ADVERTISEMENT

‘ನಾಲ್ಕೂ ನಿಗಮಗಳನ್ನು ಒಂದುಗೂಡಿಸಿ; ದಬ್ಬಾಳಿಕೆ ನಿಲ್ಲಿಸಿ’

ಕೆಎಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್‌ ಸಮ್ಮೇಳನದಲ್ಲಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 13:20 IST
Last Updated 18 ಡಿಸೆಂಬರ್ 2018, 13:20 IST
ಹಿರಿಯ ಕಾರ್ಮಿಕ ಹೋರಾಟಗಾರರಾದ ಅಡವೆಪ್ಪ, ಎಸ್.ಕೆ.ಕಾಂತಾ, ಎ.ಬಿ.ದಿಂಡೂರ ಅವರನ್ನು ಸನ್ಮಾನಿಸಲಾಯಿತು
ಹಿರಿಯ ಕಾರ್ಮಿಕ ಹೋರಾಟಗಾರರಾದ ಅಡವೆಪ್ಪ, ಎಸ್.ಕೆ.ಕಾಂತಾ, ಎ.ಬಿ.ದಿಂಡೂರ ಅವರನ್ನು ಸನ್ಮಾನಿಸಲಾಯಿತು   

ಕಲಬುರ್ಗಿ: ‘ಕೆಎಸ್‌ಆರ್‌ಟಿಸಿಯ ನಾಲ್ಕೂ ನಿಗಮಗಳನ್ನು ಒಂದುಗೂಡಿಸಬೇಕು ಮತ್ತು ಕಾರ್ಮಿಕರ ಮೇಲಿನ ಕಿರುಕುಳ, ದಬ್ಬಾಳಿಕೆಯನ್ನು ನಿಲ್ಲಿಸಬೇಕು’ ಎಂದು ಅಧಿವೇಶನದಲ್ಲಿ ಭಾಗವಹಿಸಿದ್ದ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದರು.

ನಗರದ ಸಾರ್ವಜನಿಕ ಉದ್ಯಾನದಲ್ಲಿ ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ಫೆಡರೇಷನ್‌ನ (ಎಐಟಿಯುಸಿ) ವತಿಯಿಂದ 6ನೇ ರಾಜ್ಯ ಸಮ್ಮೇಳನ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ‘ಬಹಿರಂಗ ಅಧಿವೇಶನ’ದಲ್ಲಿ ವೇದಿಕೆ ಮೇಲೆ ಆಸೀನರಾಗಿದ್ದ ಎಲ್ಲಾ ಗಣ್ಯರೂ ನಿಗಮಗಳನ್ನು ಒಂದುಗೂಡಿಸುವಂತೆ ಒತ್ತಾಯಿಸಿದರು.

ಅಧಿವೇಶನ ಉದ್ಘಾಟಿಸಿ ಮಾತನಾಡಿದ ಫೆಡರೇಷನ್‌ನ ಗೌರವ ಅಧ್ಯಕ್ಷ ಡಾ. ಸಿದ್ದನಗೌಡ ಪಾಟೀಲ, ‘20 ವರ್ಷಗಳಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ಕಾರ್ಮಿಕರ ಮೇಲೆ ದಬ್ಬಾಳಿಕೆ ಮಾಡುತ್ತಲೇ ಬಂದಿವೆ. ಖಾಸಗೀಕರಣಗೊಳಿಸುವ ಹುನ್ನಾರದಿಂದಲೇ ನಾಲ್ಕು ನಿಗಮಗಳನ್ನಾಗಿ ವಿಂಗಡಿಸಲಾಗಿದೆ. ಇದರಿಂದ ಆಡಳಿತಾತ್ಮಕ ಖರ್ಚು ಹೆಚ್ಚಾಗಿದ್ದು, ನಿಗಮಗಳು ನಷ್ಟ ಅನುಭವಿಸುತ್ತಿವೆ. ಆದ್ದರಿಂದ ಎಲ್ಲಾ ನಿಗಮಗಳನ್ನು ಒಂದುಗೂಡಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಸಾರಿಗೆ, ವಿದ್ಯುತ್, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸಿದರೆ ಬಡವರ ಬದುಕು ಬೀದಿಗೆ ಬರುತ್ತದೆ. 2019ಕ್ಕೆ ಮೋದಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಕಾರ್ಪೋರೇಟ್ ಕೃಷಿಯನ್ನು ಜಾರಿಗೆ ತರುವ ಸಂಚು ರೂಪಿಸಿದ್ದಾರೆ. ಆಗ ದೇಶದ ರೈತರು ಹೊಲದಿಂದ ಬೀದಿಗೆ ಬರಬೇಕಾಗುತ್ತದೆ. ಫಸಲ್ ಬಿಮಾ ಯೋಜನೆ ಹೆಸರಿನಲ್ಲಿ ದರೋಡೆಕೋರ ಕಂಪನಿಗಳು ₹24 ಸಾವಿರ ಕೋಟಿ ಲೂಟಿ ಮಾಡಿವೆ. ಆದ್ದರಿಂದ ದೇಶದ ಜನರು ಎಚ್ಚರಿಕೆಯಿಂದ ಇರಬೇಕು’ ಎಂದು ಹೇಳಿದರು.

