ADVERTISEMENT

ಕಾಳಗಿ: ಕಾಳಗಿ ನಿಲ್ದಾಣಕ್ಕೆ ಬಾರದ ಬಸ್‌ಗಳು

ಚಿಂಚೋಳಿ-ಕಾಳಗಿ-ಕಲಬುರಗಿ ತಡೆರಹಿತ ಬಸ್ಸಿನ ಕತೆ ವ್ಯಥೆ

ಗುಂಡಪ್ಪ ಕರೆಮನೋರ
Published 24 ಜುಲೈ 2025, 5:18 IST
Last Updated 24 ಜುಲೈ 2025, 5:18 IST
ಚಿಂಚೋಳಿ-ಕಾಳಗಿ-ಕಲಬುರಗಿ ಮಾರ್ಗದ ತಡೆರಹಿತ ಸರ್ಕಾರಿ ಬಸ್ಸು ಕಾಳಗಿ ಬಸ್ ನಿಲ್ದಾಣಕ್ಕೆ ಬರದೆ ಹೊರಗಿನಿಂದಲೇ ಸಂಚರಿಸುತ್ತಿರುವುದು
ಚಿಂಚೋಳಿ-ಕಾಳಗಿ-ಕಲಬುರಗಿ ಮಾರ್ಗದ ತಡೆರಹಿತ ಸರ್ಕಾರಿ ಬಸ್ಸು ಕಾಳಗಿ ಬಸ್ ನಿಲ್ದಾಣಕ್ಕೆ ಬರದೆ ಹೊರಗಿನಿಂದಲೇ ಸಂಚರಿಸುತ್ತಿರುವುದು   

ಕಾಳಗಿ: ಕಾಳಗಿ ಅಧಿಕೃತ ತಾಲ್ಲೂಕು ಆಗಿ ಏಳು ವರ್ಷ ಕಳೆದಿದೆ. ಅದಕ್ಕೂ ಮೊದಲೇ 2010ರಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ನಿಗಮದ ಬಸ್‌ ಘಟಕ ಬಾಗಿಲು ತೆರೆದಿದೆ. 2023ರಲ್ಲಿ ಹೊಸ ಬಸ್ ನಿಲ್ದಾಣ ಸಹ ಕಾರ್ಯರೂಪಕ್ಕೆ ಬಂದಿದೆ. ಅದಲ್ಲದೆ ಈಚೆಗೆ ಹೊಸ ಬಸ್ ನಿಲ್ದಾಣ ಸಂಪರ್ಕಿಸುವ ಕಲಬುರಗಿ-ಚಿಂಚೋಳಿ ರಾಜ್ಯಹೆದ್ದಾರಿ ಮಧ್ಯೆ ಅಗಲವಾದ ಸಿಸಿ ರಸ್ತೆ ನಿರ್ಮಾಣ ಕೂಡ ಮಾಡಲಾಗಿದೆ.

ಆದರೆ ಚಿಂಚೋಳಿ-ಕಲಬುರಗಿ ನಡುವೆ ಸಂಚರಿಸುವ ಈ ಮಾರ್ಗದ ಕೆಲ ತಡೆರಹಿತ (ಕನಿಷ್ಠ 8 ಸುತ್ತುವಳಿ) ಬಸ್ಸುಗಳು ಇಲ್ಲಿನ ಬಸ್ ನಿಲ್ದಾಣಕ್ಕೆ ಬಾರದೇ ಹೊರಗಿನಿಂದಲೇ ಹೋಗುತ್ತಿರುವುದು ಸ್ಥಳೀಯರಿಗೆ ಅಚ್ಚರಿ ತಂದಿದೆ. ಕೇವಲ ಡ್ರೈವರ್ ಕಂ ಕಂಡಕ್ಟರ್ (ಒಬ್ಬ ಮಾತ್ರ) ಹೊಂದಿರುವ ಆ ಬಸ್ಸುಗಳು ಕಲಬುರಗಿಯಿಂದ ನೇರವಾಗಿ ಕಾಳಗಿಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ಚಿಂಚೋಳಿಗೆ ಮತ್ತು ಚಿಂಚೋಳಿಯಿಂದ ಕಲಬುರಗಿಗೆ ಸಂಚರಿಸುತ್ತಿವೆ.

ತಡೆರಹಿತ ಮತ್ತು ವೇಗಧೂತ ಬಸ್ಸು ಎಂಬ ಕಾರಣಕ್ಕೆ ಟಿಕೆಟ್ ದರ ಹೆಚ್ಚು ಪಡೆಯಲಾಗುತ್ತಿದೆ. ಆದರೂ ಈ ಬಸ್ಸುಗಳು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲೇ ನಿಲ್ಲತೊಡಗಿವೆ. ಊರೊಳಗಿನ ಪ್ರಯಾಣಿಕರಿಗೆ 1 ಕಿ.ಮೀ ನಡೆದುಕೊಂಡು ಹೋಗುವಂತೆ ಮಾಡಿ ಹೈರಾಣಕ್ಕೆ ತಳ್ಳಿವೆ. ಕಳೆದ ವರ್ಷದಿಂದ ಚಲಿಸುತ್ತಿರುವ ಈ ಬಸ್ಸುಗಳು ಮೊದಲು ಬಸ್ ನಿಲ್ದಾಣಕ್ಕೆ ಬಂದು ಹೋಗಲು ಖಾಸಗಿ ವಾಹನಗಳ ಟ್ರಾಫಿಕ್ ಸಮಸ್ಯೆ ಆಗ್ತಿದೆ ಎಂಬ ನೆಪ ತೇಲಿ ಬಿಡುತ್ತಿದ್ದವು. ಆದರೆ ಈಗ ಪ್ರತ್ಯೇಕ ರಸ್ತೆಯೇ ಆಗಿದ್ದರೂ ಈ ಬಸ್ಸುಗಳು ಮಾತ್ರ ಊರೊಳಗಿನ ಬಸ್ ನಿಲ್ದಾಣಕ್ಕೆ ಬಂದು ಹೋಗದೆ ಪ್ರಯಾಣಿಕರಿಗೆ ಕಾಟಾಚಾರದ ಸೇವೆ ನೀಡುತ್ತಿವೆ ಎನ್ನುತ್ತಾರೆ ಸಾರ್ವಜನಿಕರು.

