ADVERTISEMENT

ಯಡ್ರಾಮಿ: ಇದ್ದೂ ಇಲ್ಲದಂತಾದ ಶೌಚಾಲಯ, ಸ್ವಚ್ಛತೆ ಕೊರತೆ

ಮಂಜುನಾಥ ದೊಡಮನಿ
Published 25 ಜನವರಿ 2022, 4:16 IST
Last Updated 25 ಜನವರಿ 2022, 4:16 IST
ಯಡ್ರಾಮಿ ತಾಲ್ಲೂಕಿನ ಇಜೇರಿ ಗ್ರಾಮದ ಪ್ರೌಢಶಾಲೆ ಶೌಚಾಲಯ ದುಸ್ಥಿತಿ
ಯಡ್ರಾಮಿ ತಾಲ್ಲೂಕಿನ ಇಜೇರಿ ಗ್ರಾಮದ ಪ್ರೌಢಶಾಲೆ ಶೌಚಾಲಯ ದುಸ್ಥಿತಿ   

ಯಡ್ರಾಮಿ: ಇಲ್ಲಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿವಿಧ ಯೋಜನೆಗಳ ಅನುದಾನದಲ್ಲಿ ಶಾಲೆಯಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ ಶೌಚಾಲಯಗಳಿಗೆ ಬಾಗಿಲು, ಕಿಟಕಿ, ನೀರಿನ ಸಂಪರ್ಕವೇ ಇಲ್ಲ!

ತಾಲ್ಲೂಕಿನ ಇಜೇರಿ ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ಕಂಡುಬರುವ ದೃಶ್ಯವಿದು. ಸೌಕರ್ಯಗಳ ಕೊರತೆ ಯಿಂದ ಇಲ್ಲಿರುವ ಶೌಚಾಲಯಗಳು ಇದ್ದೂ ಇಲ್ಲದಂತಾಗಿದ್ದು, ಶೌಚಕ್ಕಾಗಿ ಇಲ್ಲಿನ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಗ್ರಾಮದಲ್ಲಿ ಒಂದೇ ಪ್ರಾಂಗಣದಲ್ಲಿ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ಜತೆಯಲ್ಲಿ ವಸತಿ ನಿಯಲವೂ ಇದೆ. ಶಾಲೆಗಳಲ್ಲಿ ಕುಡಿವ ನೀರಿನ ಸಮಸ್ಯೆ, ಶಿಥಿಲ ಕಟ್ಟಡ, ಕಾಂಪೌಂಡ್, ಶಿಕ್ಷಕರ ಕೊರತೆಯಿಂದ ಶಿಕ್ಷಣಕ್ಕೆ ಹಿನ್ನೆಡೆ ಉಂಟಾಗಿದೆ.

ADVERTISEMENT

ಸರ್ಕಾರಿ ಪ್ರೌಢಶಾಲೆಯಲ್ಲಿ 135 ಬಾಲಕರು, 121 ಬಾಲಕಿಯರು ಸೇರಿದಂತೆ 256 ವಿದ್ಯಾರ್ಥಿಗಳು ಓದುತ್ತಿದ್ದು 7 ಕಾಯಂ ಶಿಕ್ಷಕರು, ಮುