
ಕಾಳಗಿ: ಶಿವರಾತ್ರಿ ವೇಳೆ ರಾತ್ರಿಯಲ್ಲೇ ಜರುಗುವ ಐತಿಹಾಸಿಕ ದೇವಾಲಯ ಕೋರವಾರ ಹೊರವಲಯದ ಅಣಿವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ತಡರಾತ್ರಿ ದೇವಸ್ಥಾನದ ಮೈದಾನದಲ್ಲಿ ರಥೋತ್ಸವ ಅದ್ಧೂರಿಯಾಗಿ ನೆರವೇರಿತು.
ಹಲಗೆ, ಡೊಳ್ಳು, ಬಾಜಾ–ಭಜಂತ್ರಿ, ವಾದ್ಯಮೇಳಗಳ ಝೇಂಕಾರ, ಪುರವಂತರ ಕುಣಿತ, ಮದ್ದು ಸುಡುವ ಆಕರ್ಷಕ ನೋಟದ ಸದ್ದಿನ ನಡುವೆ ಭಕ್ತರು ತೇರು ಎಳೆದು ಸಂಭ್ರಮಿಸಿದರು.
ನೆರೆದಿದ್ದ ರಾಜ್ಯ-ಹೊರ ರಾಜ್ಯಗಳ ಅಸಂಖ್ಯಾತ ಭಕ್ತರು ಫಲಪುಷ್ಪ, ನಾಣ್ಯ ತೇರಿನ ಮೇಲೆ ತೂರಿ ಜೈಕಾರ ಹಾಕಿ ಕೈಮುಗಿದು ನಮಿಸಿದರು.
ಇದಕ್ಕೂ ಮುಂಚೆ 3 ಕಿ.ಮೀ ದೂರದ ಕೋರವಾರ ಗ್ರಾಮದ ಬಸಲಿಂಗ ಮನೆತನದ ಕಳಸ, ತಳವಾರ ಮನೆಯ ಕುಂಭ ಮತ್ತು ನಂದಿಕೋಲಿನ ಭವ್ಯ ಮೆರವಣಿಗೆಯು ದೇವಸ್ಥಾನಕ್ಕೆ ಬಂದು ತಲುಪಿತು.
ಗರ್ಭ ಗುಡಿಯೊಳಗಿನ ಅಣಿವೀರಭದ್ರೇಶ್ವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಬೆಳ್ಳಿ ಪಲ್ಲಕ್ಕಿ, ಮಿಣಿ, ಪುರವಂತರೊಂದಿಗೆ ಮೆರವಣಿಗೆಯು ದೇಗುಲಕ್ಕೆ ಐದು ಸುತ್ತು ಪ್ರದಕ್ಷಿಣೆ ಹಾಕಿತು.
ಬಳಿಕ ಮೈದಾನದಲ್ಲಿ ರಥಕ್ಕೆ ಪ್ರದಕ್ಷಿಣೆ ಹಾಕಿ ಕಳಸಾರೋಹಣ ಮಾಡಿ ತಹಶೀಲ್ದಾರ್ ಪೃಥ್ವಿರಾಜ ಪಾಟೀಲ ನೇತೃತ್ವದಲ್ಲಿ ಮಹಾಮಂಗಳಾರತಿ ಗೈದು ಪುರವಂತರ ಸೇವೆ ಮುಗಿಯುತ್ತಿದ್ದಂತೆ ಭಕ್ತರ ಜೈಘೋಷ ಮುಗಿಲುಮುಟ್ಟಿ ತೇರು ಎಳೆಯಲಾಯಿತು.
ಕಲಬುರಗಿ, ಕಾಳಗಿ, ಸೇಡಂ, ಶಹಾಬಾದ್, ಚಿತ್ತಾಪುರ, ಬೀದರ್, ವಿಜಯಪುರ, ಬಾಗಲಕೋಟೆ, ಸೋಲಾಪುರ ಸೇರಿದಂತೆ ವಿವಿಧೆಡೆಯ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಭಕ್ತರು ಸಾಗರೋಪಾದಿಯಲ್ಲಿ ಬಂದು ಕಾಯಿ–ಕರ್ಪೂರ ಸಲ್ಲಿಸಿ ದರ್ಶನ ಮಾಡಿದರು.
ಎಲ್ಲೆಡೆ ವಿದ್ಯುತ್ ದೀಪಗಳು ಝಗಮಗಿಸಿದವು. ಈ ಮುಂಚೆ ಬೆಳಗಿನ ಜಾವ ಐದಾರು ತಾಸು ಅಪಾರ ಭಕ್ತರು ಹಸಿ ಮೈಯಿಂದ ಅಗ್ಗಿ ತುಳಿದು ಹರಕೆ ಸಲ್ಲಿಸಿದರು.
ಶಹಾಬಾದ್ ಡಿವೈಎಸ್‌ಪಿ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಪಿಎಸ್ಐ ತಿಮ್ಮಯ್ಯ ಬಿ.ಕೆ., ಮಾಡಬೂಳ ಪಿಎಸ್ಐ ಗೌತಮ ಗುತ್ತೇದಾರ ಒಳಗೊಂಡ ಪೊಲೀಸ್ ತಂಡ ಬಿಗಿ ಬಂದೋಬಸ್ತ್ ಕಲ್ಪಿಸಿತ್ತು. ಸುತ್ತಲಿನ ಭಕ್ತರು ಕಾಲ್ನಡಿಗೆಯಿಂದ ಬರುತ್ತಿದ್ದದ್ದು ಮತ್ತು ಹರಕೆಯ ಭಕ್ತರು ಎಲ್ಲೆಂದರಲ್ಲಿ ಅನ್ನದಾಸೋಹ ಸೇವೆಯಲ್ಲಿ ತೊಡಗಿದ್ದು ಕಂಡುಬಂತು.
ಕುಸ್ತಿ ಇಂದು: ಜಾತ್ರೆಯ ಕೊನೆಯ ದಿನ ಗುರುವಾರ ಬೆಳಿಗ್ಗೆ 8ಗಂಟೆ ಮತ್ತು ಸಂಜೆ 4ಗಂಟೆಗೆ ಪ್ರಸಿದ್ಧ ಜಂಗಿ ಪೈಲ್ವಾನರಿಂದ ಕುಸ್ತಿ ಪಂದ್ಯಗಳು ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.