ADVERTISEMENT

ಕಲಬುರಗಿ-ಚಿಂಚೋಳಿ ಶಾಲಾ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ನೌಕರರು, ಜನಸಾಮಾನ್ಯರು ಬಸ್ಸಿಗೆ ಕಾಯುತ್ತ ಬಸ್ ನಿಲ್ದಾಣದಲ್ಲಿ ಕುಳಿತರೆ ಈ ಬಸ್ಸುಗಳು ಅಲ್ಲಿಗೆ ಬಾರದೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ಹೊರಟು ಹೋಗುತ್ತಿವೆ. ವಯಸ್ಸಾದ ವೃದ್ಧರು, ಮಹಿಳೆಯರು, ಅಂಗವಿಕಲರು ಬಸ್‌ಗಳಿಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ‌ ಜನಪ್ರತಿನಿಧಿಗಳು, ಅಧಿಕಾರಿಗಳು ಅಗತ್ಯಕ್ರಮ ಕೈಗೊಂಡು ಎಲ್ಲಾ ಬಸ್‌ಗಳು ನಿಲ್ದಾಣಕ್ಕೆ ಬಂದು ಹೋಗುವಂತೆ ಮಾಡಬೇಕು. ಇಲ್ಲವಾದರೆ ಪ್ರತಿಭಟನೆ ಅನಿವಾರ್ಯ ಎಂದು ಇಲ್ಲಿನ ನಿಂಗಪ್ಪ ನಾಮದಾರ, ಚಂದ್ರಶೇಖರ ಕಲ್ಲಾ, ವೀರಣ್ಣ ಸಗರ ಎಚ್ಚರಿಸಿದ್ದಾರೆ. 

ಅಂಬೇಡ್ಕರ್ ವೃತ್ತದಲ್ಲೇ ನಿಲ್ಲುವ ಬಸ್‌ಗಳು | ಅಧಿಕಾರಿಗಳು ಅಗತ್ಯಕ್ರಮ ಕೈಗೊಳ್ಳಲು ಆಗ್ರಹ 
ಕಾಳಗಿ ಮತ್ತು ಸುತ್ತಲಿನ ಜನರು ಕಲಬುರಗಿ ಚಿಂಚೋಳಿ ಕಡೆಗೆ ಸಂಚರಿಸುವುದು ಸಹಜ. ಆದರೆ ಕೆಲ ತಡೆರಹಿತ ಬಸ್ಸುಗಳು ಅಂಬೇಡ್ಕರ್ ವೃತ್ತದಿಂದಲೇ ಹೊರ ಹೋಗುತ್ತಿದ್ದು ಪ್ರಯಾಣಿಕರಿಗೆ ಬಸ್ಸಿನ ಬಗ್ಗೆ ತಿಳಿಯದಾಗಿದೆ
ಮಹ್ಮದ್‌ ಗುಡುಸಾಬ ಕಮಲಾಪುರ ನಿವೃತ್ತ ಶಿಕ್ಷಕ
ಕಾಳಗಿ ತಾಲ್ಲೂಕಾಗಿದ್ದರಿಂದ ಸುತ್ತಲಿನ ಹಳ್ಳಿಗಳ ಜನರು ಕೆಲಸಕ್ಕಾಗಿ ನಿತ್ಯ ಇಲ್ಲಿಗೆ ಬರುತ್ತಾರೆ. ಕೆಲ ತಡೆರಹಿತ ಬಸ್‌ಗಳು ಬಸ್ ನಿಲ್ದಾಣಕ್ಕೆ ಬರದೆ ಇರುವುದರಿಂದ ಪ್ರಯಾಣಕ್ಕೆ ತೊಂದರೆಯಾಗುತ್ತಿದೆ
ಮಲ್ಲಪ್ಪ ಚಿಂತಕುಂಟಾ ಗ್ರಾ.ಪಂ ಸದಸ್ಯ ಕೋಡ್ಲಿ
ಸೀಟುಗಳ ಸಾಮರ್ಥ್ಯ ಮೀರಿ ಪ್ರಯಾಣಿಕರು ಬಸ್ಸಿನಲ್ಲಿದ್ದರೆ ಆ ವೇಳೆ ಕಾಳಗಿ ಬಸ್ ನಿಲ್ದಾಣಕ್ಕೆ ಹೋಗದಿರುವುದು ನಡೆಯುತ್ತದೆ. ಒಂದು ವೇಳೆ ಅಷ್ಟೊಂದು ಪ್ರಯಾಣಿಕರು ಬಸ್ಸಿನಲ್ಲಿ ಇಲ್ಲದೇ ಇರುವಾಗ ಆ ಬಸ್ಸು ನಿಲ್ದಾಣಕ್ಕೆ ಹೋಗಿ ಬರಲೇಬೇಕು. ಈ ಕುರಿತು ಸಿಬ್ಬಂದಿಗೆ ಮನವರಿಕೆ ಮಾಡಿದ್ದೇನೆ
ಸುರೇಶ ತೇಗಲತಿಪ್ಪಿ ಡಿಪೋ ಮ್ಯಾನೇಜರ್ ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.