ADVERTISEMENT

ಬಂದ್ ಭದ್ರತೆಗೆ 1,500 ಪೊಲೀಸರು, ವಾಣಿಜ್ಯ, ಸಂಚಾರ, ಹೋಟೆಲ್‌ ಯಥಾಸ್ಥಿತಿ

ಕನ್ನಡ ಸಂಘಟನೆಗಳಿಂದ ಮಾತ್ರ ಬೆಂಬಲ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 16:16 IST
Last Updated 4 ಡಿಸೆಂಬರ್ 2020, 16:16 IST

ಕಲಬುರ್ಗಿ: ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ನಿರ್ಧಾರ ಕೈಬಿಡುವಂತೆ ಆಗ್ರಹಿಸಿ ಕನ್ನಡ ಒಕ್ಕೂಟ ಕರ್ನಾಟಕ ನೇತೃತ್ವದಲ್ಲಿ ಶನಿವಾರ (ಡಿ. 5) ಬಂದ್‌ ಕರೆ ನೀಡಿದ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ಕೂಡ ಕಾನೂನು, ಸುವ್ಯವಸ್ಥೆ ಕಾಪಾಡಲು ಪೊಲೀಸರು ಅಗತ್ಯ ಭದ್ರತಾ ಕ್ರಮ ಕೈಗೊಂಡಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಾದ್ಯಂತ ಪೊಲೀಸ್‌ ಭದ್ರತೆ ಒದಗಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿಮಿ ಮರಿಯಮ್‌ ಜಾರ್ಜ್‌ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳು ಸಭೆ ನಡೆಸಿ, ಚರ್ಚಿಸಿದರು. ಜಿಲ್ಲಾ ಪೊಲೀಸ್‌ ಇಲಾಖೆಯಿಂದ 2 ಕೆಎಸ್‍ಆರ್‌ಪಿಹಾಗೂ 7 ಡಿಎಆರ್ ತುಕಡಿಗಳನ್ನು ಹೆಚ್ಚುವರಿಯಾಗಿ ಬಂದೋಬಸ್ತ್ ಬಳಸಿಕೊಳ್ಳಲಾಗಿದೆ. ಇನ್ನೊಂದೆಡೆ, ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ 2 ಕೆಎಸ್‍ಆರ್‍ಪಿ ತುಕಡಿ, 6 ಸಿಆರ್ ಕುತಡಿ ನಿಯೋಜಿಸಲಾಗಿದೆ. ಒಟ್ಟಾರೆ ಜಿಲ್ಲೆಯಾದ್ಯಂತ 1,500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಬಂದ್‌ಗೆ ವಿವಿಧ ಕನ್ನಡ ಸಂಘಟನೆಗಳು ಮಾತ್ರ ಬೆಂಬಲ ಸೂಚಿಸಿವೆ. ವ್ಯಾಪಾರಿಗಳ ಸಂಘ, ವಾಣಿಜ್ಯೋದ್ಯಮಿಗಳು, ಖಾಸಗಿ ವಾಹನ ಮಾಲೀಕರು, ಆಟೊ ಚಾಲಕರು ಸೇರಿದಂತೆ ಬಹುಪಾಲು ಸಂಘಟನೆಗಳು ಬಂದ್‌ನಿಂದ ಹೊರಗುಳಿದಿವೆ. ಹಾಗಾಗಿ, ಹೋಟೆಲ್‌, ವ್ಯಾಪಾರ ಹಾಗೂ ಸಂಚಾರ ಚಟುವಟಿಕೆಗಳಿಗೆ ತೊಂದರೆ ಇಲ್ಲ ಎಂದೂ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಕಲ್ಯಾಣ ಕರ್ನಾಟಕ ಕನ್ನಡ ಪರ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಅಣಕು ಶವಯಾತ್ರೆ ಮಾಡಲು ಸಂಘಟನೆಗಳು ನಿರ್ಧರಿಸಿದ್ದು, ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನೆ ನಡೆಸಲಿವೆ. ಇದಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣ, ಎಚ್.ಶಿವರಾಮೇಗೌಡ ಬಣ, ಪ್ರದೀಪ್ ಶೆಟ್ಟಿ ಬಣ ಹಾಗೂ ಕನ್ನಡಿಗರ ಬಣ, ಜೈ ಕನ್ನಡಿಗರ ರಕ್ಷಣಾ ವೇದಿಕೆ, ಜೈ ಕನ್ನಡಿಗರ ಸೇನೆ, ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ನಾಡು ವೇದಿಕೆ, ಜಯ ಕರ್ನಾಟಕ ರಕ್ಷಣಾ ಸೇನೆಗಳು ಬೆಂಬಲ ಸೂಚಿಸಿವೆ.

