ADVERTISEMENT

ಲಾಕ್‌ಡೌನ್‌: ದುಬಾರಿಯತ್ತ ಕಿರಾಣಿ ಸಾಮಗ್ರಿ, ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ

ಸರಕು ಸಾಗಣೆ ವಾಹನಗಳ ದರ ಹೆಚ್ಚಳ

ಸಂತೋಷ ಈ.ಚಿನಗುಡಿ
Published 3 ಮೇ 2021, 3:30 IST
Last Updated 3 ಮೇ 2021, 3:30 IST
ರವೀಂದ್ರ ಮಾದಮಶೆಟ್ಟಿ
ರವೀಂದ್ರ ಮಾದಮಶೆಟ್ಟಿ   

ಕಲಬುರ್ಗಿ: ಜಿಲ್ಲೆಯಲ್ಲಿ ಮತ್ತೆ ಲಾಕ್‌ಡೌನ್‌ ನಿಮಯಗಳನ್ನು ಹೇರಿದ್ದರಿಂದ ಅಗತ್ಯ ವಸ್ತುಗಳು ಹಾಗೂ ದಿನಸಿ ಖರೀದಿ ಮೇಲೆ ಪರಿಣಾಮ ಬೀರಿದೆ. ಅದರಲ್ಲೂ ಆಹಾರ ಸಾಮಗ್ರಿಗಳ ಬೆಲೆ 15 ದಿನಗಳಲ್ಲಿ ತುಸು ದುಬಾರಿಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ಗಮನಾರ್ಹ ವ್ಯತ್ಯಾಸ ಕಂಡು ಬಾರದಿದ್ದರೂ ಚಿಲ್ಲರೆ ವ್ಯಾಪಾರದಲ್ಲಿ ಏರಿಕೆ ಮಾಡಲಾಗಿದೆ.

ಇಲ್ಲಿನ ಎಪಿಎಂಸಿ, ಕಿರಾಣಾ ಬಜಾರ್‌ ಹಾಗೂ ವಿವಿಧ ಮಾಲ್‌ಗಳಲ್ಲಿ ಜಿಲ್ಲೆಯ ಎಲ್ಲ ಕಿರಾಣಿ ವ್ಯಾಪಾರಿಗಳು ಸಗಟು ಖರೀದಿಸುತ್ತಾರೆ. ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂ ಜಾರಿಯಾದಾಗಿನಿಂದಲೂ ಈ ಸಗಟು ಮಾರುಕಟ್ಟೆಗೆ ಬರುವವರ ಸಂಖ್ಯೆ ಕುಸಿದಿದೆ. ಹಗಲಿನಲ್ಲೂ ಕರ್ಫ್ಯೂ ಜಾರಿಗೆ ತಂದ ಬಳಿಕವಂತೂ ಬೆರಳೆಣಿಕೆಯಷ್ಟು ವ್ಯಾಪಾರಿಗಳು ಮಾತ್ರ ದಿನಸಿ ಖರೀದಿಗೆ ಬರುತ್ತಿದ್ದಾರೆ. ಇದು ಸಹಜವಾಗಿಯೇ ದರ ಹೆಚ್ಚಳಕ್ಕೆ ಕಾರಣವಾಗಿದೆ.

ಇನ್ನೊಂದೆಡೆ, ಕರ್ಫ್ಯೂ ವಿಧಿಸಿದಾಗಿನಿಂದ ಹಳ್ಳಿ ಹಾಗೂ ಹೋಬಳಿ ಕಡೆಯಿಂದ ನಗರಕ್ಕೆ ಬರುವ ಸರಕು ಸಾಗಣೆ ವಾಹನಗಳ ಸಂಖ್ಯೆ ಇಳಿದಿದೆ. ಬೆಳಿಗ್ಗೆ ಮಾತ್ರ ದಿನಸಿ ಖರೀದಿಗೆ ಅವಕಾಶ ನೀಡಿದ್ದರಿಂದ ಬಹಳಷ್ಟು ವರ್ತಕರು ಪ್ರತ್ಯೇಕ ಬಾಡಿಗೆ ವಾಹನ ಮಾಡಿಕೊಂಡು ಬರಬೇಕಾಗಿದೆ. ಹೀಗೆ ಖರೀದಿಗೆ ತಗಲುವ ವಾಹನದ ವೆಚ್ಚವನ್ನೂ ವ್ಯಾಪಾರಿಗಳು ಗ್ರಾಹಕರ ಮೇಲೆ ಹೇರುತ್ತಿದ್ದಾರೆ.

ADVERTISEMENT

ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ ₹ 95 ಇದ್ದ ಉತ್ತಮ ತೊಗರಿಬೇಳೆ ದರ ಈಗ ₹ 98 ಆಗಿದೆ. ಕಿರಾಣಿ ಅಂಗಡಿಗಳವರು ಇದನ್ನೇ ₹ 105ಕ್ಕೆ ಮಾರಾಟ ಮಾಡುತ್ತಿದ್ದಾರೆ. ₹ 95 ಇದ್ದ ಶೇಂಗಾಕಾಳಿನ ದರ ಈಗ ₹ 105. ಅಂಗಡಿಯವರು ₹ 110ಕ್ಕೆ ಮಾರುತ್ತಿದ್ದಾರೆ. ಎಪಿಎಂಸಿಯಲ್ಲಿ ಜೋಳ ಹಾಗೂ ಅಕ್ಕಿ ದರದಲ್ಲಿ ವ್ಯತ್ಯಾಸ ಕಂಡುಬಂದಿಲ್ಲ; ಆದರೆ, ಕಿರಾಣಿ ಅಂಗಡಿಗಳಲ್ಲಿ ಎರಡೂ ಧಾನ್ಯಗಳ ಮೇಲೆ ₹ 5 ಹೆಚ್ಚುವರಿ ಪಡೆಯುತ್ತಿದ್ದಾರೆ. ₹ 33 ಇದ್ದ ಬೆಲ್ಲದ ಧಾರಣೆ ₹ 40 ಆಗಿದ್ದು, ಗ್ರಾಹಕರು ಕಿರಾಣಿಗಳಲ್ಲಿ ₹ 50ಕ್ಕೆ ಖರೀದಿಸುವುದು ಅನಿವಾರ್ಯವಾಗಿದೆ.

ಮಾಂಸ, ಮೊಟ್ಟೆ ಬಲು ದುಬಾರಿ: ಗಮನಾರ್ಹ ಬದಲಾವಣೆ ಕಂಡುಬಂದಿದ್ದು ಮಾಂಸದ ವ್ಯಾಪಾರದಲ್ಲಿ. ಎರಡು ವಾರಗಳ ಹಿಂದೆ ₹ 160 ಇದ್ದ ಚಿಕನ್‌ ದರ ಈಗ ₹ 200ಕ್ಕೆ ಏರಿದೆ. ಮಾಂಸದ ಅಂಗಡಿಗಳಲ್ಲಿ ₹ 220ಕ್ಕೆ ಕೆ.ಜಿ.ಯಂತೆ ಮಾರುತ್ತಿದ್ದಾರೆ. ಅದರಂತೆ, ಮಟನ್‌ ದರ ಕೂಡ ₹ 600ರಿಂದ ₹ 620ಕ್ಕೆ ಏರಿಕೆಯಾಗಿದೆ. ಇನ್ನೊಂದೆಡೆ, ₹ 5 ಇದ್ದ ಮೊಟ್ಟೆ ದರ ಈಗ ₹ 6ಕ್ಕೆ ಏರಿಕೆಯಾಗಿದೆ. ಅದರಲ್ಲೂ ಜವಾರಿ ಮಟ್ಟೆಗಳ ದರ ₹ 12ರಿಂದ ₹ 15ಕ್ಕೆ ಜಿಗಿದಿದೆ.

ಊಟದ ದರವೂ ಹೆಚ್ಚಳ: ಮಾಂಸ, ಮೊಟ್ಟೆ ದರ ಏರಿಸಿದ ಪರಿಣಾಮ ಮಾಂಸಾಹಾರಿ ಹೋಟೆಲ್‌ಗಳಲ್ಲೂ ಊಟದ ದರ ಹೆಚ್ಚಳವಾಗಿದೆ. ₹ 140ರಿಂದ ₹ 150 ಇದ್ದ ಚಿಕನ್‌ ಬಿರಿಯಾನಿ ದರ ಈಗ ₹ 210ಕ್ಕೆ ಏರಿಕೆಯಾಗಿದೆ. ಶಾಖಾಹಾರಿ ಹೋಟೆಲ್‌ ಹಾಗೂ ಖಾನಾವಳಿಗಳಲ್ಲೂ ಒಂದು ಫುಲ್‌ಮೀಲ್ಸ್‌ ದರ ₹40ರಿಂದ ₹60ಕ್ಕೆ ಏರಿಕೆಯಾಗಿದೆ. ₹ 5ಕ್ಕೆ ಒಂದರಂತೆ ಸಿಗುತ್ತಿದ್ದ ರೊಟ್ಟಿ ದರ ಈಗ ₹ 10.‌

ಜೋಳ ಕೇಳುವವರೇ ಇಲ್ಲ!‌
ಲಾಕ್‌ಡೌನ್‌ ಜಾರಿಗೆ ಬಂದ ಮೇಲೆ ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಜೋಳವನ್ನು ಕೇಳುವವರೇ ಇಲ್ಲವಾಗಿದೆ. ಈ ಹಿಂದೆ ಪ್ರತಿ ದಿನ 90ರಿಂದ 100 ಕ್ವಿಂಟಲ್‌ ಜೋಳ ಮಾರುತ್ತಿದ್ದ ಸಗಟು ವ್ಯಾಪಾರಿಗಳು ಈಗ ಕೇವಲ 5ರಿಂದ 10 ಕ್ವಿಂಟಲ್‌ ಮಾರುವಂತಾಗಿದೆ.

