ADVERTISEMENT

ಮೊದಲು ಕೆಕೆಆರ್‌ಡಿಬಿಗೆ ಘೋಷಿಸಿದ ₹ 1500 ಕೋಟಿ ಕೊಡಿ: ಪ್ರಿಯಾಂಕ್ ಖರ್ಗೆ

₹ 5 ಸಾವಿರ ಕೋಟಿ ಘೋಷಣೆ ಮೂಗಿಗೆ ತುಪ್ಪ ಸವರುವ ಘೋಷಣೆ: ಪ್ರಿಯಾಂಕ್ ಟೀಕೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2022, 12:29 IST
Last Updated 18 ಸೆಪ್ಟೆಂಬರ್ 2022, 12:29 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಕಲಬುರಗಿ: ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಕೆಆರ್‌ಡಿಬಿಗೆ ಮೊದಲು ಘೋಷಿಸಿದ ₹ 3 ಸಾವಿರ ಕೋಟಿ ಪೈಕಿ ₹ 1500 ಕೋಟಿ ಬಿಡುಗಡೆ ಮಾಡಿದ್ದಾರೆ. ಬಾಕಿ ಇರುವ ₹ 1500ನ್ನು ಕೆಕೆಆರ್‌ಡಿಬಿ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಲಿ. ಆ ನಂತರ ₹ 5 ಸಾವಿರ ಕೋಟಿಯ ಬಗ್ಗೆ ಮಾತನಾಡಲಿ ಎಂದು ಕೆಪಿಸಿಸಿ ಮಾಧ್ಯಮ ಸಮನ್ವಯ ವಿಭಾಗದ ಮುಖ್ಯಸ್ಥ, ಶಾಸಕ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಕೆಆರ್‌ಡಿಬಿಗೆ ಘೋಷಿತ ಅನುದಾನದಲ್ಲಿ ₹ 1500 ಕೋಟಿಯನ್ನು ವಿಶೇಷ ಅಭಿವೃದ್ಧಿ ಯೋಜನೆಯಡಿ ಮಹಾತ್ವಾಕಾಂಕ್ಷೆ ತಾಲ್ಲೂಕುಗಳೆಂದು ಮರುನಾಮಕರಣ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ಅದೇ ಹಣವನ್ನು ಮಂಡಳಿಯ ಹಣ ಎಂದು ಬಿಂಬಿಸಲು ಹೊರಟಿದ್ದಾರೆ. ಇದನ್ನು ಗಮನಿಸಿದರೆ, ಬೊಮ್ಮಾಯಿ ಅವರು ಸುಳ್ಳು ಹೇಳುವುದರಲ್ಲಿ ಮೋದಿ ಅವರಿಗಿಂತಲೂ ನಿಸ್ಸೀಮರಾಗಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘‌₹ 5 ಸಾವಿರ ಕೋಟಿಯನ್ನು ಮುಂದಿನ ಬಜೆಟ್‌ನಲ್ಲಿ ಒದಗಿಸುವುದಾಗಿ ಹೇಳಿದ್ದಾರೆ. ಆದರೆ, ಬಜೆಟ್ ಮಂಡಿಸಿದ ಕೆಲ ದಿನಗಳಲ್ಲೇ ವಿಧಾನಸಭಾ ಚುನಾವಣೆಗಳು ಬರಲಿವೆ. ಯಾವ ಸರ್ಕಾರ ಬರುತ್ತದೋ ಯಾರು ಬಲ್ಲರು. ಈ ಘೋಷಣೆಗೆ ಏನಾದರೂ ಅರ್ಥವಿದೆಯೇ’ ಎಂದು ಹರಿಹಾಯ್ದರು.

ADVERTISEMENT

‘ಕಲಬುರಗಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಜವಳಿ ಪಾರ್ಕ್ ಯೋಜನೆಯಲ್ಲಿ ಅವ್ಯವಹಾರವಾಗಿದೆ ಎಂದು ನಾನು ಹೇಳಿದರೆ ಆರೋಪ ಮಾಡುತ್ತೇನೆ ಎನ್ನುತ್ತಾರೆ. ಹಾಗಾಗಿ ನಾನು ಲಿಖಿತ ಪ್ರಶ್ನೆ ಕೇಳಿದಾಗ ಇಲಾಖೆಯ ಉನ್ನತ ಅಧಿಕಾರಿಗಳು ಉತ್ತರಿಸಿ, ಈ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ತನಿಖೆ ನಡೆಯುತ್ತಿದೆ. ಇದರಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ದ ದೋಷಾರೋಪಣೆ ಪಟ್ಟಿ ತಯಾರಿಸಿ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ. ಇದರರ್ಥ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದಂತಲ್ಲವೇ’ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಗದೇವ ಗುತ್ತೇದಾರ, ಸುಭಾಷ್ ರಾಠೋಡ, ಶಿವಾನಂದ ಪಾಟೀಲ ಮರತೂರ, ಶಿವು ಹೊನಗುಂಟಿ, ಈರಣ್ಣ ಝಳಕಿ ಇದ್ದರು.

