ADVERTISEMENT

ಆರ್‌ಟಿಐ ಅರ್ಥವಾಗದಿದ್ದರೆ ಚಕ್ರವ್ಯೂಹ: ರವೀಂದ್ರ ಗುರುನಾಥ ಡಾಕಪ್ಪ

ಅಧಿಕಾರಿಗಳಿಗೆ ಆರ್‌ಟಿಐ ಪರಾಮರ್ಶೆ ತರಬೇತಿ ಕಾರ್ಯಾಗಾರ: ರವೀಂದ್ರ ಗುರುನಾಥ ಡಾಕಪ್ಪ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 4:40 IST
Last Updated 16 ಜುಲೈ 2024, 4:40 IST
ಕಲಬುರಗಿಯಲ್ಲಿ ಸೋಮವಾರ ನಡೆದ ಆರ್‌ಟಿಐ ಪರಾಮರ್ಶೆ ತರಬೇತಿ ಕಾರ್ಯಾಗಾರದಲ್ಲಿ ರಾಜ್ಯ ಮಾಹಿತಿ ಆಯೋಗ ಕಲಬುರಗಿ ಪೀಠದ ಆಯುಕ್ತ ರವೀಂದ್ರ ಗುರನಾಥ ಡಾಕಪ್ಪ ಅವರು ಮಾತನಾಡಿದರು. ಅಧಿಕಾರಿಗಳು ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ
ಕಲಬುರಗಿಯಲ್ಲಿ ಸೋಮವಾರ ನಡೆದ ಆರ್‌ಟಿಐ ಪರಾಮರ್ಶೆ ತರಬೇತಿ ಕಾರ್ಯಾಗಾರದಲ್ಲಿ ರಾಜ್ಯ ಮಾಹಿತಿ ಆಯೋಗ ಕಲಬುರಗಿ ಪೀಠದ ಆಯುಕ್ತ ರವೀಂದ್ರ ಗುರನಾಥ ಡಾಕಪ್ಪ ಅವರು ಮಾತನಾಡಿದರು. ಅಧಿಕಾರಿಗಳು ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ   

ಕಲಬುರಗಿ: ‘ಸರ್ಕಾರಿ ಅಧಿಕಾರಿಗಳು ಮಾಹಿತಿ ಹಕ್ಕು ಕಾಯ್ದೆಯನ್ನು (ಆರ್‌ಟಿಐ) ಸಮರ್ಪಕವಾಗಿ ಅರ್ಥೈಸಿಕೊಳ್ಳದೆ ಇದ್ದರೆ ಅದು ಚಕ್ರವ್ಯೂಹದಂತೆ ಭಾಸವಾಗಿ ಅರ್ಜಿದಾರರಿಂದ ಕಿರಿಕಿರಿ ಅನುಭವಿಸಬೇಕಾಗುತ್ತದೆ’ ಎಂದು ರಾಜ್ಯ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತ ರವೀಂದ್ರ ಗುರುನಾಥ ಡಾಕಪ್ಪ ಎಚ್ಚರಿಸಿದರು.

ನಗರದ ಲೋಕೋಪಯೋಗಿ ಇಲಾಖೆಯ (ಪಿಡ್ಲ್ಯೂಡಿ) ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಆಯೋಜಿಸಿದ್ದ ಆರ್‌ಟಿಐ ಪರಾಮರ್ಶೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಕಾಯ್ದೆಯನ್ನು ಅರ್ಥೈಸಿಕೊಂಡ 12ನೇ ತರಗತಿ ಫೇಲಾದವರು ನಾನಾ ಮಾರ್ಗಗಳ ಮೂಲಕ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅವರ ಪೈಕಿ ಕೆಲವರು ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡು ಐಷರಾಮಿ ಜೀವನ ನಡೆಸುತ್ತಿದ್ದಾರೆ. ಆದರೆ, ಅಧಿಕಾರಿಗಳ ಬಳಿ ಕಾಯ್ದೆ ಓದಲು, ತಿಳಿದುಕೊಳ್ಳಲು ಸಮಯ ಇಲ್ಲ’ ಎಂದರು.

