ADVERTISEMENT

ಕೋವಿಡ್: ಮುಚ್ಚುವ ಭೀತಿಯಲ್ಲಿ ಶೇ 20ರಷ್ಟು ಉದ್ಯಮ

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಬಿ.ಅರಸಪ್ಪ ಸುದ್ದಿಗೋಷ್ಠಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 11:23 IST
Last Updated 20 ಜನವರಿ 2021, 11:23 IST
ಕೆ.ಬಿ. ಅರಸಪ್ಪ
ಕೆ.ಬಿ. ಅರಸಪ್ಪ   

ಕಲಬುರ್ಗಿ: ಕೋವಿಡ್‌–19 ಹಾವಳಿಯಿಂದಾಗಿ ರಾಜ್ಯದಲ್ಲಿ ಶೇ 20ರಷ್ಟು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು ಮುಚ್ಚುವ ಹಂತ ತಲುಪಿದ್ದು, ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಅಗತ್ಯ ನೆರವು ನೀಡಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಬಿ.ಅರಸಪ್ಪ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಎಸ್‌ಎಂಇಗಳನ್ನೇ ನಂಬಿಕೊಂಡಿರುವ ಸಹಸ್ರಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಸಣ್ಣ, ಸೂಕ್ಷ್ಮ ಕೈಗಾರಿಕೆಗಳನ್ನು ಪುನರುಜ್ಜೀವನಗೊಳಿಸಬೇಕಾದರೆ ತೆರಿಗೆ ರಿಯಾಯಿತಿ, ಸಬ್ಸಿಡಿ ದರದಲ್ಲಿ ವಿದ್ಯುತ್ ಪೂರೈಸಬೇಕು. ತುರ್ತು ಕ್ರೆಡಿಟ್ ಲಿಂಕ್ ಗ್ಯಾರಂಟಿ ಯೋಜನೆಯಡಿ ಉದ್ಯಮಗಳಿಗೆ ಸಾಲವನ್ನು ವಿಸ್ತರಿಸುವಲ್ಲಿ ಸರ್ಕಾರವು ಸಹಕಾರಿ ಬ್ಯಾಂಕಿಂಗ್ ಸಂಸ್ಥೆಗಳನ್ನು ಸಹ ಸೇರಿಸಬೇಕು. ಇದರಿಂದ ಗ್ರಾಮೀಣ ಕೈಗಾರಿಕೆಗಳಿಗೆ ಸಹಾಯವಾಗುವುದಲ್ಲದೆ ವಿತರಣಾ ಜಾಲವನ್ನು ವಿಸ್ತರಿಸುತ್ತದೆ ಎಂದರು.

ಸಾಂಕ್ರಮಿಕ ರೋಗದಿಂದ ತೊಂದರೆಗೊಳಗಾಗಿರುವ ರಫ್ತು ಆಧಾರಿತ ಘಟಕಗಳು ತಮ್ಮ ರಫ್ತುಗಳ ಮೇಲಿನ ಬದ್ಧತೆಯನ್ನು ಪೂರೈಸಲು ಅಗತ್ಯವಾದ ಸಾಲಗಳನ್ನು ಪಡೆಯಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಎನ್.ಪಿ.ಎ. ಮಾನದಂಡಗಳನ್ನು ಸಡಿಲಗೊಳಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಉದ್ಯಮದ ಅನುಕೂಲಕ್ಕಾಗಿ ಸಾಲ ಮರುಪಾವತಿಯ ಮೇಲಿನ ಮೊರಟೋರಿಯಂ ಅವಧಿಯನ್ನು ಹಣಕಾಸಿನ ವರ್ಷಾಂತ್ಯದವರೆಗೆ ವಿಸ್ತರಿಸಬೇಕು. ಬ್ಯಾಂಕುಗಳ ಮರುಪಾವತಿಯನ್ನು ಹೆಚ್ಚಿನ ಅವಧಿಯೊಂದಿಗೆ ಮತ್ತಷ್ಟು ಸಡಿಲಗೊಳಿಸಬೇಕು. ಅಡೆತಡೆಗಳು ಮತ್ತು ರೆಡ್ ಟೇಪ್ ಇಲ್ಲದೆ ಬ್ಯಾಂಕುಗಳು ಯೋಜನೆಗಳನ್ನು ಅನುಷ್ಠಾನಗೊಳಿಸುವುದನ್ನು ಖಾತರಿಪಡಿಸಿಕೊಳ್ಳಬೇಕು. ಪ್ರಸಕ್ತ ಮಾನದಂಡಗಳ ಪ್ರಕಾರ ಅರ್ಹ ಪ್ರಕರಣಗಳಲ್ಲಿ ಎನ್.ಪಿ.ಎ. ಖಾತೆಗಳನ್ನು ಘೋಷಿಸಬಾರದು ಎಂದರು.

ರಾಜ್ಯದಾದ್ಯಂತ ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 25 ಪೈಸೆ ಹಾಗೂ ಮಾಸಿಕ ನಿಗದಿತ ಶುಲ್ಕವನ್ನು ‌₹ 10 ಹೆಚ್ಚಳ ಮಾಡಿರುವುದಾಗಿ (ಸರಾಸರಿ ಪ್ರತಿ ಯೂನಿಟ್‌ಗೆ 40 ಪೈಸೆ) ಕರ್ನಾಟಕ ವಿದ್ಯುಚ್ಯಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಇತ್ತೀಚೆಗೆ ಪ್ರಕಟಿಸಿದ್ದು ಎಂಎಸ್ಎಂಇಗಳು ತೀವ್ರ ಆಘಾತಕ್ಕೊಳಗಾಗಿವೆ. ಕೋವಿಡ್ ಸಾಂಕ್ರಾಮಿಕ ಮತ್ತು ಆರ್ಥಿಕತೆಯ ತೀವ್ರ ನಿಧಾನಗತಿಯಿಂದಎಂಎಸ್‌ಎಂಇಗಳು ತಮ್ಮ ಕಾರ್ಯಾಚರಣೆಯನ್ನು ಪುನರುಜ್ಜೀವನಗೊಳಿಸಲು ಹೆಣಗಾಡುತ್ತಿರುವಾಗ ಈ ಹೆಚ್ಚಳದಿಂದ ಇನ್ನಷ್ಟು ಸಮಸ್ಯೆಯಾಗುತ್ತದೆ ಎಂಬುದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

ಗೌರವ ಪ್ರಧಾನ ಕಾರ್ಯದರ್ಶಿ ಎನ್. ಆರ್.ಜಗದೀಶ್, ಜಂಟಿ ಕಾರ್ಯದರ್ಶಿ ಪಿ.ಎನ್. ಜೈಕುಮಾರ್,ಖಜಾಂಚಿ ಎಸ್. ಶಂಕರನ್, ಕಾಸಿಯಾ ಗ್ರಾಮೀಣಾಭಿವೃದ್ಧಿ ವಿಭಾಗದ ಪ್ಯಾನಲ್ ಮುಖ್ಯಸ್ಥ ಭೀಮಾಶಂಕರ ಪಾಟೀಲ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.