ಕಲಬುರಗಿಯ ಜಗತ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ಗಾಗಿ ನೆರೆದಿರುವ ಕೋಲಿ, ಕಬ್ಬಲಿಗ ಸಮಾಜದ ಜನರು...
ಕಲಬುರಗಿ: ಕೋಲಿ, ಕಬ್ಬಲಿಗ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ನಗರದಲ್ಲಿ ಸೋಮವಾರ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲಾಯಿತು.
ನಗರದ ಜಗತ್ ವೃತ್ತದಲ್ಲಿ ಜಮಾಯಿಸಿದ ಕೋಲಿ, ಕಬ್ಬಲಿಗ ಸಮಾಜದ ಸಾವಿರಾರು ಮಂದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಎರಡು ಗಂಟೆಗಳಿಂದ ಜಗತ್‌ವೃತ್ತದಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ.
ಪ್ರತಿಭಟನಾ ಜಾಥಾವು ಜಗತ್ ವೃತ್ತದಿಂದ ಅನ್ನಪೂರ್ಣ ಕ್ರಾಸ್, ಲಾಹೋಟಿ ಪೆಟ್ರೋಲ್ ಬಂಕ್ ಎದುರಿನಿಂದ ಜಿಲ್ಲಾಧಿಕಾರಿ ಕಚೇರಿ ತನಕ ನಡೆಯಲಿದ್ದು, ಗ್ರಾಮೀಣ ಭಾಗದಿಂದ ಬರುವ ಜನರಿಗಾಗಿ ಪ್ರತಿಭಟನೆ ನಿರತರು ಕಾಯುತ್ತಿದ್ದಾರೆ.
'ಜೈ ಕೋಲಿ, ಜೈ ಅಂಬಿಗ' ಎಂದು ಬರೆದ ಟೊಪ್ಪಿಗೆ ಧರಿಸಿದ್ದ ನೂರಾರು ಮಂದಿ, ನಿಜಶರಣ ಅಂಬಿಗರ ಚೌಡಯ್ಯರ ಬಾವುಟಗಳನ್ನು ಬೀಸುತ್ತ ಮೆರವಣಿಗೆಯಲ್ಲಿ ಸಾಗಿದರು.
'ಕೋಲಿ, ಕಬ್ಬಲಿಗ ಸಮಾಜ ವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ಒತ್ತಾಯಿಸಿ 1996ರಿಂದ ಹಲವು ಬಾರಿಗ ಗಂಗಾಮತ ಮತ್ತು ಅದರ ಉಪಜಾತಿಗಳ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದರೂ ಪದೇಪದೆ ಆ ಪ್ರಸ್ತಾವವನ್ನು ವಾಪಸ್ ಕಳುಹಿಸಲಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಅದರ ಬದಲು ಟೋಕರೆ ಕೋಲಿಯ ಪರ್ಯಾಯ ಪದಗಳಾದ ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ, ಬಾರಿಕ್ ಗಳನ್ನು ಅಧ್ಯಯನ ಮಾಡಿ ಸೂಕ್ತ ದಾಖಲೆಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ಕೂಡಲೇ ಪ್ರಸ್ತಾವ ಕಳುಹಿಸಬೇಕು' ಎಂದು ಮುಖಂಡರು ಆಗ್ರಹಿಸಿದರು.
'ಇದು ಯಾರ ವಿರುದ್ಧದ ಹೋರಾಟವಲ್ಲ. ನಾವು ಯಾರ ಅಪ್ಪನ ಆಸ್ತಿಯನ್ನೂ ಕೇಳುತ್ತಿಲ್ಲ. ನಾವು ಬರೀ ನಮ್ಮ ಹಕ್ಕು ಕೇಳುತ್ತಿದ್ದೇವೆ' ಎಂದು ಯುವಜನರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಅಂಗವಾಗಿ ನಗರದ ಹಲವು ರಸ್ತೆಗಳಲ್ಲಿ ಪೊಲೀಸ್ ಇಲಾಖೆಯು ವಾಹನಗಳ ಸಂಚಾರದ ಮಾರ್ಗ ಬದಲಾವಣೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.