ADVERTISEMENT

‘ಅರ್ಜಿದಾರರಿಗೆ ಸೆಕ್ಷನ್‌ 6(1) ಅಡಿ ಕಾನೂನಿಗೆ ಒಳಪಟ್ಟ ಮಾಹಿತಿ ಪಡೆಯುವ ಹಕ್ಕಿನ ಜತೆಗೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸುವ ಜವಾಬ್ದಾರಿಯೂ ಇದೆ. ಮಾಹಿತಿ ಲಭ್ಯವಿದ್ದರೆ ಅಧಿಕಾರಿಯು ಸೆಕ್ಷನ್ 7(1) ಅಡಿ 30 ದಿನಗಳ ಒಳಗಾಗಿ ಸರಿಯೋ, ತಪ್ಪೋ ಪ್ರತ್ಯುತ್ತರ ನೀಡಬೇಕು. ಇಲ್ಲದಿದ್ದರೆ ‘ನಮಗೆ ಸಂಬಂಧಿಸಿಲ್ಲ’ ಎಂದು ಹಿಂಬರಹಕೊಡಬೇಕು. ಯಾವುದೇ ಕಾರಣಕ್ಕೂ ‘ನಮ್ಮ ಬಳಿ ಮಾಹಿತಿ ಇಲ್ಲ’ ಎಂದು ಬರೆಯಬಾರದು’ ಎಂದು ಎಚ್ಚರಿಸಿದರು.

‘ನಿಮ್ಮದೆ ಇಲಾಖೆಯ ಬೇರೊಂದು ವಿಭಾಗಕ್ಕೆ ಸಂಬಂಧಿಸಿದ್ದ ಮಾಹಿತಿ ಕೇಳಿದ್ದರೆ ಸೆಕ್ಷನ್ 6 (3) ಅಡಿ ಐದು ದಿನಗಳು ಮೀರದಂತೆ ಅರ್ಜಿಯನ್ನು ವರ್ಗಾಯಿಸಬೇಕು. ನಿಮ್ಮಲ್ಲಿಯೇ ಇರಿಸಿಕೊಂಡರೆ ನೀವೇ ಹೊಣೆಗಾರರಾಗುತ್ತೀರಾ. ಅರ್ಜಿ ವರ್ಗಾವಣೆಯ ದುರ್ಬಳಕೆ ತಡೆಗೆ ಒಂದು ಬಾರಿ ಮಾತ್ರ ವರ್ಗಾಯಿಸಲು ಅವಕಾಶವಿದೆ’ ಎಂದು ಸೂಚಿಸಿದರು.

‘ಬಂದಂತಹ ಎಲ್ಲ ಅರ್ಜಿಗಳಿಗೆ ಮಾಹಿತಿ ನೀಡಲೇಬೇಕು ಎಂದಿಲ್ಲ. ತಿರಸ್ಕರಿಸುವ ಅಧಿಕಾರವೂ ನೀಡಲಾಗಿದೆ. ಆದರೆ, ಕೆಲವೊಂದು ತೀರ್ಮಾನಗಳು ಪಾಲಿಸಬೇಕಾಗುತ್ತದೆ. ಅರ್ಜಿದಾರರ ಸಾರ್ವಜನಿಕ ಹಿತಾಸಕ್ತಿ, ಸರ್ಕಾರದ ಸಂಪನ್ಮೂಲ ಹಾಳು ಮಾಡುತ್ತಿದ್ದರಾ...? ಎಂಬೆಲ್ಲ ವಿಚಾರ ತಿಳಿದುಕೊಳ್ಳಬೇಕು. ಸಾವಿರಾರು ಪುಟ್ಟಗಳಷ್ಟು ಮಾಹಿತಿ ಇದ್ದರೆ ಅರ್ಜಿದಾರನಿಂದ 90 ದಿನಗಳ ಒಳಗೆ ದಾಖಲಾತಿಯ ಜೆರಾಕ್ಸ್ ವೆಚ್ಚ ಪಡೆದು ನೀಡಬೇಕು. ವಿಳಂಬ ಮಾಡಿದರೆ ತಿರಸ್ಕೃತ ಆಗುತ್ತದೆ’ ಎಂದರು.

‘ಪದೇ ಪದೇ ನೂರಾರು ಅರ್ಜಿಗಳನ್ನು ಹಾಕಿದವರ ವಿರುದ್ಧ ದೂರು ಕೊಡುವಂತಿಲ್ಲ. ಆದರೆ, ಅಂತಹವರ ಅರ್ಜಿಗಳಿಗೆ ಆಡಳಿತಾತ್ಮಕ ಮತ್ತು ಮಾನವಸಂಪನ್ಮೂಲದ ಕೊರತೆ, ಕಚೇರಿಯ ಕೆಲಸದ ಒತ್ತಡವೆಂದು ಉಲ್ಲೇಖಿಸಿ, ಈ ಬಗ್ಗೆ ವಿಚಾರಣೆ ನಡೆಸಿ ನಿರ್ದೇಶನ ಕೊಡುವಂತೆ ಆಯೋಗಕ್ಕೆ ಕಳುಹಿಸಿ, ಅದರ ಒಂದು ಪ್ರತಿ ಅರ್ಜಿದಾರರಿಗೂ ನೀಡಿ. ಇದರ ಜತೆಗೆ ಸರ್ಕಾರಿ ನೌಕರರಿಗೂ ಮೇಲ್ಮನವಿ ಸಲ್ಲಿಸಲು ನ್ಯಾಯಾಲಯ ಅನುಮತಿ ನೀಡಿದೆ. ಇಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು, ಪ್ರಾಮಾಣಿಕ ಅರ್ಜಿದಾರರಿಗೆ ತೊಂದರೆ ಆಗುದಂತೆ ಮಾಹಿತಿ ನೀಡಿ’ ಎಂದು ಸಲಹೆ ನೀಡಿದರು.

