ADVERTISEMENT

ಶಾಸಕರ ಕುಟುಂಬಕ್ಕೆ ಕಡಿಮೆ ಬೆಲೆಗೆ ನಿವೇಶನ; ಎಸ್‌.ಕೆ. ಕಾಂತಾ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2022, 16:26 IST
Last Updated 11 ಸೆಪ್ಟೆಂಬರ್ 2022, 16:26 IST
ಎಸ್‌.ಕೆ. ಕಾಂತಾ
ಎಸ್‌.ಕೆ. ಕಾಂತಾ   

ಕಲಬುರಗಿ: ‘ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರವು (ಕುಡಾ) ಸ್ಥಳೀಯ ಶಾಸಕರ ಕುಟುಂಬ ಸದಸ್ಯರಿಗೆ ಎಂಎಸ್‌ಕೆ ಮಿಲ್‌ನ ವಾಣಿಜ್ಯ ಬಡಾವಣೆಯಲ್ಲಿ ಅತಿ ಕಡಿಮೆ ಬೆಲೆಗೆ ಹರಾಜಿನಲ್ಲಿ ನಿವೇಶನ ನೀಡಿದೆ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮಾಜಿ ಸಚಿವ ಎಸ್.ಕೆ.ಕಾಂತಾ ಒತ್ತಾಯಿಸಿದರು.

‘2020ರ ನವೆಂಬರ್‌ 24ರಂದು ಜಿಡಿಎ ಎಂಎಸ್‌ಕೆ ಮಿಲ್ ವಾಣಿಜ್ಯ ಬಡಾವಣೆಯ ನಿವೇಶನ 88 ಮತ್ತು 88/1 ಹರಾಜು ಪ್ರಕ್ರಿಯೆಯಲ್ಲಿ ಶಾಸಕರೂ, ಕೆಕೆಆರ್‌ಡಿಬಿ ಅಧ್ಯಕ್ಷರೂ ಆದ ದತ್ತಾತ್ರೇಯ ಪಾಟೀಲ ರೇವೂರ ಸಹೋದರ ಡಾ.ಅಲೋಕ್ ಪಾಟೀಲ, ಅಲೋಕ್ ಪತ್ನಿ ಶ್ವೇತಾ ಪಾಟೀಲ ಮತ್ತು ಆಪ್ತ ಶಾಂತಲಿಂಗ ಅಲಿಪುರ ಅವರು ಮಾತ್ರ ಭಾಗವಹಿಸುವಂತೆ ನೋಡಿಕೊಳ್ಳಲಾಗಿತ್ತು. ಹೀಗಾಗಿ, ಇದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿ ದೂರಿದರು.

‘ಅಲೋಕ್ ಅವರ ಪತ್ನಿ ಎಂಬುದನ್ನು ಮರೆಮಾಚಲು ಶ್ವೇತಾ ತಮ್ಮ ತಂದೆಯ ಹೆಸರು ಮತ್ತು ಮಹಾರಾಷ್ಟ್ರದ ವಿಳಾಸ ತೋರಿಸಿದ್ದಾರೆ. ನೋಂದಣಿಯಲ್ಲಿ ಅದೇ ಶಾಂತಲಿಂಗ ಸಾಕ್ಷಿಯಾಗಿ ಸಹಿ ಹಾಕಿದ್ದಾರೆ’ ಎಂದು ಆಪಾದಿಸಿದರು.

ADVERTISEMENT

‘ಪ್ರಾಧಿಕಾರವು ಪ್ರತಿ ನಿವೇಶನಕ್ಕೆ ₹ 8.49 ಕೋಟಿ ಮೌಲ್ಯ ನಿಗದಿಪಡಿಸಿತ್ತು. ಅದನ್ನು ಎರಡನೇ ಬಿಡ್ ಹೆಚ್ಚಳದಲ್ಲಿ ₹ 8.51 ಕೋಟಿಗೆ ಹಂಚಿಕೆ ಮಾಡಿದೆ. ಬೇರೆ ನಿವೇಶನಗಳು ನಿಗದಿತ ಮೊತ್ತಕ್ಕಿಂತಲೂ ದುಪ್ಪಟ್ಟು ಮೊತ್ತಕ್ಕೆ ಹರಾಜು ಆಗಿರುವಾಗ ಇವು ಮಾತ್ರ ಏಕೆ ಕಡಿಮೆ ಮೊತ್ತಕ್ಕೆ ಮಾರಾಟ ಆದವು’ ಎಂದು ಪ್ರಶ್ನಿಸಿದರು.