‘ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಕ್ಕೆ ಚುನಾವಣೆ ನಡೆಸುವಂತೆ ಅನೇಕ ಬಾರಿ ಹೋರಾಟ ಮಾಡಲಾಗಿದೆ. ನ್ಯಾಯಾಲಯದ ಮೊರೆ ಹೋಗಲಾಗಿದೆ. ಆದರೆ ಇದುವರೆಗೂ ಚುನಾವಣೆ ನಡೆಸಿಲ್ಲ. ಇಷ್ಟೇ ಅಲ್ಲ, ಸಾರಿಗೆ ಸಚಿವರು ಮಾತುಕತೆಗೆ ಕೂಡ ಆಹ್ವಾನಿಸುತ್ತಿಲ್ಲ. ಅಧಿಕಾರಿಗಳ ಕಿರುಕುಳದಿಂದ ನಿಗಮದ ನೌಕರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ವಿರೋಧ ಪಕ್ಷದಲ್ಲಿದ್ದಾಗ ಮಾನವೀಯತೆ ತೋರಿಸುವ ಜನಪ್ರತಿನಿಧಿಗಳು, ರಾಜಕಾರಣಿಗಳು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಅಮಾನವೀಯತೆಯಿಂದ ವರ್ತಿಸುತ್ತಾರೆ’ ಎಂದು ಆರೋಪಿಸಿದರು.

ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಎಚ್.ವಿ.ಅನಂತ ಸುಬ್ಬರಾವ್ ಮಾತನಾಡಿ, ‘ನಾಲ್ಕು ನಿಗಮಗಳನ್ನು ಮಾಡಿದ್ದರಿಂದ ನಾಲ್ಕು ಜನ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡಬೇಕಾಗಿದೆ. ಇದರಿಂದ ಆರ್ಥಿಕ ಹೊರೆ ಹೆಚ್ಚುತ್ತಿದೆ. ಆದ್ದರಿಂದ ನಾಲ್ಕೂ ನಿಗಮಗಳನ್ನು ಒಂದುಗೂಡಿಸಬೇಕು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಒತ್ತಾಯಿಸಿದರು.

ಎನ್‌ಎಫ್‌ಐಆರ್‌ಟಿಡಬ್ಲ್ಯು ಹಿರಿಯ ಉಪಾಧ್ಯಕ್ಷ ಎಂ.ಎಲ್.ಯಾದವ, ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಸಮಿತಿ ಅಧ್ಯಕ್ಷೆ ಎ.ಜ್ಯೋತಿ, ಹಿರಿಯ ವಕೀಲ ಪಿ.ವಿಲಾಸಕುಮಾರ್, ಕೇಂದ್ರೀಯ ಹೋಮಿಯೋಪಥಿಕ್ ಮಂಡಳಿ ಮಾಜಿ ಸದಸ್ಯ ಡಾ. ಪಿ.ಸಂಪತ್‌ರಾವ್ ಮಾತನಾಡಿದರು.

ಹಿರಿಯ ಕಾರ್ಮಿಕ ಹೋರಾಟಗಾರ ಎಸ್.ಕೆ.ಕಾಂತಾ, ಹಿರಿಯ ಕಮ್ಯುನಿಸ್ಟ್ ಮುಖಂಡ ಅಡವೆಪ್ಪ, ಕೊಪ್ಪಳದ ಎ.ಬಿ.ದಿಂಡೂರ ಅವರನ್ನು ಸನ್ಮಾನಿಸಲಾಯಿತು.

ಮೇಯರ್ ಮಲ್ಲಮ್ಮ ಸಿ.ವಳಕೇರಿ, ಫೆಡರೇಷನ್‌ನ ಉಪಾಧ್ಯಕ್ಷ ಸಿದ್ಧಪ್ಪ ಪಾಲ್ಕಿ, ಎಐಟಿಯುಸಿ ರಾಜ್ಯ ಸಮಿತಿ ಸಹ ಕಾರ್ಯದರ್ಶಿ ಡಾ. ಕೆ.ಎಸ್.ಜನಾರ್ದನ, ವಕೀಲ ಬಿ.ಆರ್.ಪಾಟೀಲ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ, ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುದೇವ ಯಳಸಂಗಿ, ಫೆಡರೇಷನ್‌ನ ಕಲಬುರ್ಗಿ ವಿಭಾಗ–1ರ ಅಧ್ಯಕ್ಷ ಸಿದ್ದಣ್ಣ ಕಣ್ಣೂರ, ಪ್ರಧಾನ ಕಾರ್ಯದರ್ಶಿ ರಾಮು ಗುತ್ತೇದಾರ, ವಿಭಾಗ–2ರ ಅಧ್ಯಕ್ಷ ನಂದಪ್ಪ ಜಮಾದಾರ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಕಲೀಂ, ಮುಖಂಡರಾದ ಸಿ.ಕೆ.ವಿಜಯೇಂದ್ರ, ಉಮೇಶ್, ಸಂಘಟನಾ ಕಾರ್ಯದರ್ಶಿ ರತ್ನಪ್ಪ ಜೈನ್ ಇದ್ದರು.

ಸ್ವಾಗತ ಸಮಿತಿ ಗೌರವ ಅಧ್ಯಕ್ಷ ಅಲ್ಲಮಪ್ರಭು ಪಾಟೀಲ ಸ್ವಾಗತಿಸಿದರು. ಟಿ.ಎಲ್.ರಾಜಗೋಪಾಲ ನಿರೂಪಿಸಿ, ರಾಮು ಗುತ್ತೇದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.