ಕಾರ್ಯಾಗಾರದಲ್ಲಿ ಕಲಬುರಗಿ, ಬೀದರ್, ಯಾದಗಿರಿ, ಕೊಪ್ಪಳ, ಬಳ್ಳಾರಿ ಸೇರಿ ಇತರೆ ಜಿಲ್ಲೆಗಳ ಪಿಡಬ್ಲ್ಯೂಡಿ, ಆರ್‌ಡಿಪಿಆರ್‌, ನೀರಾವರಿ, ಪಾಲಿಕೆಯ ಎಂಜಿನಿಯರ್, ಅಧಿಕಾರಿಗಳು ಪಾಲ್ಗೊಂಡಿದ್ದರು.

ಕಲಬುರಗಿ ಪೀಠದ ಆಯುಕ್ತರು ಪ್ರತ್ಯೇಕವಾದ ಜಾಗ ಮತ್ತು ಅನುದಾನದ ವ್ಯವಸ್ಥೆ ಮಾಡಿದರೆ ನಮ್ಮ ಇಲಾಖೆಯ ವತಿಯಿಂದ ಕಟ್ಟಡ ನಿರ್ಮಾಣ ಮಾಡಿಕೊಡಲಾಗುವುದು
ಜಗನ್ನಾಥ ಹಾಲಿಂಗೆ ಪಿಡಬ್ಲ್ಯೂಡಿ ಮುಖ್ಯ ಎಂಜಿನಿಯರ್‌ ಕಲಬುರಗಿ

‘ಕಲಬುರಗಿ ಪಾಲಿಕೆಯದ್ದು ಕೆಟ್ಟ ವರ್ತನೆ’

‘ಕಲಬುರಗಿ ಪೀಠದಲ್ಲಿ ಏಳು ಜಿಲ್ಲೆಗಳ ವ್ಯಾಪ್ತಿಯ ಹಲವು ಪಾಲಿಕೆಗಳು ಪುರಸಭೆಗಳು ಒಳಪಡುತ್ತವೆ. ಅವುಗಳ ಪೈಕಿ ಆರ್‌ಟಿಐನಲ್ಲಿ ಕಲಬುರಗಿ ಮಹಾನಗರ ಪಾಲಿಕೆಯು ಕೆಟ್ಟ ಪ್ರದರ್ಶನ ತೋರುತ್ತಿದೆ’ ಎಂದು ರವೀಂದ್ರ ಗುರುನಾಥ ಡಾಕಪ್ಪ ಬೇಸರ ವ್ಯಕ್ತಪಡಿಸಿದರು. ‘ಆರ್‌ಟಿಐಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಪಾಲಿಕೆಯ ಅಧಿಕಾರಿಗಳು ತಿದ್ದಿಕೊಂಡು ಮುಂದಾದರೂ ಚೆನ್ನಾಗಿ ಕೆಲಸ ಮಾಡಲಿ. ಮೂರ್ನಾಲ್ಕು ಅಧಿಕಾರಿಗಳು ತರಬೇತಿಗೆ ಬಂದಿದ್ದು ಆಶಾದಾಯಕವಾಗಿದೆ’ ಎಂದರು.

‘ಕಚೇರಿ ಒಳಗಿನ ರಾಜಕೀಯಕ್ಕೆ ಆರ್‌ಟಿಐನಲ್ಲಿ ಉತ್ತರವಿಲ್ಲ’

