ಅಫಜಲಪುರ: ವರ್ಷದಲ್ಲಿ ನೂರು ದಿನಗಳ ಕಾಲ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಾರ್ಮಿಕರಿಗೆ ಕೆಲಸ ನೀಡಬೇಕಾಗಿದ್ದು, ಕೆಲಸ ನೀಡುತ್ತಿಲ್ಲವೆಂದು ಆನೂರು ಗ್ರಾಮ ಪಂಚಾಯಿತಿಗೆ ಕಾರ್ಮಿಕರು ಗುರುವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ಶಂಕ್ರಯ್ಯ ಸ್ವಾಮಿ, ಚಿನ್ನಪ್ಪ ಉಮ್ಮನಗೋಳ, ಗುರುದೇವ ಗೌಂಡಿ ಮಾತನಾಡಿ, ’ಕಳೆದ ಎರಡು ಮೂರು ತಿಂಗಳಿಂದ ಮಳೆ ಇಲ್ಲದೆ ಕೃಷಿಯಲ್ಲಿ ಯಾವುದೇ ಕಾರ್ಯಗಳು ಇಲ್ಲದಿರುವುದರಿಂದ ನಮಗೆ ಜೀವನ ನಡೆಸುವುದು ಕಷ್ಟಕರವಾಗಿದೆ. ನಾವು ಗ್ರಾಮ ಪಂಚಾಯಿತಿಗೆ ನರೇಗಾದಲ್ಲಿ ಕೆಲಸ ನೀಡಿ ಎಂದು ಕೇಳಿಕೊಂಡರೂ ಕೆಲಸ ನೀಡುತ್ತಿಲ್ಲ. ಹೀಗಾಘಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಗಮನಹರಿಸಿ ಕೂಲಿಕಾರರಿಗೆ ಕೆಲಸ ನೀಡಬೇಕು ಎಂದರು.
ಪ್ರತಿ ಕುಟುಂಬಕ್ಕೆ ವರ್ಷದಲ್ಲಿ ನರೇಗಾ ಯೋಜನೆಯಲ್ಲಿ ನೂರು ದಿನ ಉದ್ಯೋಗ ನೀಡಲು ಅವಕಾಶವಿದೆ. ಆದರೆ ಗ್ರಾಮ ಪಂಚಾಯಿತಿಯವರು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ನಮಗೆ ಜೀವನ ನಡೆಸುವುದು ಕಷ್ಟಕರವಾಗಿದೆ. ಕೆಲವು ತಿಂಗಳ ಹಿಂದೆ ಕೂಡ ಪಂಚಾಯಿತಿಗೆ ಮುತ್ತಿಗೆ ಹಾಕುವ ತನಕ ಕೆಲಸ ನೀಡಿರಲಿಲ್ಲ. ಈಗಲೂ ಮುತ್ತಿಗೆ ಹಾಕಿದರೂ ಕೆಲಸ ನೀಡುತ್ತಿಲ್ಲ. ನಾವು ಯಾರಿಗೆ ಕೆಲಸ ಕೇಳಬೇಕು? ಸಂಬಂಧ ಪಟ್ಟವರು ಸರ್ಕಾರದ ನಿಯಮದ ಪ್ರಕಾರ ಉದ್ಯೋಗ ಖಾತ್ರಿ ಕೆಲಸ ನೀಡಬೇಕು. ಇಲ್ಲದಿದ್ದರೆ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ಕೂಲಿಕಾರರು ಹೇಳಿದರು.
ಜಗನ್ನಾಥ ಪಾಟೀಲ್, ಅಂಬಾರಾಯ ಹುಲಿ, ಪುತಳಾಬಾಯಿ ಪ್ಯಾಟಿ, ರಾಜು ಬಿದನೂರ, ನೀಲಮ್ಮ ಭಾಸಗಿ, ಮಾಲಾಶ್ರೀ ಮಾಂಗ, ರಾಚಮ್ಮ ಕಕ್ಕಳಮೇಲಿ, ಸಾಂಬಾಯಿ ಮಾಂಗ್, ಗೀತಾ ಭಾಸಗಿ, ಅನಸೂಬಾಯಿ ಮಂದೇವಾಲ ಮತ್ತಿತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.