ADVERTISEMENT

KGF​ ಸಿನಿಮಾ ನೋಡಿ ಮನೆ ಬಿಟ್ಟು ಮುಂಬೈಗೆ ಹೋದವ ಆಧಾರ್‌ ಒಟಿಪಿಗಾಗಿ ಊರಿಗೆ ಬಂದ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 4:41 IST
Last Updated 22 ಜುಲೈ 2025, 4:41 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಎ.ಐ ಚಿತ್ರ

ಕಲಬುರಗಿ: ‘ಕೆಜಿಎಫ್‌​ ಚಲನಚಿತ್ರದ ಸ್ಫೂರ್ತಿಯಿಂದ ಹಣ ಸಂಪಾದನೆ ಮಾಡಲು ಮನೆ ಬಿಟ್ಟು ಮುಂಬೈಗೆ ಹೋಗಿದ್ದ 17 ವರ್ಷದ ನನ್ನ ಮಗ 16 ತಿಂಗಳ ಬಳಿಕ ಆಧಾರ್‌ ಕಾರ್ಡ್‌ನ ಒಟಿಪಿ ನೆಪದಲ್ಲಿ ಮಾತನಾಡಿ ಮನೆಗೆ ಮರಳಿದ್ದಾನೆ’ ಎಂದು ಆತನ ಪೋಷಕ ಫಿನಿಕ್ಸ್ ಹೇಳಿದರು.

ADVERTISEMENT

‘ಕಾವೇರಿ ನಗರದಲ್ಲಿ ಮಸಾಲೆ ಪದಾರ್ಥ ವ್ಯಾಪಾರಿ ಮಾಡಿಕೊಂಡಿದ್ದೇನೆ. 2023ರ ಡಿಸೆಂಬರ್​ನಲ್ಲಿ ಮನೆಯಿಂದ ಆಟವಾಡಲು ಹೋದ 17 ವರ್ಷದ ಮಗ ನಾಪತ್ತೆಯಾಗಿದ್ದ. ಈ ಕುರಿತು ಚೌಕ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ತಾಯಿ ಇಲ್ಲದ ಮಗನನ್ನು ಕಾಳಜಿಯಿಂದ ಬೆಳೆಸುತ್ತಿದ್ದೆ. ಬಡತನದಿಂದ ಎಷ್ಟು ದಿನ ಹೀಗೆ ಇರುವುದು ಇದರಿಂದ ಹೊರ ಬರಬೇಕು ಎಂದುಕೊಂಡು ಕೆಜಿಎಫ್‌ ಸಿನಿಮಾದ​ ನಾಯಕ ನಟನ ಮಾದರಿಯಲ್ಲಿ ಮುಂಬೈಗೆ ಹೋಗಿ ಹಣ ಗಳಿಸುವ ಯೋಚನೆ ಮಾಡಿದ. ಕಲಬುರಗಿಯಿಂದ ರೈಲು ಹಳಿ ಮೇಲೆ ನಡೆದುಕೊಂಡೇ ಗಾಣಗಾಪುರ ರೈಲು ನಿಲ್ದಾಣದವರೆಗೆ ಹೋದ. ರಾತ್ರಿ ಆಗಿದ್ದರಿಂದ ಅಲ್ಲಿಂದ ರೈಲಿನಲ್ಲಿ ಮುಂಬೈಗೆ ಹೋದ’ ಎಂದರು.

‘ಮುಂಬೈನಲ್ಲಿ ಕನ್ನಡಿಗರೊಬ್ಬರನ್ನು ಪರಿಚಯಿಸಿಕೊಂಡು ಹೋಟೆಲ್‌ನಲ್ಲಿ​ ಕೆಲಸಕ್ಕೆ ಸೇರಿಕೊಂಡಿದ್ದ. ತಿಂಗಳಿಗೆ ₹ 12 ಸಾವಿರ ವೇತನ ಪಡೆಯುತ್ತಿದ್ದ. ಹಣ ಜಮೆ ಮಾಡಲು ಬ್ಯಾಂಕ್‌ನಲ್ಲಿ ಖಾತೆ ತೆರೆಯಬೇಕಿತ್ತು. ಇದಕ್ಕೆ ಆಧಾರ್​ ಕಾರ್ಡ್ ಅವಶ್ಯವಿತ್ತು. ಬೆಂಗಳೂರಿನಲ್ಲಿ ಸಹೋದರಿ ಮನೆಯಲ್ಲಿ ಇದ್ದಾಗ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ. ಅಲ್ಲಿಗೆ ತೆರಳಿ ಆಧಾರ್ ಕಾರ್ಡ್ ಝರಾಕ್ಸ್ ಪಡೆದಿದ್ದ’ ಎಂದು ಹೇಳಿದರು.

‘ಆಧಾರ್ ಕಾರ್ಡ್‌ಗೆ ಜೋಡಣೆಯಾಗಿದ್ದ ನನ್ನ ಫೋನ್ ನಂಬರ್ ಬದಲಾಯಿಸಲು ಅರ್ಜಿ ಸಲ್ಲಿಸಿದ್ದ. ಅರ್ಜಿ ಸ್ವೀಕರಿಸುವಾಗ ಒಟಿಪಿಯು ನನ್ನ ಮೊಬೈಲ್‌ಗೆ ಬಂದಿತ್ತು. ಆ ಒಟಿಪಿ ಪಡೆಯಲು ನನ್ನ ಮಗ ನನಗೆ ಫೋನ್ ಕರೆ ಮಾಡಿದ್ದ. ಆತನ ಜೊತೆಗೆ ಮಾತನಾಡಿ, ಮನವೊಲಿಸಿ ಕರೆದುಕೊಂಡು ಬಂದಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.