ADVERTISEMENT

ಕಲಬುರಗಿ | ಯುವ ಸಾಹಿತ್ಯ ಸಮ್ಮೇಳನ 27ರಂದು: ವಿಜಯಕುಮಾರ ಪಾಟೀಲ

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 5:12 IST
Last Updated 24 ಜುಲೈ 2025, 5:12 IST
ವಿಜಯಕುಮಾರ ಪಾಟೀಲ ತೇಗಲತಿಪ್ಪಿ
ವಿಜಯಕುಮಾರ ಪಾಟೀಲ ತೇಗಲತಿಪ್ಪಿ   

ಕಲಬುರಗಿ: ‘ಜಿಲ್ಲೆಯ ಯುವ ಬರಹಗಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದಿಂದ ಜುಲೈ 27ರಂದು 2ನೇ ಯುವ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ’ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.

‘ಪರೋಪಕಾರಿ ಲಿಂ. ಸಂತೋಷಕುಮಾರ ಇಂಗಿನಶೆಟ್ಟಿ ವೇದಿಕೆಯಡಿ ನಡೆಯುವ ಸಮ್ಮೇಳನದ ಅಧ್ಯಕ್ಷರನ್ನಾಗಿ ಸೇಡಂನ ಸಾಹಿತಿ ಜಗನ್ನಾಥ ತರನಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಅರುಣಕುಮಾರ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ನಗರದ ಕನ್ನಡ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಅಂದು ಬೆಳಿಗ್ಗೆ 9.15ಕ್ಕೆ ಜಿಲ್ಲಾಧಿಕಾರಿ ಕಚೇರಿಯಿಂದ ಎಸ್‌ವಿಪಿ ವೃತ್ತ ಮಾರ್ಗವಾಗಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಬಳಿಕ 10.45ಕ್ಕೆ ಸಮ್ಮೇಳನದ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ. ಕರ್ನಾಟಕ ಕೇಂದ್ರೀಯ ವಿವಿ ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ ಸಮ್ಮೇಳನ ಉದ್ಘಾಟಿಸುವರು. ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ್‌ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳುವರು’ ಎಂದರು.

ADVERTISEMENT

‘ಮಧ್ಯಾಹ್ನ 12.30ಕ್ಕೆ ವಿಚಾರ ವಿಸ್ತಾರ ಗೋಷ್ಠಿ ನಡೆಯಲಿದೆ. ಅರುಣಕುಮಾರ ಲಗಶೆಟ್ಟಿ ಅಧ್ಯಕ್ಷತೆ ವಹಿಸವರು. ವಿಜಯಕುಮಾರ ಗೋತಗಿ ಆಶಯನುಡಿ ಆಡುವರು. ಕಲ್ಯಾಣರಾವ ಜಿ.ಪಾಟೀಲ, ಕಾವ್ಯಶ್ರೀ ಮಹಾಗಾಂವಕರ್, ಮಹೇಶ ಕುಲಕರ್ಣಿ ವಿಷಯಗಳನ್ನು ಮಂಡಿಸುವರು’ ಎಂದು ವಿವರಿಸಿದರು.

‘ಮಧ್ಯಾಹ್ನ 2.15ಕ್ಕೆ ನುಡಿ ಸಡಗರ ಯುವ ಕವಿಗೋಷ್ಠಿ ನಡೆಯಲಿದೆ. ಶ್ರೀಶೈಲ ನಾಗರಾಳ ಅಧ್ಯಕ್ಷತೆ ವಹಿಸುವರು. ಶರಣಬಸಪ್ಪ ವಡ್ಡನಕೇರಿ ಆಶಯ ನುಡಿ ಹೇಳುವರು. ವಿವಿಧ ಕವಿಗಳು ತಮ್ಮ ಕವನಗಳನ್ನು ವಾಚಿಸುವರು’ ಎಂದು ಮಾಹಿತಿ ನೀಡಿದರು.

‘ಸಂಜೆ 4.15ಕ್ಕೆ ಸಮಾರೋಪ ಸಮಾರಂಭ ಹಾಗೂ ಸತ್ಕಾರ ಸಂಭ್ರಮ ನಡೆಯಲಿದೆ. ಕಥೆಗಾರ ಸಿ.ಎಸ್.ಆನಂದ ಸಮಾರೋಪ ನುಡಿಗಳನ್ನಾಡುವರು. ವಿಶೇಷ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ಜಗದೀಶ್ವರಿ ನಾಸಿ ಪಾಲ್ಗೊಳ್ಳುವರು. ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳ ಯುವ ಸಾಧಕರಿಗೆ ‘ವಿಜಯ ಚೇತನ’ ‍ಪುರಸ್ಕಾರ ನೀಡಲಾಗುವುದು. ಜಿಲ್ಲೆಯ ಯುವ ಲೇಖಕರ ಪುಸ್ತಕ ಪ್ರದರ್ಶನವೂ ಇರಲಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರವೀಂದ್ರಕುಮಾರ ಭಂಟನಳ್ಳಿ ಇದ್ದರು.

ಸೂಫಿ ಸಮ್ಮೇಳನಕ್ಕೆ ಚಿಂತನೆ

‘ಕಸಾಪ ಜಿಲ್ಲಾ ಘಟಕವು ಕಲೆ ಸಂಗೀತ ಸಾಹಿತ್ಯ ನಾಟಕ ಚಿತ್ರಕಲೆ ಸೇರಿದಂತೆ ಎಲ್ಲ ರಂಗಗಳ ಸಮ್ಮೇಳನಗಳನ್ನು ಆಯೋಜಿಸುತ್ತ ಬಂದಿದೆ. ಇದರಿಂದ ಎಲ್ಲ ವರ್ಗಗಳ ಜನರೂ ಕನ್ನಡ ಭವನದತ್ತ ಮುಖಮಾಡಲು ಸಾಧ್ಯವಾಗಿದೆ. ಇದೇ ವರ್ಷ ಸೂಫಿ ಸಾಹಿತ್ಯ ಸಮ್ಮೇಳನ ಪೊಲೀಸ್‌ ಸಾಹಿತ್ಯ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ’ ಎಂದು ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.