ಬಂದ್ ಬೆಂಬಲ ಕೋರಿ ಬಟ್ಟೆ ವ್ಯಾಪಾರಸ್ಥರು, ಬೀದಿ ಬದಿ ವ್ಯಾಪಾರಿಗಳು, ಕಿರಾಣಿ ಅಂಗಡಿ, ಅಟೊಮೊಬೈಲ್, ಎಪಿಎಂಸಿಗಳ ವರ್ತಕರ ಬಳಿಯೂ ಮನವಿ ಮಾಡಲಾಗಿದೆ. ಆದರೆ, ಸಂಘಟನೆಗಳಿಂದ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಕಲಬುರ್ಗಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘ ಮಾತ್ರ ಬಾಹ್ಯ ಬೆಂಬಲ ಘೋಷಿಸಿದ್ದು, ಹೋಟೆಲ್‌ಗಳನ್ನು ತೆರೆಯಲು ನಿರ್ಧರಿಸಿದೆ.

ಸಾರಿಗೆ ಸಂಚಾರ ಯಥಾಸ್ಥಿತಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಯಾವುದೇ ಸಂಘಟನೆ ಬಂದ್‌ಗೆ ಬೆಂಬಲ ಸೂಚಿಸಿಲ್ಲ. ಜತೆಗೆ, ಸಂಸ್ಥೆ ಕೂಡ ಎಂದಿನಂತೆ ಬಸ್‍ಗಳ ಸಂಚಾರ ಮುಂದುವರಿಸಲು ನಿರ್ಧರಿಸಿದೆ. ಸದ್ಯ ಅಂತರ ಜಿಲ್ಲಾ ಬಸ್‌ ಸಂಚಾರವನ್ನು ಯಥಾಸ್ಥಿತಿ ಮುಂದುವರಿಸಲಾಗುವುದು. ಶನಿವಾರ ಬೆಳಿಗ್ಗೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದ ಕಡೆ ಮಾತ್ರ ಬಸ್‌ಗಳ ಸಂಖ್ಯೆ ಕಡಿಮೆ ಮಾಡಲಾಗುವುದು ಎಂದು ಸಾರಿಗೆ ಅಧಿಕಾರಿಗಳು ಮಹಿತಿ ನೀಡಿದ್ದಾರೆ.

ಕನ್ನಡ ಸೈನ್ಯ ಬೆಂಬಲ: ಕರ್ನಾಟಕ ಬಂದ್‌ಗೆ ಕನ್ನಡ ಸೈನ್ಯದ ವತಿಯಿಂದ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ನಗರದ ಮಿನಿ ವಿಧಾನಸೌಧದ ಎದುರು ಬೆಳಿಗ್ಗೆ 11ಕ್ಕೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆಯ ಸಂಸ್ಥಾಪಕ ಸೋಮನಾಥ ಎಲ್. ಕಟ್ಟಿಮನಿ ತಿಳಿಸಿದ್ದಾರೆ.‌

ಕರವೇ ಸ್ವಾಭಿಮಾನಿ ಬಣ ವಿರೋಧ

ಕಲಬುರ್ಗಿ: ‘ಶನಿವಾರ ಕರೆ ನೀಡಿದ ಕರ್ನಾಟಕ ಬಂದ್‌ಗೆ ಕರವೇ ಸ್ವಾಭಿಮಾನಿ ಬಣದ ವಿರೋಧವಿದೆ. ನಾವು ಮರಾಠಾ ಅಭಿವೃದ್ಧಿ ನಿಗಮವನ್ನು ವಿರೋಧಿಸುತ್ತೇವೆ. ಆದರೆ, ಬಂದ್‌ಗೆ ಬೆಂಬಲ ನೀಡುವುದಿಲ್ಲ’ ಎಂದು ಬಣದ ಜಿಲ್ಲಾ ಘಟಕದ ಅಧ್ಯಕ್ಷ ಚನ್ನವೀರ ಗೌರ ತಿಳಿಸಿದ್ದಾರೆ.

‘ಈ ಬಂದ್‌ಅನ್ನು ವಾಟಾಳ್ ನಾಗರಾಜ್‌ ಮತ್ತು ಸರ್ಕಾರ ತಮ್ಮ ಪ್ರತಿಷ್ಠೆಗೆ ತೆಗೆದುಕೊಂಡಿವೆ. ಇದನ್ನು ಕನ್ನಡ ಸಂಘಟನೆಗಳು ಅರ್ಥಮಾಡಿಕೊಳ್ಳಬೇಕು. ಬಂದ್‌ ಕರೆ ನೀಡುವ ಮುನ್ನ ಎಲ್ಲ ಸಂಘಟನೆಗಳೊಂದಿಗೆ ಚರ್ಚಿಸಬೇಕು. ರೈತರು, ಕಾರ್ಮಿಕರು, ನಾಡು-ನುಡಿ, ಜಲದ ವಿಚಾರವಾಗಿ ತೊಂದರೆಯಾದಾಗ ಮಾತ್ರ ಕರ್ನಾಟಕ ಬಂದ್‌ಗೆ ನಮ್ಮ ಬೆಂಬಲವಿದೆ. ಯಾರೋ ಪ್ರತಿಷ್ಠೆಗೆ ಕರೆ ನೀಡಿದರೆ ನಾವು ಬೆಂಬಲಿಸುವುದಿಲ್ಲ’ ಎಂದು ಅವರು ಹೇಳಿಕೆ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಮರಾಠಾ ಪ್ರಾಧಿಕಾರದ ವಿರುದ್ಧ ರಾಜ್ಯದಾದ್ಯಂತ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.