‘ಮೇಲಧಿಕಾರಿಗಳ ಬಳಿ ಮಾಹಿತಿ ಇದ್ದರೂ ನಮಗೆ ಏಕೆ ಎಂದು ಕೆಳ ಹಂತದ ಅಧಿಕಾರಿಗಳಿಗೆ ವರ್ಗಾಯಿಸಿತ್ತಾರೆ. ಹೆಚ್ಚಿಗೆ ಮಾತಾಡಿದರೆ ನೀವೇ ಕಚೇರಿಗೆ ಬಂದು ಮಾಹಿತಿ ತೆಗೆದುಕೊಂಡು ಹೋಗಿ ಎನ್ನುತ್ತಾರೆ. ಇದಕ್ಕೆ ಪರಿಹಾರ ಏನು’ ಎಂದು ಅಧಿಕಾರಿಯೊಬ್ಬರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರವೀಂದ್ರ ಗುರುನಾಥ ಡಾಕಪ್ಪ ‘ಸರ್ಕಾರಿ ಕಚೇರಿ ಒಳಗಿನ ರಾಜಕೀಯಕ್ಕೆ ಆರ್‌ಟಿಐನಲ್ಲಿ ಉತ್ತರವಿಲ್ಲ. ನಿವೃತ್ತರು ಸಹದ್ಯೋಗಿಗಳೇ ಅರ್ಜಿದಾರರಿಗೆ ಮಾಹಿತಿ ನೀಡಿ ಅರ್ಜಿ ಹಾಕಿಸುತ್ತಾರೆ. ದುರ್ಬಳಕೆಗಾಗಿ ಅರ್ಜಿ ಸಲ್ಲಿಕೆಯಾಗಿದೆ ಎಂದು ಗೊತ್ತಿದ್ದರೂ ಕೆಲವರು ಮಾಹಿತಿ ನೀಡಲ್ಲ’ ಎಂದರು.

‘ಅಧಿಕಾರಿಗಳನ್ನು ಬಚಾವ್ ಮಾಡಿದ್ದಾರೆ’

‘ಕಲಬುರಗಿ ಪೀಠಕ್ಕೆ ಆಯುಕ್ತರಾಗಿ ಬಂದ ಬಳಿಕ ರವೀಂದ್ರ ಗುರುನಾಥ ಡಾಕಪ್ಪ ಅವರು ಬಹಳಷ್ಟು ಅಧಿಕಾರಿಗಳನ್ನು ಬಚಾವ್ ಮಾಡಿದ್ದಾರೆ’ ಎಂದು ಪಿಡಬ್ಲ್ಯೂಡಿ ಕಚೇರಿ ರಿಜಿಸ್ಟ್ರಾರ್ ಮಹಾಂತೇಶ ಹೇಳಿದರು. ಆ ಬಳಿಕ ಸುಧಾರಿಸಿಕೊಂಡು ‘ಪ್ರಕರಣಗಳ ವಿಚಾರಣೆಯ ವೇಳೆ ಸರ್ಕಾರಿ ಅಧಿಕಾರಿಗಳಿಗೆ ಕಾಯ್ದೆಯ ಬಗ್ಗೆ ಸರಿಯಾದ ಮಾಹಿತಿ ನೀಡಿ ಕಡಿಮೆ ಅವಧಿಯಲ್ಲಿ ಸಾವಿರಾರು ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಾರೆ’ ಎಂದರು.

ಅಧಿಕಾರಿಗಳಿಗೆ ಆಯೋಗದ ಕಿವಿಮಾತು

* ಆಯೋಗದ ವಿಚಾರಣೆಗೆ ನಿರಂತರವಾಗಿ ಹಾಜರಾಗಬೇಕು

* ಅರ್ಜಿದಾರ ಪ್ರಶ್ನೆ ಸರಿಯಾಗಿ ಓದಿ ಅರ್ಥೈಸಿಕೊಂಡು ಕೇಳಿದಷ್ಟು ಮಾಹಿತಿ ನೀಡಿ * ಅರ್ಜಿದಾರರಿಗೆ ಕೊಟ್ಟ ಮಾಹಿತಿ ಆನ್‌ಲೈನ್‌ಲ್ಲಿ ಪ್ರದರ್ಶಿಸಿ

* ಆರ್‌ಟಿಐ ಕಾಯ್ದೆಗಳ ಬಗ್ಗೆ ತಿಳಿದುಕೊಳ್ಳಿ

* ಹಾನಿಯಾಗಬಹುದಾದ ಮಾಹಿತಿ ವೈಯಕ್ತಿಕ ವಿವರ ಹಂಚಿಕೊಳ್ಳಬೇಡಿ

* ದುರುದ್ದೇಶದಿಂದ ಅರ್ಜಿ ಹಾಕುವವರ ಬಗ್ಗೆ ಅನ್ಯ ಇಲಾಖೆಗಳ ಗಮನಕ್ಕೂ ತನ್ನಿ

* ಸಾಮಾಜಿಕ ಜಾಲತಾಣಗಳ ಮೂಲಕ ಅರ್ಜಿದಾರರ ಆರ್ಥಿಕ ಹಿನ್ನೆಲೆ ತಿಳಿಯಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.