ಕಲಬುರಗಿ: ‘ಕನ್ನಡ ಭಾಷೆ ತಮಿಳು ಭಾಷೆಯಿಂದ ಉಗಮವಾಯಿತು’ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಕಮಲ್ ಹಾಸನ್ ಅವರ ‘ಥಗ್ ಲೈಫ್’ ಚಲನಚಿತ್ರವನ್ನು ಜಿಲ್ಲೆಯಲ್ಲಿ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆದಿಂದ (ನಾರಾಯಣಗೌಡ ಬಣ) ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಕರವೇ ಕಾರ್ಯಕರ್ತರು ತಮಟೆ ಬಾರಿಸುತ್ತ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆಯಲ್ಲಿ ವಾಹನಗಳ ಸಂಚಾರ ತಡೆದು, ಘೋಷಣೆ ಮೊಳಗಿಸಿ, ನಟ ಕಮಲ್ ಹಾಸನ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
‘ಕಮಲ್ ಹಾಸನ್ ಅವರ ‘ಥಗ್ ಲೈಫ್’ ಸಿನಿಮಾ ಜೂನ್ 5ರಿಂದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ ಭಾಷೆ ಅವಮಾನಿಸಿರುವ ನಟನ ಸಿನಿಮಾವನ್ನು ಕಲಬುರಗಿಯ ಯಾವುದೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬಾರದು’ ಎಂದು ಒತ್ತಾಯಿಸಿದರು.
ಕರವೇ ಜಿಲ್ಲಾಧ್ಯಕ್ಷ ಆನಂದ ದೊಡ್ಡಮನಿ ಮಾತನಾಡಿ, ‘ಕನ್ನಡ ಭಾಷೆಗೆ ಐದು ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ಲಿಪಿಗೆ ಲಿಪಿಗಳ ರಾಣಿ ಎಂದು ಕರೆಯುತ್ತಾರೆ. ನಮ್ಮ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ಆದರೆ ತಮಿಳು ಭಾಷೆ ಎಷ್ಟು ಜ್ಞಾನಪೀಠ ಪ್ರಶಸ್ತಿ ದಕ್ಕಿವೆ ಎಂಬುದನ್ನು ಕಮಲ್ ಹಾಸನ್ ಹೇಳಲಿ’ ಎಂದು ಆಗ್ರಹಿಸಿದರು.
‘ನಟ ಕಮಲ್ ಹಾಸನ್ ತನ್ನ ಪ್ರಚಾರಕ್ಕಾಗಿ ದೊಡ್ಡ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಅಪಮಾನಿಸಿರುವುದು ಖಂಡನೀಯ. ಈ ಅಸಂಬದ್ಧ ಹೇಳಿಕೆ ಕನ್ನಡದ ಅಸ್ಮಿತೆಗೆ ಧಕ್ಕೆ ತಂದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪ್ರವೀಣ ಕಟ್ಟಿಮನಿ, ಮೆಹತಾಬ್ ಖಾನ್, ಅಪ್ಪಾರಾವ್, ಸುರೇಶ ಹೊಸಮನಿ, ದೇವೇಂದ್ರಗೌಡ ಪಾಟೀಲ, ಮೌನೇಶ ಬೆನಕನಹಳ್ಳಿ, ಯಲ್ಲಾಲಿಂಗ ಹಯ್ಯಾಳಕರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.