
ಜೇವರ್ಗಿ: ತಾಲ್ಲೂಕಿನ ಆಂದೋಲಾ ಗ್ರಾಮದ ಆರಾಧ್ಯ ದೈವ ಶ್ರೀ ಕರುಣೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಸಹಸ್ರಾರು ಭಕ್ತರ ನಡುವೆ ಅದ್ದೂರಿ ರಥೋತ್ಸವ ಜರುಗಿತು.
ಕರುಣೇಶ್ವರ ಮಠದ ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು. ಭಾನುವಾರ ಬೆಳಗ್ಗೆ 6 ಗಂಟೆಗೆ ಕರುಣೇಶ್ವರ ಮೂರ್ತಿಗೆ ವಿಶೇಷ ಪೂಜೆ, ಅಲಂಕಾರ, ರುದ್ರಾಭಿಷೇಕ, ನೈವೇದ್ಯ, ಮಹಾಮಂಗಳಾರತಿ ನೆರವೇರಿಸಲಾಯಿತು.
ಸಂಜೆ 6 ಗಂಟೆಗೆ ಸಿದ್ದಲಿಂಗ ಸ್ವಾಮೀಜಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ಗ್ರಾಮದ ಇಮ್ಮಣ್ಣಿಯವರ ಮನೆಯಿಂದ ಸಂಜೆ ನೂರಾರು ದಿವಟಿಗೆಗಳು, ಗಡೇದ ಅವರ ಮನೆಯಿಂದ ಮಿಣಿ, ಮಾಲಿಗೌಡರು, ಪೊಲೀಸ್ ಗೌಡರು, ಇಮ್ಮಣ್ಣಿ ಹಾಗೂ ಬಡಿಗೇರ ಮನೆಯಿಂದ ವಿಶೇಷ ನೈವೇದ್ಯವನ್ನು ಕರುಣೇಶ್ವರರಿಗೆ ಅರ್ಪಿಸಲಾಯಿತು.
ರಥೋತ್ಸವ ಸಂದರ್ಭದಲ್ಲಿ ಭಕ್ತರು ಉತ್ತತ್ತಿ, ಬಾದಾಮಿ, ಬಾಳೆ ಹಣ್ಣು ಎಸೆದು ಹರಕೆ ತೀರಿಸಿದರು. ರಥೋತ್ಸವದಲ್ಲಿ ವಿವಿಧ ಭಾಜಾ ಭಜಂತ್ರಿ, ಪುರವಂತರ ಸೇವೆ, ಕುಂಭ ಕಳಸ, ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ರಾತ್ರಿ 8 ಗಂಟೆಗೆ ಸಂಗೀತ ಕಾರ್ಯಕ್ರಮ ನಡೆಯಿತು.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜಿ.ಪಂ. ಮಾಜಿ ಉಪಾಧ್ಯಕ್ಷ ಗುರುಲಿಂಗಪ್ಪಗೌಡ ಮಾಲಿಪಾಟೀಲ, ಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ ಬಸವರಾಜ ಪಾಟೀಲ ನರಿಬೋಳ, ಮುಖಂಡರಾದ ಸಂಗಣ್ಣಗೌಡ ಮಾಲಿಪಾಟೀಲ, ಗೌಡಪ್ಪಗೌಡ ಪೊಲೀಸ್ ಪಾಟೀಲ, ಮಹಾದೇವಪ್ಪ ದೇಸಾಯಿ, ಕಾಶಿನಾಥ ಇಮ್ಮಣ್ಣಿ, ವೀರಶೈವ ಸಮಾಜದ ಅಧ್ಯಕ್ಷ ಸಿದ್ದು ಸಾಹು ಅಂಗಡಿ, ನಾಗಣ್ಣ ಸಾಹು ಗಡೇದ, ಮಲ್ಲಿಕಾರ್ಜುನ ಲಕ್ಕಣ್ಣಿ, ನಿಂಗಯ್ಯ ಸ್ವಾಮಿ, ಪ್ರಶಾಂತಗೌಡ ಜೈನಾಪೂರ, ಮಲ್ಕಪ್ಪ ಹೊಸೂರ, ಗೋವಿಂದ ತುಳೇರ, ಭಾಗರೆಡ್ಡಿ ಹೋತಿನಮಡು, ದೌಲತ್ರಾಯ ದೇಸಾಯಿ ಸೇರಿದಂತೆ ಸುತ್ತಮುತ್ತಲಿನ ಜೇವರ್ಗಿ, ಬಿರಾಳ.ಕೆ., ಬಿರಾಳ.ಬಿ., ಜೈನಾಪುರ, ಚನ್ನೂರ, ಕೆಲ್ಲೂರ, ಅವರಾದ ಗ್ರಾಮಗಳಿಂದ ಹಲವಾರು ಭಕ್ತರು ಆಗಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.