ADVERTISEMENT

ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟ: ಬಿ.ಶ್ಯಾಮಸುಂದರ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 6:34 IST
Last Updated 13 ಡಿಸೆಂಬರ್ 2025, 6:34 IST
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದ 44ನೇ ಅಂತರ್ ಮಹಾವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಬಿ.ಶ್ಯಾಮಸಂದರ್ ಸ್ಮಾರಕ ಕಾಲೇಜಿನ ಕ್ರೀಡಾಪಟುಗಳಿಗೆ ಸಮಗ್ರ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದ 44ನೇ ಅಂತರ್ ಮಹಾವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಬಿ.ಶ್ಯಾಮಸಂದರ್ ಸ್ಮಾರಕ ಕಾಲೇಜಿನ ಕ್ರೀಡಾಪಟುಗಳಿಗೆ ಸಮಗ್ರ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು   

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆದ 2025-26ನೇ ಸಾಲಿನ 44ನೇ ಅಂತರ ಮಹಾವಿದ್ಯಾಲಯ (ಪುರುಷ ಮತ್ತು ಮಹಿಳಾ) ಕ್ರೀಡಾಕೂಟದಲ್ಲಿ ಡಾ. ಮಲ್ಲಿಕಾರ್ಜುನ ಖರ್ಗೆ ಪ್ರಾಯೋಜಕತ್ವದ ಖರ್ಗೆ ಚಾಲೆಂಜ್ ಟ್ರೋಫಿಯನ್ನು ಬಿ.ಶ್ಯಾಮಸಂದರ್ ಸ್ಮಾರಕ ದೈಹಿಕ ಶಿಕ್ಷಣ ಮಹಾವಿದ್ಯಾಲಯವು 93 ಅಂಕ ಗಳಿಸುವುದರೊಂದಿಗೆ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಬಿ.ಎಸ್.ಎಂ ಕಾಲೇಜಿನ ದೈಹಿಕ ಶಿಕ್ಷಣ ಮಹಿಳೆಯರ ತಂಡ 70 ಅಂಕ ಗಳಿಸಿ ರನ್ನರ್‌ಅಪ್‌ ಆಯಿತು.

ಕಲ್ಯಾಣ ಕರ್ನಾಟಕದ ಗುಲಬರ್ಗಾ ವಿಶ್ವವಿದ್ಯಾಲಯದ ಅಧೀನದ 31 ಪದವಿ ಮಹಾವಿದ್ಯಾಲಯಗಳಿಂದ ಸುಮಾರು 350 ಕ್ರೀಡಾಪಟುಗಳು ಸೇರಿದಂತೆ 60 ದೈಹಿಕ ಶಿಕ್ಷಕರು ಹಾಗೂ ತರಬೇತಿದಾರರು ಹಾಗೂ 80 ತೀರ್ಪುಗಾರರು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಪುರುಷರ ವಿಭಾಗ ವೈಯಕ್ತಿಕ ‘ಹೆಚ್ಚು ಅಂತರದ ಓಟ’ ದ ಸ್ಪರ್ಧೆಯಲ್ಲಿ ಕಲಬುರಗಿಯ ದತ್ತ ಕಾಲೇಜಿನ ಶ್ರೀನಿವಾಸ ಆರ್. ಗುವಿವಿಯ ದೈಹಿಕ ಶಿಕ್ಷಣ ಶಿಕ್ಷಕಕರ ಚಾಲೆಂಜ್‌ ಟ್ರೋಫಿಗೆ ಅರ್ಹರಾದರು. ಮಹಿಳೆಯರ ವಿಭಾಗದಲ್ಲಿ ಸ್ವಾಯತ್ತ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಸ್ವಪ್ನಾ ಅವರು ಮಹದೇವಪ್ಪ ಯಾತನೂರ್ ಟ್ರೋಫಿಗೆ ಭಾಜನರಾದರು.

‘ಫೀಲ್ಡ್ ಇವೆಂಟ್’ ಸ್ಪರ್ಧೆಯಲ್ಲಿ ಲುಬನ ಎ. ಪಠಾಣ, ಇಸ್ಮಾಯಿಲ್, ಟ್ರ್ಯಾಕ್ ಇವೆಂಟ್ ಸ್ಪರ್ಧೆಯಲ್ಲಿ ಶ್ರೀನಿವಾಸ, ಅತಿ ವೇಗದ ವುಮೆನ್ ಆಫ್‌ ದ ಮೀಟ್ ಸ್ಪರ್ಧೆಯಲ್ಲಿ ವಿಜಯಲಕ್ಷ್ಮಿ, ಅತಿ ವೇಗದ ಓಟಗಾರರಾಗಿ ಬಾಬು, ವಿಜಯಲಕ್ಷ್ಮಿ, ಕಡಿಮೆ ಅಂತರದ ಓಟದ ಸ್ಪರ್ಧೆಯಲ್ಲಿ ಅಶ್ವಥ್ ಆರ್. ಸಾಧನೆ ಮಾಡಿದರು.

ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಕುಲಸಚಿವ ಪ್ರೊ. ರಮೇಶ್ ಲಂಡನಕರ್‌ ಅವರು ಟ್ರೋಫಿ ಹಾಗೂ ಪ್ರಮಾಣಪತ್ರ ವಿತರಿಸಿದರು. ಮೌಲ್ಯಮಾಪನ ಕುಲಸಚಿವ ಎನ್.ಜಿ.ಕಣ್ಣೂರ, ವಿತ್ತಾಧಿಕಾರಿ ಜಯಂಬಿಕಾ, ದೈಹಿಕ ಶಿಕ್ಷಣ ವಿಭಾಗದ ಸಂಯೋಜಕ ಹಾಗೂ ಪ್ರಾಂಶುಪಾಲ ಎಚ್.ಎಸ್. ಜಂಗೆ, ಜಿ.ಎಸ್. ಪಟ್ಟಣಕರ್‌ ಉಪಸ್ಥಿತರಿದ್ದರು.