ADVERTISEMENT

ಕುರುಬ ಸಮಾಜಕ್ಕೆ ಟಿಕೆಟ್ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 16:04 IST
Last Updated 18 ಆಗಸ್ಟ್ 2022, 16:04 IST
ತಿಪ್ಪಣ್ಣ ಮೆಟಗಾರ
ತಿಪ್ಪಣ್ಣ ಮೆಟಗಾರ   

ಕಲಬುರಗಿ: ಕಲ್ಯಾಣ ಕರ್ನಾಟಕದ ಜಿಲ್ಲೆಗಳ 41 ವಿಧಾನಸಭಾ ಕ್ಷೇತ್ರಗಳಲ್ಲಿ ಜಿಲ್ಲೆಗೊಂದರಂತೆ ಕುರುಬ ಸಮುದಾಯದವರಿಗೆ ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್ ನೀಡಬೇಕು ಎಂದು ಕಲ್ಯಾಣ ಕರ್ನಾಟಕ ಕುರುಬರ ರಾಜಕೀಯ ಜಾಗೃತಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣಾ ಮೆಟಗಾರ ಒತ್ತಾಯಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಲ್ಯಾಣ ಕರ್ನಾಟಕ ಭಾಗದ ಪ್ರತಿ ಜಿಲ್ಲೆಯಲ್ಲಿ ಕುರುಬ ಸಮುದಾಯದ 2ರಿಂದ 3 ಲಕ್ಷ ಮತದಾರರಿದ್ದು, ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಮತ ಚಲಾಯಿಸುತ್ತಿದ್ದಾರೆ. ಆದರೂ, ಇಡೀ ಕಲ್ಯಾಣ ಕರ್ನಾಟಕಕ್ಕೆ ಒಂದು ಟಿಕೆಟ್ ಮಾತ್ರ ನೀಡಲಾಗುತ್ತಿದೆ’ ಎಂದರು.

‘ರಾಯಚೂರು, ಬಳ್ಳಾರಿ, ವಿಜಯನಗರ, ಯಾದಗಿರಿ, ಕೊಪ್ಪಳ, ಬೀದರ್ ಜಿಲ್ಲೆಗಳಲ್ಲಿ ಕುರುಬ ಸಮುದಾಯದ ಮತಗಳು ಕಾಂಗ್ರೆಸ್‌ಗೆ ನಿರ್ಣಾಯಕ ಮತಗಳಾಗಿದ್ದು, ಆದರೂ ನಮ್ಮನ್ನು ರಾಜಕೀಯವಾಗಿ ಕಡೆಗಣಿಸಲಾಗುತ್ತಿದೆ’ ಎಂದರು.

ADVERTISEMENT

‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತಿ ಜಿಲ್ಲೆಗೆ ಒಂದು ಟಿಕೆಟ್‌ ಕುರುಬ ಸಮುದಾಯದವರಿಗೆ ನೀಡಬೇಕು. ಇದರಿಂದ ಪಕ್ಷಕ್ಕೂ ಲಾಭವಾಗಲಿದೆ. ಪಕ್ಷದ ವರಿಷ್ಠರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಹಿಂದುಳಿದ ವರ್ಗಗಳ ಜಾತಿ ಗಣತಿ ಈಗಾಗಲೇ ರಚನೆಯಾಗಿದ್ದು, ಸಮಿತಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರೂ ಇನ್ನೂ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿಲ್ಲ. ಈ ಕಾರಣದಿಂದ ಹಿಂದುಳಿದ ವರ್ಗಗಳ ರಾಜಕೀಯ ಔನ್ನತ್ಯಕ್ಕೆ ಹಿನ್ನಡೆಯಾಗುತ್ತಿದ್ದು, ಕೂಡಲೇ ಸರ್ಕಾರ ಜಾತಿ ಗಣತಿ ವರದಿ ಬಿಡುಗಡೆ ಮಾಡಬೇಕು’ ಎಂದರು.

ಮುಖಂಡರಾದ ಬೀರಣ್ಣ ಪೂಜಾರಿ, ಭೀಮಾಶಂಕರ ಕೋಳಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.