ADVERTISEMENT

ಚಿಂಚೋಳಿ: ಕರ್ಚಖೇಡ, ಗರಗಪಳ್ಳಿ ಗ್ರಾ.ಪಂ ಚುನಾವಣೆ

6 ವರ್ಷಗಳಿಂದ ನನೆಗುದಿಗೆ ಬಿದ್ದ ಚುನಾವಣೆ; ಡಿ.27ರಂದು ಮತದಾನ, 30ಕ್ಕೆ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 3:34 IST
Last Updated 14 ಡಿಸೆಂಬರ್ 2021, 3:34 IST
ಮಹಾದೇವಪ್ಪ ಪಾಟೀಲ
ಮಹಾದೇವಪ್ಪ ಪಾಟೀಲ   

ಚಿಂಚೋಳಿ: ಕಳೆದ 6 ವರ್ಷಗಳಿಂದ ನನೆಗುದ್ದಿಗೆ ಬಿದ್ದಿದ ತಾಲ್ಲೂಕಿನ ಕರ್ಚಖೇಡ ಮತ್ತು ಗರಗಪಳ್ಳಿ ಗ್ರಾಮ ಪಂಚಾಯಿತಿಗಳಿಗೆ 2018ರ ಮೀಸಲಾತಿ ಪರಿಗಣಿಸಿ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣೆ ಆಯೋಗ ಆದೇಶಿಸಿದೆ.

ಕರ್ಚಖೇಡ್ ಮತ್ತು ಅಣವಾರ ಗ್ರಾ.ಪಂ. ವಿಭಾಜಿಸಿ ಗರಗಪಳ್ಳಿ ಪಂಚಾಯಿತಿಯನ್ನು ಹೊಸದಾಗಿ ರಚಿಸಲಾಗಿತ್ತು. ಕರ್ಚಖೇಡ ಗ್ರಾ.ಪಂ.ಯಲ್ಲಿ ಇದ್ದ ಗಣಾಪುರ ಗ್ರಾಮವನ್ನು ಗರಗಪಳ್ಳಿ ಗ್ರಾ.ಪಂ.ಗೆ ಸೇರಿಸಿದ್ದಕ್ಕೆ ಗಣಾಪುರ ಗ್ರಾಮಸ್ಥರು ನ್ಯಾಯಾಲಯದ ಮೊರೆ ಹೋದರು.

ಹೈಕೋರ್ಟ್‌ ಪ್ರಾದೇಶಿಕ ಆಯುಕ್ತರಿಗೆ ಪ್ರಕರಣ ವರ್ಗಾಯಿಸಿತ್ತು. ಆಯುಕ್ತರು ವಿಚಾರಣೆ ನಡೆಸುತ್ತಿರುವಾಗಲೇ ‘ಗಣಾಪುರ ಗರಗಪಳ್ಳಿ ಪಂಚಾಯಿತಿಯಲ್ಲಿಯೇ ಮುಂದುವರೆಸಬೇಕು’ ಎಂದು ದ್ವಿಸದಸ್ಯ ಪೀಠದಿಂದ ಪ್ರಾದೇಶಿಕ ಆಯುಕ್ತರ ವಿಚಾರಣೆಗೆ ತಡೆಯಾಜ್ಞೆ ತಂದಿದ್ದರು.

ADVERTISEMENT

ಆಗ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿತ್ತು. ಇದನ್ನು ವಿರೋಧಿಸಿದ ಗಣಾಪುರ ಗ್ರಾಮದ ನಿವಾಸಿಯೊಬ್ಬರು ಮತ್ತೆ ಕೋರ್ಟ್‌ ಮೆಟ್ಟಿಲೇರಿದ್ದರು. 2015ರಿಂದ ಚುನಾವಣೆ ನಡೆದಿರಲಿಲ್ಲ. ಕರ್ಚಖೇಡ ಗ್ರಾ.ಪಂ.ಗೆ 13 ಹಾಗೂ ಗರಗಪಳ್ಳಿ ಗ್ರಾ.ಪಂ.ಗೆ 16 ಸದಸ್ಯರ ಆಯ್ಕೆಯ ಚುನಾವಣೆ ನಡೆಯಲಿದೆ.