‘ಪ್ರಾಧಿಕಾರದ ಹಿಂದಿನ ಆಯುಕ್ತ ಎಂ. ರಾಚಪ್ಪ ಮತ್ತು ಶಾಖಾಧಿಕಾರಿ ಸುಬ್ಬರಾವ ಸುಬೇದಾರ, ಇತರ ಅಧಿಕಾರಿಗಳು ನಿವೇಶನ ಖರೀದಿಗೆಶಾಸಕರ ಸಹೋದರನಿಗೆ ಸಹಕರಿಸಿದ್ದಾರೆ. ನಿಗದಿತ ಸಮಯಕ್ಕೆ ಹಣ ಪಾವತಿಸದಿದ್ದರಿಂದ ನಿವೇಶನಗಳ ಹಂಚಿಕೆ ರದ್ದುಗೊಳಿಸಿ, ಮುಂಗಡ ಠೇವಣಿ ಮುಟ್ಟುಗೋಲು ಹಾಕಿಕೊಂಡಿದ್ದರೆ ಸರ್ಕಾರದ ಖಜಾನೆಗೆ ₹ 4.30 ಕೋಟಿ ಸೇರುತ್ತಿತ್ತು. ಹಣ ಪಾವತಿ ಕುರಿತು ಪ್ರಾಧಿಕಾರದ ಬಳಿ ಕ್ಯಾಷ್ ಬುಕ್ ಸಹ ಇಲ್ಲ’ ಎಂದು ಕಾಂತಾ ದೂರಿದರು.

‘ಬಡೇಪುರ ಹಂತ–1 ವೀರೇಂದ್ರ ಪಾಟೀಲ ನಗರ ವಸತಿ ಯೋಜನೆಯ ಮೂಲೆ ನಿವೇಶನ ಹರಾಜಿನಲ್ಲಿ ಎ.ಕೆ.ಪುರೋಹಿತ ಎಂಬುವರಿಗೆ ₹ 79 ಸಾವಿರಕ್ಕೆ ಹಂಚಿಕೆಯಾಗಿದ್ದ ನಿವೇಶನವನ್ನು ‘ಕುಡಾ’ದಲ್ಲಿ ಕೆಲಸ ಮಾಡುವ ಸುಬ್ಬರಾವ ಅವರು ತಮ್ಮ ಪತ್ನಿ ಎ.ಎಸ್. ಸುಬೇದಾರ ಹೆಸರಿಗೆ ಮಾಡಿಕೊಂಡಿದ್ದಾರೆ’ ಎಂದು ಆಪಾದಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಅಸ್ಲಂ ಕಲ್ಯಾಣಿ, ವಿಜಯಕುಮಾರ ಧೂಳೆ ಇದ್ದರು.

‘ಶಾಸಕರ ಹೆಸರಿಗೆ ಜಮೀನು ವರ್ಗಾವಣೆ’

‘ಭೂ ಕಂದಾಯ ನಿಯಮ ಉಲ್ಲಂಘಿಸಿ ಶಾಸಕ ದತ್ತಾತ್ರೇಯ ಪಾಟೀಲ ಅವರು ನೂರಾರು ಎಕರೆಯಷ್ಟು ಜಮೀನನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ’ ಎಂದು ಎಸ್‌.ಕೆ ಕಾಂತಾ ದೂರಿದರು.

ಆಗಿನ ಭೂ ಸುಧಾರಣೆ ಕಾಯ್ದೆಯಡಿ 54 ಎಕರೆ ಮಾತ್ರ ಜಮೀನು ಹೊಂದಲು ಅವಕಾಶವಿತ್ತು. ಅಜ್ಜಿ ಹೆಸರಲ್ಲಿದ್ದ 112 ಎಕರೆ, ಸಹೋದರ ಹೆಸರಲ್ಲಿದ್ದ 107 ಎಕರೆ ಜಮೀನು ವರ್ಗಾವಣೆ ಮಾಡಿಕೊಂಡ ಬಗ್ಗೆ ತನಿಖೆ ನಡೆಸಬೇಕು ಎಂದರು.
*ನಗರಾಭಿವೃದ್ಧಿ ಪ್ರಾಧಿಕಾರದ ಆಡಳಿತ ಮಂಡಳಿ ಅನುಮೋದನೆ ನೀಡಿದ ಬಳಿಕವೇ ಅತಿ ಹೆಚ್ಚು ಹರಾಜು ಕೂಗಿದವರಿಗೆ ವಾಣಿಜ್ಯ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಹೀಗಾಗಿ, ಅಕ್ರಮ ನಡೆಯುವ ಪ್ರಶ್ನೆಯೇ ಇಲ್ಲ
-ಎಂ. ರಾಚಪ್ಪ, ನಿಕಟಪೂರ್ವ ಆಯುಕ್ತ, ಕುಡಾ

*ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳಿಗೆ ಅಕ್ರಮಗಳ ಕುರಿತು ತನಿಖೆ ನಡೆಸಲು ಪತ್ರ ಬರೆದಿದ್ದೇನೆ. ಕೂಡಲೇ ನಿವೇಶನಗಳ ಹಂಚಿಕೆ ರದ್ದುಗೊಳಿಸಿ, ಅಕ್ರಮ ಎಸಗಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು
-ಎಸ್‌.ಕೆ. ಕಾಂತಾ, ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.