
ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ದೀಪಾ ಭಾಸ್ತಿ ‘ಮಹಾಯಾನ’ ಕಾದಂಬರಿ ಬಿಡುಗಡೆ ಮಾಡಿದರು.
ಕಲಬುರಗಿ: ‘ಯುವಜನರಿಗೆ ಬಹುಭಾಷೆಗಳ ಅರಿವು ಅಗತ್ಯ. ಅದರಿಂದ ವೈವಿಧ್ಯಮಯ ಜ್ಞಾನ, ವಿಭಿನ್ನ ಆಲೋಚನೆ, ಒಳಗಣ್ಣು, ಆಳವಾದ ದೃಷ್ಟಿಕೋನ ಹೊಂದಲು ಸಾಧ್ಯ’ ಎಂದು ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ದೀಪಾ ಭಾಸ್ತಿ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ಮಂಗಳವಾರ ಬೆಂಗಳೂರಿನ ಸಪ್ನ ಬುಕ್ ಹೌಸ್ ಹಾಗೂ ಕಲಬುರಗಿಯ ಕುಟುಂಬ ಪ್ರಕಾಶನ ಆಯೋಜಿಸಿದ್ದ ಪ್ರೊ.ಎಚ್.ಟಿ. ಪೋತೆ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಜೀವನ ಕಥನ ಕುರಿತ ‘ಮಹಾಯಾನ’ ಕಾದಂಬರಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಬರೀ ಕನ್ನಡ ಇಲ್ಲವೇ ಬರೀ ಇಂಗ್ಲಿಷ್ ಕಲಿತರೆ ಸಿಗುವ ಜ್ಞಾನಕ್ಕಿಂತಲೂ ಬಹುಭಾಷಾ ಕಲಿಕೆಯಿಂದ ಸಿಗುವ ಜ್ಞಾನ ಮಿಗಿಲು. ಆದರೆ, ನಾವೆಲ್ಲ ಇಂಗ್ಲಿಷ್ ಭಾಷೆಯ ಬೆನ್ನತ್ತಿ ಬಹುಭಾಷಾ ಸಂಸ್ಕೃತಿ ಕಳೆದುಕೊಳ್ಳುತ್ತಿದ್ದೇವೆ. ಬೆಂಗಳೂರಿನಲ್ಲಿ ಇಂಗ್ಲಿಷೇ ನಮ್ಮ ತಾಯ್ನುಡಿ ಎಂದು ಹೆಮ್ಮೆಯಿಂದ ಹೇಳುವ ಸ್ಥಿತಿಯಿದೆ. ಅದು ನಮ್ಮ ಬೇರುಗಳಿಂದ ನಾವೇ ಕಳಚಿಕೊಂಡಂತೆ. ಬೇರೇ ಇಲ್ಲದಿದ್ದರೆ ನಾವು ಸೃಷ್ಟಿಸುವ ಸಾಹಿತ್ಯ, ಕಲೆಯ ಮೌಲ್ಯ ಸಹಜವಾಗಿಯೇ ಕಡಿಮೆಯಾಗುತ್ತದೆ’ ಎಂದರು.
‘ಅನುವಾದ ವಿಶ್ವದ ಹಲವು ಭಾಷೆಗಳ ಲೇಖಕರ ಸಾಹಿತ್ಯ, ಜ್ಞಾನ ನಮಗೆ ತೆರೆದಿಡುತ್ತದೆ. ಡಾ.ಬಿ.ಆರ್.ಅಂಬೇಡ್ಕರ್ ವಿಚಾರಗಳು ಕೂಡ ಅನುವಾದ ಮೂಲಕವೇ ನಮಗೆ ದಕ್ಕಿವೆ’ ಎಂದರು.
‘ಅನುವಾದ ಸುಲಭವಲ್ಲ. ಸಾಹಿತ್ಯದಲ್ಲಿ ಯಾವುದೇ ಪದದ ಅರ್ಥವನ್ನೂ ಮೀರಿ, ಅದರ ಹಿಂದಿನ ಭಾವ, ಮೌನವನ್ನೂ ಅನುವಾದಿಸಬೇಕಾಗುತ್ತದೆ. ಭಾಷೆ ಎಂದರೆ ನಮ್ಮ ಸಂಸ್ಕೃತಿಯ ಜೊತೆಗೆ ನೆನಪುಗಳು, ಸಾಮಾಜಿಕ ಚೌಕಟ್ಟು, ರಾಜಕೀಯ ದೃಷ್ಟಿಕೋನ, ಆಹಾರ ಪದ್ಧತಿ, ಪೂರ್ವಜರ ನೆನಪುಗಳು, ಭೌಗೋಳಿಕ ಅಂಶಗಳೆಲ್ಲವನ್ನೂ ಅನುವಾದದಲ್ಲಿ ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಇಂಥ ಅನುವಾದ ಕೃತಕ ಬುದ್ಧಿ ಮಾಡಲು ಸದ್ಯಕ್ಕಂತೂ ಸಾಧ್ಯವಿಲ್ಲ’ ಎಂದರು.
