ADVERTISEMENT

ಧರ್ಮ, ಜಾತಿ, ಸಮಾಜ ವಿಂಗಡಣೆ ಸಲ್ಲ

‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಡಾ.ಬಿ.ವಿ.ವಸಂತಕುಮಾರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 13:15 IST
Last Updated 6 ಜನವರಿ 2021, 13:15 IST
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್, ಕುಲಪತಿ ಪ್ರೊ.ಚಂದ್ರಕಾಂತ ಬಿ.ಯಾತನೂರ, ವಿದ್ಯಾವಿಷಯಕ ಪರಿಷತ್ ಸದಸ್ಯ ಡಾ.ಎಂ.ಎಸ್.ಪಾಸೋಡಿ, ಪ್ರಸಾರಾಂಗ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ, ಕುಲಸಚಿವ ಪ್ರೊ.ಕೆ.ಎಂ.ಸಂಜೀವಕುಮಾರ ಹಾಗೂ ಪ್ರಶಸ್ತಿ ಪುರಸ್ಕೃತರು ಭಾಗವಹಿಸಿದ್ದರು
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್, ಕುಲಪತಿ ಪ್ರೊ.ಚಂದ್ರಕಾಂತ ಬಿ.ಯಾತನೂರ, ವಿದ್ಯಾವಿಷಯಕ ಪರಿಷತ್ ಸದಸ್ಯ ಡಾ.ಎಂ.ಎಸ್.ಪಾಸೋಡಿ, ಪ್ರಸಾರಾಂಗ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ, ಕುಲಸಚಿವ ಪ್ರೊ.ಕೆ.ಎಂ.ಸಂಜೀವಕುಮಾರ ಹಾಗೂ ಪ್ರಶಸ್ತಿ ಪುರಸ್ಕೃತರು ಭಾಗವಹಿಸಿದ್ದರು   

ಕಲಬುರ್ಗಿ: ’ಬಹುತ್ವ ಎನ್ನುವುದು ನಮ್ಮ ದೇಶದ ಮಣ್ಣಿನ ಗುಣ. ಆದರೆ, ಇಂದು ಬಹುತ್ವವನ್ನು ಬಿಟ್ಟು ಏಕತ್ವವನ್ನು ಅಪ್ಪಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ‘ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ಬುಧವಾರ ವಿಶ್ವವಿದ್ಯಾಲಯದ ಪ್ರಸಾರಾಂಗ ಆಯೋಜಿಸಿದ್ದ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ‘ ಸಮಾರಂಭದಲ್ಲಿ ಪುರಸ್ಕೃತರಿಗೆ ಪ್ರಶಸ್ತಿ, ಫಲಕಗಳನ್ನು ನೀಡಿ, ಗೌರವಿಸಿ ಅವರು ಮಾತನಾಡಿದರು.

‘ಮನೆ–ಮನಸ್ಸು ಹಾಗೂ ಕೇರಿಗಳು ಒಡೆದು ಹೋಗುತ್ತಿವೆ. ನಾವು ಎನ್ನುವುದು ನಾನು ಎನ್ನುವಂತಾಗಿದೆ. ಒಡೆದು ಹೋಗುತ್ತಿರುವ ಮನಸ್ಸುಗಳನ್ನು ಒಗ್ಗೂಡಿಸುವಂತಹ ಕೆಲಸವಾಗಬೇಕಿದೆ. ಇಂತಹ ಕಾರ್ಯ ಮಾಡುವ ಜವಾಬ್ದಾರಿ ಪ್ರಶಸ್ತಿ ಪರಸ್ಕೃತರು ಸೇರಿದಂತೆ ನಮ್ಮೆಲ್ಲರ ಮೇಲಿದೆ’ ಎಂದು ಹೇಳಿದರು.

ADVERTISEMENT

‘ಪ್ರತಿ ವಿಶ್ವವಿದ್ಯಾಲಯಗಳಿಗೆ ಪ್ರಸಾರಾಂಗ ಹಾಗೂ ಬೋಧನಾಂಗ ಇವು ತುಂಬಾ ಪ್ರಮುಖ ಅಂಗಗಳು. ಇವೆರಡನ್ನು ಭದ್ರವಾಗಿ ರೂಪಿಸಿದಾಗ ಮಾತ್ರ ಆ ವಿಶ್ವವಿದ್ಯಾಲಯಗಳ ಬೌದ್ಧಿಕ ಸಾಮರ್ಥ್ಯವು ಎಲ್ಲೆಡೆ ಹರಡುತ್ತದೆ‘ ಎಂದರು.