‘ಹಣ ದುರ್ಬಳಕೆ; ಸಂಘದ ವಿರುದ್ಧ ತನಿಖೆಗೆ ಆದೇಶ’

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಅಭಿವೃದ್ದಿ, ಕೃಷಿ ಹಾಗೂ ಸಾಂಸ್ಕೃತಿಕ‌ ಸಂಘವು ಹಣ ಬಳಕೆ ಮಾಡಿದ್ದಕ್ಕೆ ಇಲಾಖೆಯಿಂದ ಘಟನೋತ್ತರ ಮಂಜೂರಾತಿ ಪಡೆದುಕೊಂಡಿದೆ. ಸಂಘವು ಸಮುದಾಯ ಭವನಗಳು, ಖಾಸಗಿ ಶಾಲೆಗಳಿಗೆ ಅನುದಾನ ನೀಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಖಾಸಗಿ ಶಾಲೆಯ ಶಿಕ್ಷಕರಿಗೂ ತಲಾ ₹ 50 ಸಾವಿರ ನೀಡಿದೆ. ಇದರಲ್ಲಿ ಹಣ ದುರ್ಬಳಕೆಯಾದ ಸಾಧ್ಯತೆ ಇದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಯೋಜನೆ ಮತ್ತು ಸಾಂಖ್ಯಿಕ ಸಚಿವ ಮುನಿರತ್ನ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಈ ಕುರಿತು ಇಲಾಖೆ ಹೊರಡಿಸಿದ ಆದೇಶದ ಪ್ರತಿಯನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಅವರು, ‘ಕೆಕೆಆರ್‌ಡಿಬಿಗೆ ಬಂದ ಹಣದಲ್ಲೇ ಸಂಘಕ್ಕೆ ₹ 200 ಕೋಟಿ ಒದಗಿಸಲಾಗಿದೆ. ಅಧ್ಯಕ್ಷರು, ಕಾರ್ಯದರ್ಶಿ ತಮ್ಮ ವಿವೇಚಾನಾ ಕೋಟಾ ಮೀರಿ ಹೆಚ್ಚು ಹಣ ಬಳಸಿದ್ದಾರೆ. ಸಂಘ ರಚನೆಯ ಬಗ್ಗೆ ತಕರಾರು ಎತ್ತಿದ್ದಕ್ಕೆ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ತನಿಖೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈಗ ಮುನಿರತ್ನ ಅವರೂ ತನಿಖೆಗೆ ಆದೇಶಿಸಿದ್ದಾರೆ. ಆದರೆ ತನಿಖೆ ಏಕಾಏಕಿ ಸ್ಥಗಿತಗೊಂಡಿದೆ’ ಎಂದು ಆರೋಪಿಸಿದರು.

ಸಂಘದಲ್ಲಿ ನಡೆದ ಅವ್ಯವಹಾರದ ತನಿಖೆ ನಡೆಸುವುದಾಗಿ ಕಾನೂನು ಸಚಿವರು ಭರವಸೆ ನೀಡಿದ್ದಾರೆ. ಅವರ ಮೇಲೆ ನನಗೆ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ನಾವು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಿದ್ದೇವೆ ಎಂದರು.

***

ಅಪ್ಪನ ಕೆರೆ ಒತ್ತುವರಿ ಆಗಿಲ್ಲದಿದ್ದರೆ ಜಿಲ್ಲಾಧಿಕಾರಿ ಯಾಕೆ ಕಾಮಗಾರಿಯನ್ನು ತಡೆಹಿಡಿದಿದ್ದಾರೆ. ದತ್ತಾತ್ರೇಯ ಪಾಟೀಲ ರೇವೂರ ಅವರು ದಾಖಲೆಗಳನ್ನು ಜಿಲ್ಲಾಧಿಕಾರಿಗೆ ತೋರಿಸಲಿ

- ಪ್ರಿಯಾಂಕ್ ಖರ್ಗೆ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.