ಕೃತಿ ಕುರಿತು ಮಾತನಾಡಿದ ವಿಮರ್ಶಕ ಎಸ್.ಆರ್.ವಿಜಯಶಂಕರ, ‘ಮಹಾಯಾನ ಕೃತಿಯು ಬಾಬಾಸಾಹೇಬರ ಹುಟ್ಟಿನಿಂದ ಅವರು ಬೌದ್ಧ ಧರ್ಮ ಸ್ವೀಕರಿಸುವ ತನಕದ ಪಯಣ ಒಳಗೊಂಡಿದೆ. ಇದರಲ್ಲಿ ಯಾವ ಪುಟ ಬಿಡಿಸಿದರೂ ಭಾರತದ ಸಾಮಾಜಿಕ ಚರಿತ್ರೆ, ದೇಶದ ಸ್ವಾತಂತ್ರ್ಯ ಹೋರಾಟದ ಚರಿತ್ರೆ ಜೊತೆಗೆ ಅಂಬೇಡ್ಕರ್ ಕಥನವನ್ನೂ ಅರಿಯಬಹುದು. ಇದು ಭಾರತೀಯ ನಿಮ್ನ ವರ್ಗಗಳ ಹೋರಾಟದ ಕಥನವೂ ಆಗಿದೆ’ ಎಂದರು.
ಕುಲಸಚಿವ ಪ್ರೊ.ರಮೇಶ ಲಂಡನಕರ್, ದಲಿತ ಮುಖಂಡ ಡಿ.ಜಿ.ಸಾಗರ, ಸಪ್ನ ಬುಕ್ ಹೌಸ್ ಕಲಬುರಗಿಯ ಮ್ಯಾನೇಜರ್ ಮಹಾಂತೇಶ ಮಠ ವೇದಿಕೆಯಲ್ಲಿದ್ದರು.
ಕೃತಿ ಪರಿಚಯ: ಮಹಾಯಾನ ಕಾದಂಬರಿಯನ್ನು ಬೆಂಗಳೂರಿನ ಸಪ್ನ ಬುಕ್ ಹೌಸ್ ಪ್ರಕಟಿಸಿದೆ. 683 ಪುಟಗಳನ್ನು ಹೊಂದಿರುವ ಕೃತಿ ಬೆಲೆ ₹750.
ಬರೀ ವ್ಯಕ್ತಿಯ ವಿವರ ಕೊಡದೇ ಆ ವ್ಯಕ್ತಿಯ ಆಳವಾದ ಚೈತನ್ಯ ನೈತಿಕ ಚಡಪಡಿಕೆ ತಲ್ಲಣಗಳ ಹಿಡಿದಿಡುವುದು ಒಳ್ಳೇ ಕಾದಂಬರಿಯ ಗುಣ. ಚರಿತ್ರೆಯ ಪ್ರತಿಧ್ವನಿಯುಳ್ಳ ಮಹಾಯಾನಕ್ಕೆ ಆ ಗುಣವಿದೆವಿಕ್ರಮ ವಿಸಾಜಿ ಕರ್ನಾಟಕ ಕೇಂದ್ರೀಯ ವಿವಿ ಪ್ರಾಧ್ಯಾಪಕ
ಬಾಹ್ಯಾಕಾಶದಲ್ಲಿ ಏನೆಲ್ಲ ಸಾಧಿಸಿದರೂ ದೇಶದಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ಸಮಾನತೆ ಗೌರವದ ಬದುಕು ಸಿಕ್ಕಾಗಲೇ ಭಾರತ ನೈಜ ಪ್ರಗತಿ ಕಾಣುತ್ತದೆಪ್ರೊ.ಶಶಿಕಾಂತ ಉಡಿಕೇರಿ ಗುಲಬರ್ಗಾ ವಿವಿ ಕುಲಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.