
ಬಿ.ಎಂ.ರಾವೂರ
ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವೃತ್ತಿಪರ ಕೋರ್ಸ್‌ಗಳ (ಕೆಸಿಇಟಿ) ಪ್ರವೇಶಕ್ಕೆ ಏಪ್ರಿಲ್ 23, 24ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ನಡೆಸಲು ನಿರ್ಧರಿಸಿದ್ದು, ಅರ್ಜಿ ಸಲ್ಲಿಸುತ್ತಿರುವ ವಿದ್ಯಾರ್ಥಿಗಳಿಗೆ ದಾಖಲಾತಿಗಳಲ್ಲಿನ ಸಣ್ಣಪುಟ್ಟ ದೋಷಕ್ಕೂ ಅರ್ಜಿ ಸ್ವೀಕರಿಸುತ್ತಿಲ್ಲ. ಹೀಗಾಗಿ ತಿದ್ದುಪಡಿ ಮಾಡಲು ಕಾಲಾವಕಾಶ ನೀಡಬೇಕು ಎಂದು ಹವ್ಯಾಸಿ ಪ್ರವಾಸಿ ಶಿಕ್ಷಣ ಮಾರ್ಗದರ್ಶಿ ಬಳಗದ ಗೌರವ ಕಾರ್ಯದರ್ಶಿ ಬಿ.ಎಂ.ರಾವೂರ ಒತ್ತಾಯಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಇಎಗೆ ಆನ್‌ಲೈನ್ ಮೂಲಕ ಜ.17ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಫೆ.18 ಕೊನೆಯ ದಿನವಾಗಿದೆ. ಆದರೆ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಜನ್ಮ, ಮರಣ ಪ್ರಮಾಣ ಪತ್ರದಲ್ಲಿ ಸಣ್ಣ ದೋಷವಿದ್ದರೂ ಅರ್ಜಿ ಸ್ವೀಕಾರವಾಗುತ್ತಿಲ್ಲ. ವಿದ್ಯಾರ್ಥಿ, ಆತನ ತಂದೆ, ತಾಯಿ ಹೆಸರಿನಲ್ಲಿ, ಅಡ್ಡ ಹೆಸರಿನಲ್ಲಿ ವ್ಯತ್ಯಾಸವಿದ್ದರೂ ಅರ್ಜಿ ಸ್ವೀಕರಿಸುತ್ತಿಲ್ಲ’ ಎಂದರು.
‘ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ ವಿದ್ಯಾರ್ಥಿಯ ಹೆಸರು ಮಾತ್ರ ಇದ್ದು, ಆಧಾರ್ ಕಾರ್ಡ್‌ನಲ್ಲಿ ಹೆಸರಿನೊಂದಿಗೆ ಮನೆ ಹೆಸರು ಇದ್ದರೆ ಅರ್ಜಿ ಸ್ವೀಕರಿಸುತ್ತಿಲ್ಲ. ಆಧಾರ್ ತಿದ್ದುಪಡಿ ಸೇರಿದಂತೆ ದಾಖಲಾತಿಗಳನ್ನು ಸರಿಪಡಿಸಿಕೊಳ್ಳಲು ಕನಿಷ್ಠ 90 ದಿನ ಬೇಕು. ಹೀಗೆ ಎಲ್ಲ ಕಡೆ ಗಮನಾರ್ಹ ವ್ಯತ್ಯಾಸಗಳಿಲ್ಲದಿದ್ದರೂ ವಿದ್ಯಾರ್ಥಿಗಳನ್ನು ಅಲೆದಾಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸುಮಾರು 30 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬೇಕಿದ್ದು, 4,000ಕ್ಕೂ ಅಧಿಕ ವಿದ್ಯಾರ್ಥಿಗಳು ಇಂತಹ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ವಿವರಿಸಿದರು.
‘ಸಮಸ್ಯೆಯಿಂದಾಗಿ ಸಾವಿರಾರು ವಿದ್ಯಾರ್ಥಿಗಳ ಕೆಸಿಇಟಿ ಪರೀಕ್ಷೆ ಬರೆಯುವ ಕನಸು ನನಸಾಗುವುದು ಕಷ್ಟಕರವಾಗಿದೆ. ಕೂಡಲೇ ಸಚಿವರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಸಹಾಯವಾಣಿ, ಸಂಪರ್ಕ ಕಚೇರಿಗಳ ವ್ಯವಸ್ಥೆ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.
ಪಡಿತರ ಚೀಟಿ, ಆಧಾರ್ ಕಾರ್ಡ್ ಸೇರಿ ವಿವಿಧ ದಾಖಲೆಗಳಲ್ಲಿ ತಿದ್ದುಪಡಿ ಮಾಡಲು ಪಾಲಕರು, ವಿದ್ಯಾರ್ಥಿಗಳು ಕಂದಾಯ, ನೆಮ್ಮದಿ ಕೇಂದ್ರ, ಅಂತರ್ಜಾಲ ಕೇಂದ್ರಗಳಿಗೆ ಅಲೆಯುತ್ತಿದ್ದಾರೆ. ಅಡ್ಡ ಮಾರ್ಗದಿಂದ ಹಣ ವಸೂಲಿ ಮಾಡುವ ಮಧ್ಯವರ್ತಿಗಳ ತಂಡವೂ ಸೃಷ್ಟಿಯಾಗಿದೆ. ಇದಕ್ಕೆ ತಡೆ ಒಡ್ಡಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ನಾರಾಯಣ ಜೋಶಿ, ಸಿದ್ದೇಶ್ವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.