ಹಂಗಾಮಿ ಕುಲಪತಿ ಪ್ರೊ.ಚಂದ್ರಕಾಂತ ಎಂ.ಯಾತನೂರ, ‘ನಮ್ಮ ವಿಶ್ವವಿದ್ಯಾಲಯವು ನೀಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯಷ್ಟೇ ಮಹತ್ವವಿದೆ’ ಎಂದು ಬಣ್ಣಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಸಾರಾಂಗ ನಿರ್ದೇಶಕ ಪ್ರೊ.ಎಚ್‌.ಟಿ.ಪೋತೆ, ‘ಸರ್ಕಾರದ ಯಾವುದೇ ಹಣಕಾಸಿನ ಸಹಾಯ ಪಡೆಯದೇ ವಿಶ್ವ ವಿದ್ಯಾಲಯದಿಂದಲೇ ಪ್ರತಿ ವರ್ಷ 25ರಿಂದ 30 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಾ ಬರಲಾಗಿದೆ. ಈ ಬಾರಿ 29 ಜನರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ’ ಎಂದು ತಿಳಿಸಿದರು.

ಇದೇ ವೇಳೆ 'ಸುಧಾ' ವಾರ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರಘುನಾಥ ಚ.ಹ., ಹಿರಿಯ ಪತ್ರಕರ್ತ ವಾದಿರಾಜ ವ್ಯಾಸಮುದ್ರ ಹಾಗೂ ಡಾ.ಸಿ.ನಂದಿನಿ ಅವರು ಸಮಾರಂಭ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ವಿ.ವಿ ಪ್ರಭಾರ ಕುಲಸಚಿವ (ಆಡಳಿತ) ಹಾಗೂ ಮೌಲ್ಯಮಾಪನ ಕುಲಸಚಿವ ಪ್ರೊ.ಸಂಜೀವಕುಮಾರ ಕೆ.ಎಂ., ವಿ.ವಿ.ಯ ವಿದ್ಯಾವಿಷಯಕ ಪರಿಷತ್‌ ಸದಸ್ಯ ಡಾ.ಎಂ.ಎಸ್‌.ಪಾಸೋಡಿ, ವಿ.ವಿ.ಯ ಹಣಕಾಸು ಅಧಿಕಾರಿ ಪ್ರೊ.ಬಿ.ವಿಜಯ, ಸಿಂಡಿಕೇಟ್‌ ಸದಸ್ಯ ಸಂಗಮೇಶ ಪೂಜಾರಿ ಹಾಗೂ ಪ್ರಮುಖರ ಇದ್ದರು.

ಶೈಲಜಾ ಬಾಗೇವಾಡಿ, ಡಾ.ಸಂತೋಷ ಕಂಬಾರ ನಿರೂಪಿಸಿದರು. ಡಾ.ಎಂ.ಬಿ.ಕಟ್ಟಿ ವಂದಿಸಿದರು.

