ಕಲಬುರ್ಗಿ: ‘ದೇಶದಲ್ಲಿ ನೂರಾರು ವೈದ್ಯರು ಕೋವಿಡ್ ಸಂಬಂಧಿ ರೋಗಗಳಿಂದಾಗಿ ಸಾವಿಗೀಡಾಗಿದ್ದರೂ ಅವರನ್ನು ಕೋವಿಡ್ ಸೋಂಕಿನ ಸಾವು ಎಂದು ಪರಿಗಣಿಸಿಲ್ಲ. ಆದ್ದರಿಂದ ಎಲ್ಲರ ಸಾವುಗಳ ಆಡಿಟ್ ಮಾಡಿಸಿ, ಸರ್ಕಾರಿ, ಖಾಸಗಿ ಎನ್ನದೇ ಎಲ್ಲ ವೈದ್ಯರಿಗೂ ಕೇಂದ್ರ ಸರ್ಕಾರ ₹ 50 ಲಕ್ಷ ಪರಿಹಾರ ನೀಡಬೇಕು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವೈದ್ಯಕೀಯ ಘಟಕದ ರಾಜ್ಯ ಉಪಾಧ್ಯಕ್ಷ ಡಾ. ಕಿರಣ ದೇಶಮುಖ ಒತ್ತಾಯಿಸಿದರು.
ಪಕ್ಷದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಲ್ಲಿ ದೇಶದಾದ್ಯಂತ 1500 ವೈದ್ಯರು ಸಾವಿಗೀಡಾಗಿದ್ದಾರೆ. ಭಾರತೀಯ ವೈದ್ಯಕೀಯ ಸಂಘ (ಐಎಂಎ)ವು ಇತ್ತೀಚೆಗೆ ನೀಡಿದ ಹೇಳಿಕೆಯಂತೆ ಎರಡನೇ ಅಲೆಯಲ್ಲಿ 798 ವೈದ್ಯರು ಮೃತಪಟ್ಟಿದ್ದಾರೆ. ಆದರೆ, ಕೇಂದ್ರ ಸರ್ಕಾರ ಕೇವಲ 168 ವೈದ್ಯರ ಕುಟುಂಬದವರಿಗೆ ₹ 50 ಲಕ್ಷ ಪರಿಹಾರ ನೀಡಿದೆ. ಕರ್ನಾಟಕದಲ್ಲಿ 19 ಜನ ಮೃತಪಟ್ಟಿದ್ದಾರೆ. ಅವರಿಗೆ ರಾಜ್ಯ ಸರ್ಕಾರ ₹ 30 ಲಕ್ಷ ನೀಡಿದೆ. ತಮ್ಮ ಪ್ರಾಣತ್ಯಾಗ ಮಾಡಿದ ಎಲ್ಲ ವೈದ್ಯರಿಗೂ ಕೋವಿಡ್, ಕೋವಿಡೇತರ ಪ್ರಕರಣ ಎಂದು ಪರಿಗಣಿಸದೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ವೈದ್ಯರ ದಿನಾಚರಣೆ ಹಾಗೂ ಪತ್ರಿಕಾ ದಿನಾಚರಣೆ ಅಂಗವಾಗಿ ಕಾಂಗ್ರೆಸ್ ವತಿಯಿಂದ, ಕೋವಿಡ್ ಸಂದರ್ಭದಲ್ಲಿ ಕೆಲಸ ಮಾಡಿದ ವೈದ್ಯರು, ನರ್ಸಿಂಗ್ ಸಿಬ್ಬಂದಿ, ಗ್ರೂಪ್ ಡಿ ನೌಕರರು ಹಾಗೂ ಪತ್ರಕರ್ತರಿಗೆ ಅಭಿನಂದನಾ ಪತ್ರವನ್ನು ನೀಡಲು ಉದ್ದೇಶಿಸಲಾಗಿದೆ. ಕಲಬುರ್ಗಿ ಜಿಲ್ಲೆಯಲ್ಲಿ 500 ವೈದ್ಯರು, 700 ನರ್ಸಿಂಗ್ ಸಿಬ್ಬಂದಿ, 700 ಗ್ರೂಪ್ ಡಿ ನೌಕರರು ಸೇರಿದಂತೆ ವೈದ್ಯಕೀಯ ಹಾಗೂ ಪತ್ರಿಕಾ ವಲಯದ 4 ಸಾವಿರ ಜನರಿಗೆ ಅಭಿನಂದನಾ ಪತ್ರವನ್ನು ನೀಡಲಾಗುತ್ತಿದೆ. ಅವರಿದ್ದಲ್ಲಿಗೇ ತೆರಳಿ ಪತ್ರವನ್ನು ನೀಡಲಿದ್ದೇವೆ ಎಂದು ವಿವರಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ವಿಧಾನಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ ಹಾಗೂ ಪಕ್ಷದ ಜಿಲ್ಲಾ ಮುಖಂಡರು ಪತ್ರಿಕಾಗೋಷ್ಠಿಯಲ್ಲಿದ್ದರು.
‘ಬಾಬಾ ರಾಮದೇವ್ ಪಕ್ಕದಲ್ಲಿದ್ದವರು ಯಾರು?’
