಕನ್ನಡ ಮಾಧ್ಯಮದಲ್ಲಿ ಓದಿ ಅತಿ ಹೆಚ್ಚು ಅಂಕ ಪಡೆದ ಕಲಬುರ್ಗಿ ವಿಭಾಗದ ಆರು ಜಿಲ್ಲೆಗಳ 230 ವಿದ್ಯಾರ್ಥಿಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದಲ್ಲಿ ಭಾನುವಾರ ನಗದು ಬಹುಮಾನ ನೀಡಲಾಯಿತು.

ಇಲ್ಲಿನ ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿನಿ ಕುಸುಮಾ ಉಜ್ಜಿನಿಗೆ ₹ 25 ಸಾವಿರ ನಗದು ಬಹುಮಾನ ನೀಡಲಾಯಿತು.

ಕಲಬುರ್ಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯಿಂದ ಬಂದಿದ್ದ ವಿದ್ಯಾರ್ಥಿಗಳಿಗೆ ತಾಲ್ಲೂಕುವಾರು ಪ್ರಥಮ ಬಹುಮಾನವಾಗಿ ₹ 10 ಸಾವಿರ, ದ್ವಿತೀಯ ₹ 9 ಸಾವಿರ ಹಾಗೂ ತೃತೀಯ ₹ 8 ಸಾವಿರ ಬಹುಮಾನ ಹಾಗೂ ಪ್ರಯಾಣ ವೆಚ್ಚವನ್ನು ಭರಿಸಲಾಯಿತು.

ADVERTISEMENT

‌ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಕಲ್ಯಾಣ ಕರ್ನಾಟಕ ಮಾನವ ಸಂಪ‍ನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ’ದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಮಾತನಾಡಿ, ‘ವಿದೇಶಿಯವರು ನಮ್ಮ ಮಕ್ಕಳಿಗೆ ಮೊಬೈಲ್‌ ಕೊಟ್ಟು ಹೊಸ ಆವಿಷ್ಕಾರಗಳು ನಡೆಯದಂತೆ ಹುನ್ನಾರ ನಡೆಸಿದ್ದಾರೆ. ಮೊದಲು ಜಗತ್ತಿನಲ್ಲಿ 100 ಸಂಶೋಧನೆಗಳು ನಡೆದರೆ ಅದರಲ್ಲಿ 75 ಸಂಶೋಧನೆಗಳು ಭಾರತೀಯರಿಂದಲೇ ನಡೆಯುತ್ತಿದ್ದವು. ಮೊಬೈಲ್‌ ಬಂದ ಬಳಿಕ ಆ ಪ್ರಮಾಣ 6ಕ್ಕೆ ಇಳಿದಿದೆ. ಇದು ಕಳವಳಕಾರಿ ವಿದ್ಯಮಾನ. ನಾವು ಸಮುದ್ರದ ಮೇಲ್ಭಾಗದಲ್ಲೇ ತೇಲಾಡುತ್ತಿದ್ದರೆ ಮೊಸಳೆಗಳು ನಮ್ಮನ್ನು ತಿಂದು ಬಿಡಬಹುದು. ಆಳಕ್ಕಿಳಿದರೆ ಮುತ್ತು ರತ್ನ ಸಿಗುತ್ತವೆ. ಹೊಸ ಸಂಶೋಧನೆಗಳತ್ತ ನಾವು ಗಮನ ಹರಿಸಬೇಕಿದೆ’ ಎಂದರು.

ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಮಾತನಾಡಿ, ‘ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗ ಸಿಗುವುದಿಲ್ಲ ಎಂಬ ನಂಬಿಕೆ ಹುಸಿಗೊಳಿಸುವಂತೆ ಕನ್ನಡ ಮಾಧ್ಯಮದಲ್ಲೇ ಓದಿದ ನನ್ನ ಮಗಳು ಪ್ರಸ್ತುತ ನಗರದ ಅಪ್ಪ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾಳೆ’ ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಪ್ರೊ. ಎಚ್‌.ಟಿ.ಪೋತೆ ಮಾತನಾಡಿ, ‘ಬರೀ ಉದ್ಯೋಗ ಪಡೆಯುವುದಕ್ಕಾಗಿ ನಾವು ಶಿಕ್ಷಣ ಪಡೆಯುತ್ತಿದ್ದೇವೆ ಹೊರತು ಜ್ಞಾನ ಕೇಂದ್ರೀಕರಿಸಿ ಶಿಕ್ಷಣ ಪಡೆದಿಲ್ಲ. ಕನ್ನಡ ಭಾಷೆ ಉಳಿಯುವುದು ಗ್ರಾಮೀಣ ಭಾಗದ ಜನರಿಂದಲೇ ಹೊರತು ಇಂಗ್ಲಿಷ್‌ ಮೋಹದ ನಗರದವರಿಂದ ಅಲ್ಲ’ ಎಂದರು.

ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ‘ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಗಡಿ ಭಾಗದ ಶಾಲೆಗಳಲ್ಲಿನ ಪರಿಸ್ಥಿತಿ ಉತ್ತಮ ಪಡಿಸಲು ಗಮನ ಹರಿಸಬೇಕಿದೆ. ಗಡಿ ಭಾಗದಲ್ಲಿ ಶುದ್ಧ ಕನ್ನಡ ಎಂಬುದು ಮರೀಚಿಕೆಯಾಗಿದ್ದು, ಪಠ್ಯದ ಕನ್ನಡವನ್ನು ಆಡುಭಾಷೆಯಲ್ಲಿ ಆ ಮಕ್ಕಳಿಗೆ ವಿವರಿಸಿ ಹೇಳಬೇಕಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ, ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ, ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಕಾರ್ಯದರ್ಶಿ ಡಾ.ಮುರಳಿಧರ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ ಇದ್ದರು.

ತಂತ್ರಜ್ಞಾನ ಭಾಷಾಜ್ಞಾನವಾಗಲಿ: ನಾಗಾಭರಣ

‘ತಂತ್ರಜ್ಞಾನ ಭಾಷಾಜ್ಞಾನವಾಗಿ ಅಭಿವೃದ್ಧಿಯಾಗಬೇಕು. ಆಗ ಮಾತ್ರ ಕನ್ನಡ ಭಾಷೆ ಉಳಿಯಲಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಅಭಿ‍ಪ್ರಾಯಪಟ್ಟರು.

‘ನಮ್ಮ ಹೃದಯಕ್ಕೆ ಹತ್ತಿರವಾದ ಅಂಶಗಳು ಭಾಷೆಯ ಮೂಲಕ ನಮಗೆ ತಿಳಿಯುತ್ತವೆ. ನಮ್ಮ ಭಾಷೆಯ ಗಟ್ಟಿತನವನ್ನು ಮಾಡಿಕೊಂಡರೆ ಬೇರೆ ಭಾಷೆಯವರೊಂದಿಗೆ ನಿರರ್ಗಳವಾಗಿ ಮಾತನಾಡಬಹುದು. ಸಂವಹನ ಮಾಧ್ಯಮವಾಗಿ ಇಂಗ್ಲಿಷ್‌ ಅನಿವಾರ್ಯ. ಆದರೆ, ಅದೇ ಮುಖ್ಯವಾಗಬಾರದು. ಈ ನಿಟ್ಟಿನಲ್ಲಿ ಅಗತ್ಯವಿರುವ ತಂತ್ರಜ್ಞಾನವನ್ನು ಭಾಷೆಯ ದೃಷ್ಟಿಯಿಂದ ಬೆಳೆಸುವ ಉದ್ದೇಶ ಆಗಬೇಕು’ ಎಂದರು.

‘ಪೋಷಕರು ಒಪ್ಪಿದ ಮಾಧ್ಯಮದಲ್ಲಿಯೇ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ. ಹಾಗಾಗಿ, ಪೋಷಕರ ಆಯ್ಕೆ ಕನ್ನಡವಾಗಿರಬೇಕು. ಆಯಾ ರಾಜ್ಯಗಳಲ್ಲಿನ ಕಲಿಕಾ ಮಾಧ್ಯಮವನ್ನೇ ಕಡ್ಡಾಯ ಮಾಡುವಂತೆ ಸುಪ್ರೀಂಕೋರ್ಟ್‌ ಮೊರೆ ಹೋಗಲು ಆಗುವುದಿಲ್ಲ. ಏಕೆಂದರೆ ಕೋರ್ಟ್‌ ಒಮ್ಮತದ ಮೇರೆಗೆ ಈ ತೀರ್ಪು ನೀಡಿದೆ’ ಎಂದರು.

ಸಂವಿಧಾನಕ್ಕೆ ತಿದ್ದುಪಡಿಯೊಂದೇ ಉಳಿದಿರುವ ಮಾರ್ಗವಾಗಿದೆ. ವಿವಿಧ ರಾಜ್ಯಗಳ ಎಲ್ಲ ಮುಖ್ಯಮಂತ್ರಿಗಳು ಒಂದೆಡೆ ಸೇರಿ ಈ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಕೆಲವೇ ದಿನಗಳಲ್ಲಿ ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹೆಚ್ಚಿನ ವಿವರ ನೀಡುವರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.