ಪ್ರಸಕ್ತ ವರ್ಷದ ಆರಂಭದಿಂದಲೂ ಕ್ವಿಂಟಲ್‌ಗೆ ₹ 2500ರಿಂದ ₹ 3800 (ನಂಬರ್‌ ಒನ್‌) ಇದ್ದ ಜೋಳದ ದರ ಈಗಲೂ ಹಾಗೇ ಇದೆ. ಆದರೆ, ವರ್ತಕರು ಮಾರುಕಟ್ಟೆಗೆ ಬಾರದ ಕಾರಣ ಅಪಾರ ಪ್ರಮಾಣದ ಜೋಳ ಗೋದಾಮಿನಲ್ಲಿ ಬಿದ್ದಿದೆ.‌ ಹೋಬಳಿ ಹಾಗೂ ಗ್ರಾಮೀಣ ಪ್ರದೇಶದ ವ್ಯಾಪಾರಿಗಳು ಲಾಕ್‌ಡೌನ್‌ ಪರಿಣಾಮ ಹಳ್ಳಿಗಳಲ್ಲೇ ಜೊಳ ಖರೀದಿಸುತ್ತಿದ್ದಾರೆ ಎನ್ನುವುದು ಸಗಟು ವ್ಯಾಪಾರಿ ಚಂದ್ರಕಾಂತ ಅವರ ಅಳಲು.

ಅಡುಗೆ ಎಣ್ಣೆ ದರ ಗಗನಮುಖಿ
ಇದೇ ಫೆಬ್ರುವರಿಯಲ್ಲಿ ₹ 90 ಇದ್ದ ಅಡುಗೆ ಎಣ್ಣೆ ದರ ಏಪ್ರಿಲ್‌ ಮೊದಲ ವಾರಕ್ಕೆ ₹ 160ಕ್ಕೆ ಏರಿಕೆಯಾಗಿತ್ತು. ಲಾಕ್‌ಡೌನ್‌ ಜಾರಿಗೆ ಬಂದ ಮೇಲೆ ಮತ್ತೆ ₹ 10 ಹೆಚ್ಚಾಗಿದೆ.

‘ಅಡುಗೆ ಎಣ್ಣೆಯ ಉತ್ಪಾದನೆ ನಮ್ಮ ದೇಶದಲ್ಲಿ ಕಡಿಮೆ. ಬಹಳಷ್ಟು ಎಣ್ಣೆಯನ್ನು ಮಲೇಷಿಯಾ ಮತ್ತಿತರ ದೇಶಗಳಿಂದಲೇ ಆಮದು ಮಾಡಿಕೊಳ್ಳಲಾಗುತ್ತದೆ.ಅರ್ಜೆಂಟೀನಾ, ಸಿಂಗಪೂರ, ಮಲೇಷಿಯಾ, ಇಂಡೋನೇಷಿಯ ದೇಶಗಳೇ ನಮ್ಮ ಎಣ್ಣೆ ಪೂರೈಸಲು ಇರುವ ಆಧಾರ. ಇವುಗಳ ರಫ್ತು ದರ ಏರಿಕೆಯಾಗಿದ್ದರಿಂದ ಎಣ್ಣೆ ದರವೂ ಹೆಚ್ಚಳವಾಗಿದೆ’ ಎನ್ನುತ್ತಾರೆ ಕಿರಾಣಿ ವ್ಯಾಪಾರಿಗಳು.

ಮಹಾರಾಷ್ಟ್ರ ಹಾಗೂ ಆಂಧ್ರಗಳಿಂದ ರಾಜ್ಯಕ್ಕೆ ಬರುತ್ತಿದ್ದ ಅಡುಗೆ ಎಣ್ಣೆ ಸರಬರಾಜು ಕೂಡ ಈಗ ಕಡಿಮೆ ಆಗಿದ್ದು, ಇತರ ರಾಜ್ಯಗಳಿಗಿಂತಲೂ ಕರ್ನಾಟಕದಲ್ಲಿ ಇದು ದುಬಾರಿಯಾಗಿದೆ ಎನ್ನುವುದು ಸಗಟು ವ್ಯಾಪಾರಿಗಳ ಹೇಳಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.