ವಿಶ್ವ ಆರೋಗ್ಯ ಸಂಸ್ಥೆಯು ಪತಂಜಲಿ ಸಂಸ್ಥೆಯ ಕೊರೊನಿಲ್ ಔಷಧಿಗೆ ಅನುಮೋದನೆ ನೀಡಿದ ಎಂದು ಬಾಬಾ ರಾಮದೇವ್ ಹೇಳಿದ್ದರು. ಅಲೋಪತಿ ವೈದ್ಯ ಪದ್ಧತಿಯನ್ನು ಅವಹೇಳನ ಮಾಡಿದ ಬಾಬಾ ಅವರ ಪಕ್ಕದಲ್ಲೇ ನಿಂತು ಕೊರೊನಿಲ್ ಬಿಡುಗಡೆ ಮಾಡಿದವರು ಯಾರು ಗೊತ್ತಿದೆಯೇ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಸ್ವತಃ ಕೇಂದ್ರ ಆರೋಗ್ಯ ಸಚಿವರೇ ಕೊರೊನಿಲ್ ಔಷಧಿಯು ಕೋವಿಡ್‌ಗೆ ರಾಮಬಾಣ ಎಂದು ಬಿಂಬಿಸಲು ಹೊರಟಿದ್ದರು. ಕೋವಿಡ್ ನಿವಾರಣೆಗೆ ಅಗತ್ಯವಾದ ಔಷಧಿ, ಉಪಚಾರ ಬೇಕಿದೆ. ಅನಗತ್ಯವಾಗಿ ವೈದ್ಯರನ್ನು ಹೀಗಳೆಯುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಭಾರತೀಯ ವೈದ್ಯಕೀಯ ಸಂಘ ಪ್ರಧಾನಮಂತ್ರಿ ಅವರಿಗೆ ಪತ್ರ ಬರೆದಿದೆ.
ಪಾಪಡ್ ತಿಂದರೆ, ಗೋಮೂತ್ರ ಕುಡಿದರೆ, ತಟ್ಟೆ ಬಾರಿಸಿದರೆ ಕೊರೊನಾ ಹೋಗುತ್ತದೆ ಎಂದು ಹೇಳಿ ಹಾದಿ ತಪ್ಪಿಸಿದ್ದು ಯಾರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೋವಿಡ್ ಸಾಂಕ್ರಾಮಿಕವನ್ನು ಸಮರ್ಥವಾಗಿ ಎದುರಿಸುವಲ್ಲಿ ಬಿಜೆಪಿ ಸರ್ಕಾರ ಸೋತು ಹೋಗಿದೆ ಎಂದರು.
‘ಸರ್ಕಾರದ ಕಿವಿ ಹಿಂಡಿದ ಸುಪ್ರೀಂಕೋರ್ಟ್’
‘ಕೋವಿಡ್ ಸಾಂಕ್ರಾಮಿಕವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಕೋವಿಡ್‌ನಿಂದ ಸಾವಿಗೀಡಾದ ವ್ಯಕ್ತಿಗಳಿಗೆ ಪರಿಹಾರ ನೀಡುವ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನಿಸಿತ್ತು. ಈ ಬಗೆಗಿನ ನಿಯಮಗಳನ್ನೇ ತಪ್ಪಾಗಿ ಅರ್ಥೈಸಿಕೊಳ್ಳಲು ಮುಂದಾಗಿತ್ತು. ಆಗ ಮಧ್ಯಪ್ರವೇಶಿಸಿದ ಸುಪ್ರೀಂ ಕೋರ್ಟ್ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಮೃತಪಟ್ಟವರಿಗೆ ಪರಿಹಾರ ನೀಡಬೇಕು ಎಂದು ಕಿವಿ ಹಿಂಡಿದೆ. ಸುಪ್ರೀಂಕೋರ್ಟ್‌ನ ಈ ಆದೇಶ ಸ್ವಾಗತಾರ್ಹವಾಗಿದೆ’ ಎಂದು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.
ಉಚಿತವಾಗಿ ಲಸಿಕೆ ನೀಡಲು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಹಿಂದೇಟು ಹಾಕಿದಾಗಲೂ ಮಧ್ಯಪ್ರವೇಶಿಸಿದ ನ್ಯಾಯಾಲಯ, ಇದಕ್ಕಾಗಿ ಬಜೆಟ್‌ನಲ್ಲಿ ತೆಗೆದಿರಿಸಿದ್ದ ₹ 35 ಸಾವಿರ ಕೋಟಿಯ ಲೆಕ್ಕ ಕೇಳಲು ಶುರು ಮಾಡಿದಾಗ ರಾಗ ಬದಲಿಸಿದ ಮೋದಿ ಅವರು ಎಲ್ಲರಿಗೂ ಉಚಿತ ಲಸಿಕೆ ನೀಡಲಾಗುವುದು ಎಂದು ಘೋಷಿಸಬೇಕಾಯಿತು. ನ್ಯಾಯಾಲಯ ಇರದಿದ್ದರೆ ಬಿಜೆಪಿ ಸರ್ಕಾರದ ಜನವಿರೋಧಿ ಧೋರಣೆ ಹಾಗೆಯೇ ಇರುತ್ತಿತ್ತು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.