ADVERTISEMENT

3ರಂದು ಕೋಲಿ ವಿರಾಟ ಸಮಾವೇಶ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2024, 6:12 IST
Last Updated 30 ಏಪ್ರಿಲ್ 2024, 6:12 IST
ಅವ್ವಣ್ಣ ಮ್ಯಾಕೇರಿ
ಅವ್ವಣ್ಣ ಮ್ಯಾಕೇರಿ   

ಕಲಬುರಗಿ: ‘ಕೋಲಿ, ಕಬ್ಬಲಿಗ ಇತರೆ ಪರ್ಯಾಯ ಪದಗಳ ಪರಿಶಿಷ್ಟ ಪಂಗಡ (ಎಸ್‌ಟಿ) ಸೇರ್ಪಡೆ ಸಂಬಂಧ ಮೇ 3ರಂದು ಚಿತ್ತಾಪುರದಲ್ಲಿ ವಿಭಾಗ ಮಟ್ಟದ ಕೋಲಿ ವಿರಾಟ ಸಮಾವೇಶ ಆಯೋಜಿಸಲಾಗುವುದು’ ಎಂದು ಬಿಜೆಪಿ ಒಬಿಸಿ ರಾಜ್ಯ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿರಾಟ ಸಮಾವೇಶದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ನಾಯಕರು ಪಾಲ್ಗೊಳ್ಳುವರು. ಸಮುದಾಯದ ಸುಮಾರು 50 ಸಾವಿರ ಜನರು ಬರುವರು. ಕಾಂಗ್ರೆಸ್ಸಿಗರು ನಮ್ಮ ಸಮಾಜದ ಕೆಲವು ಮುಖಂಡರನ್ನು ಮುಂದಿಟ್ಟುಕೊಂಡು ಮೀಸಲಾತಿಯ ಸಾಮಾಜಿಕ ನ್ಯಾಯ ಕೊಡದೆ, ಚುನಾವಣೆ ವೇಳೆ ಹುಸಿ ಭರವಸೆ ಕೊಟ್ಟು ದಾರಿ ತಪ್ಪಿಸುತ್ತಿದ್ದಾರೆ’ ಎಂದರು.

‘ಕಳೆದ ಚುನಾವಣೆಯಲ್ಲಿ ಬಿಜೆಪಿಯು ಎಸ್‌ಟಿ ಭರವಸೆ ಕೊಟ್ಟಿದ್ದು ನಿಜ. ಆದರೆ, ಮೀಸಲಾತಿ ಜಾರಿಗೆ ಕೆಲವು ತಾಂತ್ರಿಕ ದೋಷಗಳು ಕಂಡುಬಂದಿದ್ದವು. 1931ರ ಜಾತಿಗಣತಿ ವರದಿಯಲ್ಲಿ ಇಲ್ಲದ ಕೋಲಿ, ಕಬ್ಬಲಿಗ ಪರ್ಯಾಯ ಪದವಾದ ಗಂಗಾಮತ ಪದ ಸೇರ್ಪಡೆಯಾಗಿತ್ತು. ಇದ್ಯಾವುದನ್ನು ಪರಿಶೀಲಿಸದೆ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾಗೆ (ಆರ್‌ಜಿಐ) ಕಳುಹಿಸಿದ್ದರಿಂದ ಎಸ್‌ಟಿ ಸೇರ್ಪಡೆಗೆ ಅಡ್ಡಿಯಾಗಿತ್ತು. ಹೀಗಾಗಿ, ಬೆಂಗಳೂರಿನಲ್ಲಿ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಈ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲಾಗಿದೆ’ ಎಂದು ಹೇಳಿದರು.

ADVERTISEMENT

‘ಗಂಗಾಮತ ಪದವನ್ನು ಬಿಟ್ಟು ಕೋಲಿ, ಕಬ್ಬಲಿಗ, ಬೆಸ್ತ, ಮೊಗವೀರದಂತಹ 5–6 ಪರ್ಯಾಯ ಪದಗಳನ್ನು ಆರ್‌ಜಿಐ ಕಳುಹಿಸಲಾಗುವುದು. ಎಸ್‌ಟಿ ಸೇರ್ಪಡೆಯ ಶೇ 95ರಷ್ಟು ಕಾರ್ಯಗಳು ಪೂರ್ಣಗೊಂಡಿವೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದಶಕಗಳ ಬೇಡಿಕೆಗೆ ಸ್ಪಂದನೆ ಸಿಗಲಿದೆ. ತಳವಾರ ಸಮುದಾಯವನ್ನು ಎಸ್‌ಟಿಗೆ ಸೇರಿಸಿದ್ದು ಬಿಪಿಪಿಯೇ ಹೊರತು ಕಾಂಗ್ರೆಸ್ ಅಲ್ಲ’ ಎಂದರು.

ಮುಖಂಡ ಶರಣಪ್ಪ ತಳವಾರ ಮಾತನಾಡಿ, ‘ಮಲ್ಲಿಕಾರ್ಜುನ ಖರ್ಗೆ ಅವರು ದಶಕಗಳ ಕಾಲ ಶಾಸಕ, ಎರಡು ಬಾರಿ ಸಂಸದ ಹಾಗೂ ರಾಜ್ಯಸಭಾ ಸದಸ್ಯರಾಗಿದ್ದರೂ ಒಂದು ಬಾರಿಯೂ ನಮ್ಮ ಸಮುದಾಯದ ಎಸ್‌ಟಿ ಬಗ್ಗೆ ಮಾತನಾಡಲಿಲ್ಲ. ಸಮಾಜಕ್ಕೆ ವಂಚನೆ ಮಾಡಿಕೊಂಡು ರಾಷ್ಟ್ರಮಟ್ಟದ ನಾಯಕರಾಗಿ ಬೆಳೆದರೂ ಸಾಮಾಜಿಕ ನ್ಯಾಯ ಕೊಡಿಸಲಿಲ್ಲ’ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಶೋಭಾ ಬಾಣಿ, ಲಲಿತಾ ಅನಪುರ, ಬಸವರಾಜ ಸಪ್ಪನಗೊಳ, ಶಿವುಕಮಾರ ನಾಟೀಕಾರ, ಸಿದ್ದು ಬಾನರ, ಶಾಂತಪ್ಪ, ಶಂಕರ ಮ್ಯಾಕೇರಿ, ಮಲ್ಲಿಕಾರ್ಜುನ ಎಮ್ಮನೂರ, ಸೂರ್ಯಕಾಂತ ಔರಾದ್, ಶರಣು ಜಮಾದಾರ, ತಮ್ಮಣ್ಣ ಡಿಗ್ಗಿ ಉಪಸ್ಥಿತರಿದ್ದರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.