ಚುನಾವಣಾ ವೇಳಾಪಟ್ಟಿ: ಉಭಯ ಗ್ರಾ.ಪಂ.ಗಳ ಚುನಾವಣೆಯ ನಾಮಪತ್ರ ಸಲ್ಲಿಕ್ಕೆ ಪ್ರಕ್ರಿಯೆ ಡಿ.13ರಿಂದ ಆರಂಭವಾಗಿದ್ದು, ಡಿ.17 ಕೊನೆಯ ದಿನ. ಡಿ.18ರಂದುನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಡಿ.20 ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಡಿ.27ರಂದು ಮತದಾನ ನಡೆದು, 30ರಂದು ಫಲಿತಾಂಶ ಪ್ರಕಟವಾಗಲಿದೆ.

ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಲಾಮೂರ ಅವರು ಕರ್ಚಖೇಡ ಹಾಗೂ ಆದರ್ಶ ವಿದ್ಯಾಲಯದ ಪ್ರಾಂಶುಪಾಲ ನಾಗೇಶ ಭದ್ರಶೆಟ್ಟಿ ಅವರು ಗರಗಪಳ್ಳಿ ಗ್ರಾ.ಪಂ.ಗಳಿಗೆ ಚುನಾವಣಾ ಅಧಿಕಾರಿಯಾಗಿ ನೇಮಕವಾಗಿದ್ದಾರೆ.

ಆಕಾಂಕ್ಷಿಗಳಲ್ಲಿ ನಿರಾಸೆ
ಚಿಂಚೋಳಿ:
2020ರ ಮೀಸಲಾತಿ ಆಧರಿಸಿ ಚುನಾವಣೆ ನಡೆಸಬಹುದು ಎಂಬ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ.

2020 ಮೀಲಾತಿ ಆಧಾರದ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಪೇಕ್ಷೆಯಲ್ಲಿ ಕೆಲವರು ದಾಖಲೆಗಳನ್ನು ಸಿದ್ಧಪಡಿಸಿಕೊಂಡಿದ್ದರು. ಜಿಲ್ಲಾಧಿಕಾರಿಗಳು ಚುನಾವಣಾ ಆಯೋಗಕ್ಕೆ ಸ್ಪಷ್ಟಿಕರಣ ಕೇಳಿದಾಗ, ‘2018ರ ಮೀಸಲಾತಿ ಆಧರಿಸಿ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗ ಆದೇಶಿಸಿದೆ’.

‘ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೂ ಮೀಸಲಾತಿ ನಿಗದಿಯಾಗಿದೆ. ಇದರಲ್ಲಿ 2018 ಮತ್ತು 2020 ಎರಡೂ ಇವೆ. ಆಯೋಗವು ಇವುಗಳಲ್ಲಿ ಯಾವುದನ್ನೂ ಆಧರಿಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಸುತ್ತದೆ ಎಂಬುದು ಜನರಿಗೆ ತಿಳಿಸಬೇಕು’ ಎಂದು ಮುಖಂಡ ಪೀತಾಂಬರ ನಾವದಗಿ ಒತ್ತಾಯಿಸಿದ್ದಾರೆ.

*
ಚುನಾವಣೆಯ ವಿಳಂದಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರ ಸಮಸ್ಯೆಗಳನ್ನು ಕೇಳುವವರು ಇರಲಿಲ್ಲ. ಈಗ ಚುನಾವಣೆ ನಡೆಯುತ್ತಿರುವುದು ಸ್ವಾಗತಾರ್ಹ
–ಮಹಾದೇವಪ್ಪ ಪಾಟೀಲ, ಮುಖಂಡ, ಬೆಡಕಪಳ್ಳಿ

*
ಗಣಾಪುರ ಗ್ರಾಮ ಕರ್ಚಖೇಡ ಸೇರಿಸಬೇಕೆಂಬ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ. ಈಗ 2020ರ ಮೀಸಲಾತಿ ಪ್ರಕಟಿಸಿದ ಮೇಲೂ 2018ರ ಮೀಸಲಾತಿ ಆಧರಿಸಿ ಚುನಾವಣೆಗೆ ಮುಂದಾಗಿದ್ದು ಆಯೋಗದ ಕ್ರಮ ಸರಿಯಲ್ಲ
–ಪೀತಾಂಬರರಾವ್ ನಾವದಗಿ, ಗಣಾಪುರ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.