ADVERTISEMENT

ಕೇತೇಶ್ವರ ಜಯಂತಿ ಸರ್ಕಾರ ಆಚರಿಸಲಿ: ಬಸವಪ್ರಭು ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 6:20 IST
Last Updated 17 ನವೆಂಬರ್ 2025, 6:20 IST
ಕಲಬುರಗಿಯ ನ್ಯೂ ಬಂಬೂಬಜಾರ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿವಶರಣ ಮೇದಾರ ಕೇತೇಶ್ವರ ಗುರುಗಳ 895ನೇ ಜಯಂತಿ ಕಾರ್ಯಕ್ರಮವನ್ನು ಚಿತ್ರದುರ್ಗದ ಮೇದಾರ ಗುರುಪೀಠದ ಇಮ್ಮಡಿ ಬಸವಪ್ರಭು ಕೇತೇಶ್ವರ ಸ್ವಾಮೀಜಿ ಉದ್ಘಾಟಿಸಿದರು
ಕಲಬುರಗಿಯ ನ್ಯೂ ಬಂಬೂಬಜಾರ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿವಶರಣ ಮೇದಾರ ಕೇತೇಶ್ವರ ಗುರುಗಳ 895ನೇ ಜಯಂತಿ ಕಾರ್ಯಕ್ರಮವನ್ನು ಚಿತ್ರದುರ್ಗದ ಮೇದಾರ ಗುರುಪೀಠದ ಇಮ್ಮಡಿ ಬಸವಪ್ರಭು ಕೇತೇಶ್ವರ ಸ್ವಾಮೀಜಿ ಉದ್ಘಾಟಿಸಿದರು   

ಕಲಬುರಗಿ: ಮೇದಾರ ಕೇತೇಶ್ವರ ಸಮಾಜ ಸೇವಾ ಸಂಘದ ವತಿಯಿಂದ ನಗರದ ಫಿಲ್ಟರ್‌ಬೆಡ್‌ ರಸ್ತೆಯ ನ್ಯೂ ಬಂಬೂ ಬಜಾರ್‌ನಲ್ಲಿ ಭಾನುವಾರ ಶಿವಶರಣ ಮೇದಾರ ಕೇತೇಶ್ವರ ಗುರುಗಳ 895ನೇ ಜಯಂತ್ಯುತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಚಿತ್ರದುರ್ಗದ ಮೇದಾರ ಗುರುಪೀಠ ಕೇತೇಶ್ವರ ಮಹಾಮಠದ ಪೀಠಾಧಿಪತಿ ಇಮ್ಮಡಿ ಬಸವಪ್ರಭು ಕೇತೇಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ‘ರಾಜ್ಯದಲ್ಲಿ 2011ರ ಜನಗಣತಿ ಪ್ರಕಾರ ಮೇದಾರ ಸಮಾಜದ ಜನಸಂಖ್ಯೆಯನ್ನು 44,160 ತೋರಿಸಲಾಗಿದೆ. ಇದರಿಂದ ಸಮಾಜಕ್ಕೆ ಸರ್ಕಾರದ ಅನುದಾನ, ಸೌಲಭ್ಯಗಳು ಸಿಗುತ್ತಿಲ್ಲ’ ಎಂದರು.

‘ರಾಜ್ಯದಲ್ಲಿ ನಮ್ಮ ಜನಸಂಖ್ಯೆ ಸುಮಾರು 4 ಲಕ್ಷಕ್ಕಿಂತ ಮೇಲ್ಪಟ್ಟು ಇದೆ. ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಬೇಕು. ಶಿವಶರಣ ಮೇದಾರ ಕೇತೇಶ್ವರ ಗುರುಗಳ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಚಿತ್ರದುರ್ಗದ ಅಖಿಲ ಕರ್ನಾಟಕ ಶ್ರೀಗುರು ಮೇದಾರ ಕೇತೇಶ್ವರ ಟ್ರಸ್ಟ್‌ ಅಧ್ಯಕ್ಷ ಸಿ.ಪಿ.ಪಾಟೀಲ, ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಎಂ.ಹಣಮಂತಪ್ಪ ಶ್ರೀಧರಗಡ್ಡೆ, ಮಹಾನಗರ ಪಾಲಿಕೆ ಸದಸ್ಯ ದಿಗಂಬರ ನಾಡಗೌಡ, ಮೇದಾರ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಯರಗೋಳ, ಮೇದಾರ ಕೇತೇಶ್ವರ ಸಮಾಜ ಸೇವಾ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸೂರ್ಯವಂಶಿ, ಮೇದಾರ ಸಮಾಜದ ಬೀದರ್‌ ಜಿಲ್ಲಾಧ್ಯಕ್ಷ ರಾಜಕುಮಾರ ನಾಗೇಶ್ವರ, ಸಮಾಜದ ಯಾದಗಿರಿ ಜಿಲ್ಲಾ ಗೌರವ ಅಧ್ಯಕ್ಷ ಸುರೇಶ ಬಾಬು ಪ್ಯಾಟಿ ಸೇರಿದಂತೆ ಸಮಾಜದ ಹಿರಿಯರು, ಮಹಿಳೆಯರು, ಯುವಕರು ಮತ್ತು ಮಕ್ಕಳು ಭಾಗವಹಿಸಿದ್ದರು.

ಮೆರವಣಿಗೆ: ಜಯಂತ್ಯುತ್ಸವದ ನಿಮಿತ್ತ ನಗರದ ಜಗತ್ ವೃತ್ತದಿಂದ ನ್ಯೂ ಬಂಬೂ ಬಜಾರ್‌ವರೆಗೆ ಕೇತೇಶ್ವರ ಗುರುಗಳ ಭಾವಚಿತ್ರದ ಅದ್ದೂರಿ ಮೆರವಣಿಗೆ ಜರುಗಿತು. 51 ಕುಂಭಕಳಸದೊಂದಿಗೆ ಮಹಿಳೆಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.