ADVERTISEMENT

ಜನರ ಸಂಕಟಗಳಿಗೆ ಮಿಡಿಯುವ ಆಸೆ: ಶಿವಪ್ರಿಯಾ ಕಡೇಚೂರ ಮನದಾಳದ ಮಾತು

ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿಯಾಗಿ ಆಯ್ಕೆಯಾದ ಶಿವಪ್ರಿಯಾ ಕಡೇಚೂರ ಮನದಾಳದ ಮಾತು

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 10:37 IST
Last Updated 26 ಡಿಸೆಂಬರ್ 2019, 10:37 IST
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗಿರುವ ಖುಷಿಯಲ್ಲಿ ಶಿವಪ್ರಿಯಾ ಕಡೇಚೂರ. ತಂದೆ ಬಸವರಾಜ, ತಾಯಿ ಸಿದ್ದಮ್ಮ, ಅಣ್ಣ ಗೌರಿಶಂಕರ್‌ ಇದ್ದರು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗಿರುವ ಖುಷಿಯಲ್ಲಿ ಶಿವಪ್ರಿಯಾ ಕಡೇಚೂರ. ತಂದೆ ಬಸವರಾಜ, ತಾಯಿ ಸಿದ್ದಮ್ಮ, ಅಣ್ಣ ಗೌರಿಶಂಕರ್‌ ಇದ್ದರು   

ಕಲಬುರ್ಗಿ: ‘ಬೆಂಗಳೂರಿನ ಪ್ರತಿಷ್ಠಿತ ದಯಾನಂದ ಸಾಗರ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಓದಿದ ನನಗೆ ಉತ್ತಮ ಸಂಬಳದ ಉದ್ಯೋಗ ಸಿಗುವುದು ಕಷ್ಟವೇನೂ ಇರಲಿಲ್ಲ. ಆದರೂ, ಜನರ ಸಂಕಟಗಳಿಗೆ ಮಿಡಿಯಬೇಕು. ಅವರ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ಕೆಪಿಎಸ್ಸಿ ಪರೀಕ್ಷೆ ಬರೆದೆ. ನನ್ನ ಅದೃಷ್ಟಕ್ಕೆ ಮೊದಲ ಪ್ರಯತ್ನದಲ್ಲೇ ಪಾಸಾದೆ...’

ಇವು, ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ಪಾಸಾಗಿ ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ಹುದ್ದೆಗೆ ಆಯ್ಕೆಯಾಗಿರುವ ನಗರದ ಬ್ರಹ್ಮಪುರದ ಸಂಗಮೇಶ್ವರ ಕಾಲೊನಿ ನಿವಾಸಿ ಶಿವಪ್ರಿಯಾ ಬಸವರಾಜ ಕಡೇಚೂರ ಅವರ ಮನದಾಳದ ಮಾತುಗಳಿವು.

ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ರಾಜ್ಯದ ಮಹತ್ವದ ಹುದ್ದೆಯನ್ನು ನಿಭಾಯಿಸುವ ಖುಷಿ ಮತ್ತು ಹೊಣೆಗಾರಿಕೆ ಎರಡೂ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.

ADVERTISEMENT

ತಂದೆ ಬಸವರಾಜ, ತಾಯಿ ಸಿದ್ದಮ್ಮ ಗುಡೇದ ಹಾಗೂ ಸಹೋದರ ಗೌರಿಶಂಕರ್‌ ಅವರೊಂದಿಗೆ ‘ಪ್ರಜಾವಾಣಿ’ ಕಚೇರಿಗೆ ಭೇಟಿ ನೀಡಿದ್ದ ಶಿವಪ್ರಿಯಾ ಅವರು ಪರೀಕ್ಷೆಗಾಗಿ ನಡೆಸಿದ್ದ ಸಿದ್ಧತೆಗಳನ್ನು ವಿವರಿಸಿದರು.

‘ನಗರದ ಶರಣಬಸವೇಶ್ವರ ರೆಸಿಡೆನ್ಶಿಯಲ್‌ ಶಾಲೆಯಲ್ಲಿ ಎಲ್‌ಕೆಜಿಯಿಂದ ಪಿಯುಸಿವರೆಗೆ ಓದಿದೆ. ನಂತರ ಎಂಜಿನಿಯರಿಂಗ್‌ ಪದವಿ ಓದಲು ಬೆಂಗಳೂರಿಗೆ 2013ರಲ್ಲಿ ತೆರಳಿದೆ. ಎಂಜಿನಿಯರಿಂಗ್‌ ಅಂತಿಮ ಸೆಮಿಸ್ಟರ್‌ನಲ್ಲಿರುವಾಗಲೇ ಅಣ್ಣನ ಸಲಹೆಯಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದೆ. 2017ರ ಆಗಸ್ಟ್‌ನಲ್ಲಿ ಕೆಎಎಸ್‌ ಪ್ರಿಲಿಮ್ಸ್‌ ಪರೀಕ್ಷೆ ಬರೆದ ಬಳಿಕ ಡಿಸೆಂಬರ್‌ನಲ್ಲಿ ಮೇನ್ಸ್‌ ಪರೀಕ್ಷೆ ಬರೆದೆ. ಪಾಸಾಗುವೆ ಎಂಬ ನಂಬಿಕೆ ಇತ್ತು. ನನ್ನ ತಂದೆ–ತಾಯಿ, ಅಣ್ಣನ ಹಾರೈಕೆಯಿಂದ ನನ್ನ ಕನಸು ಈಡೇರಿದೆ’ ಎಂದರು.

‘ಶಾಲಾ ಹಂತದಲ್ಲಿಯೇ ನಾನು 800 ವಿದ್ಯಾರ್ಥಿಗಳಿಗೆ ಕ್ಯಾಪ್ಟನ್‌ ಆಗಿದ್ದೆ. ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆಯಲ್ಲಿಯೂ ಭಾಗವಹಿಸಿ ಪ್ರಶಸ್ತಿ ಪಡೆದಿದ್ದೆ. ಶಿಕ್ಷಕರು ಆಗಿನಿಂದಲೇ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು’ ಎಂದು ಶಿವಪ್ರಿಯಾ ನೆನಪಿಸಿಕೊಂಡರು.

ತಾಯಿ ಸಿದ್ದಮ್ಮ ಅವರು ಗೋದುತಾಯಿ ಮಹಿಳಾ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆಯಾಗಿದ್ದಾರೆ. ಎಂಜಿನಿಯರ್‌ ಆಗಿದ್ದ ತಂದೆ ಬಸವರಾಜ ಅವರು ಸ್ವಯಂ ನಿವೃತ್ತಿ ಪಡೆದು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಸಹೋದರ ಗೌರಿಶಂಕರ್‌ ನವದೆಹಲಿಯ ಕರ್ನಾಟಕ ಭವನದಲ್ಲಿ ಲೆಕ್ಕಪತ್ರ ಶಾಖೆಯಲ್ಲಿದ್ದಾರೆ. ಅವರೂ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗಿ ಆ ಹುದ್ದೆಗೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.