ಪ್ರಶಸ್ತಿ ಪುರಸ್ಕತರು

ಡಾ.ಲಕ್ಷ್ಮಣ ಕೌಂಟಿ (ಕೃತಿ– ಯಾಕ ಚಿಂತಿ ಮಾಡತಿದಿ ಎಲೆ ಮನವೆ), ಸುಬ್ರಾವ ಕಲಕರ್ಣಿ (ಪುಲ್ವಾಮಾ), ಪ್ರೊ.ಈಶ್ವರ ಎಂ.ಇಂಗನ್‌ (ಬೌದ್ಧ ನಾಟಕಗಳು–2), ಡಾ.ಬಸವರಾಜ ಪೂಜಾರ (ಮೌನದೊಳಗಿನ ಮಾತು), ಭೀಮಶೇನ ಎಂ.ಗಾಯಕವಾಡ (ಶಾಹಿರಿ– ಗಜಲ್‌ಗಳು), ಕಪಿಲ ಪಿ.ಹುಮನಾಬಾದೆ (ಹಾಣಾದಿ), ವಿಜಯಭಾಸ್ಕರ್‌ ಸೇಡಂ (ನೆನಪಿನ ಪಡಸಾಲೆ), ಡಾ.ಶಿವರಾಜ ಶಾಸ್ತ್ರಿ ಹೇರೂರು (ದಿವ್ಯಾಂಗ ದೀಪ್ತಿ). ಮಲ್ಲಿಕಾರ್ಜುನ ಕಡಕೋಳ (ಯಡ್ರಾಮಿ ಸೀಮೆ ಕಥನಗಳು), ಸಿದ್ಧಾರಾಮ ಹೊನ್ಕಲ್‌ (ಮೂರು ದೇಶ ನೂರೊಂದು ಅನುಭವ), ವಾದಿರಾಜ ವ್ಯಾಸಮುದ್ರ (ಪಯಣ). ಡಾ.ಚಿ.ಸಿ.ನಿಂಗಣ್ಣ (ಜಾನಪದ ದರ್ಪಣ). ಡಾ.ಗಾಂಧೀಜಿ ಸಿ.ಮೊಳಕೇರಿ (ಬಸವಶ್ರಿ ಪೂಜ್ಯ ಸಿದ್ಧರಾಮ ಬೆಲ್ದಾಳ ಶರಣರು ಮತ್ತು ವಚನ ಸಾಹಿತ್ಯ), ಹಣಮಂತಪ್ಪ ವಲ್ಲೇಪುರೆ (ಶ್ರೀದತ್ತ ಭಾಗವತ), ಮಹಾಂತಪ್ಪ ನಂದೂರು (ಅರವೇ ಪ್ರಮಾಣು ಅಕ್ಕ ನಾಗಮ್ಮ ಜೀವನ ಕಾವ್ಯ), ಡಾ.ಮಲ್ಲಿಕಾರ್ಜುನ ಶೆಟ್ಟಿ, ವೀರಹನುಮಾನ (ಧಮ್ಮ ಪದ), ಕಾಶೀನಾಥ ಅಂಬಲಗೆ (ಅಲ್ಲಮಪ್ರಭು: ಪ್ರತಿಭಾ ಕಾ ಶಿಕಾರ), ಡಾ.ಅಬ್ದುಲ್‌ ರಬ್‌ ಉಸ್ತಾದ್, ಡಾ.ಶಿವಾನಂದ ಎಚ್‌.ಲೇಂಗಟಿ (ಭಾರತೀಯ ಸಂವಿಧಾನ ತಿದ್ದುಪಡಿ), ರಾಜೇಶ್ವರಿ, ಸಿದ್ರಾಮ ದಾದಾರವ್‌ ವಾಘಮಾರೆ, ಪಲ್ಲವಿ ಹೀರಗೆ ಹುಮನಾಬಾದ್ (ದಿ ವುಮೆನ್‌), ದೌಲತರಾಯ ಸಂಗಣ್ಣ ದೇಸಾಯಿ (ಟ್ರೈಬಲ್‌ ವುಮೆನ್‌), ಮಲ್ಲಮ್ಮ ಜಿ.ಪಾಟೀಲ (ಎ.ಬರ್ಡ್‌), ಹಾಗೂ ಡಾ.ಸಿ.ನಂದಿನಿ (ಬೆಳಕಿನೆಡೆಗೆ).

ದಿ.ಜಯತೀರ್ಥ ರಾಜ ಪುರೋಹಿತ ಸ್ಮಾರಕ ದತ್ತಿ ರಾಜ್ಯಮಟ್ಟದ ಕನ್ನಡ ಕಥಾ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ, ಗೌರವಧನ ಪಡೆದ ಕಥೆಗಳು ಈ ಕೆಳಗಿನಂತಿವೆ.

'ಸುಧಾ' ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರಘುನಾಥ ಚ.ಹ. ಅವರ ‘ಗೋರಿ‘ ಕಥೆಗೆ ಚಿನ್ನದ ಪದಕ, ರೇಣುಕಾ ರಮಾನಂದ ಅವರ ’ಬಾಳ ಪಯಣ‘ ಕಥೆಗೆ ಬೆಳ್ಳಿ ಪದಕ, ಕನಕರಾಜ್‌ ಆರನಕಟ್ಟೆ ಅವರ ’ಸ್ಟ್ಯಾಚೂ ಆಫ್‌ ಲಿಬರ್ಟಿ’ ಕಥೆಗೆ ಕಂಚಿನ ಪದಕ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.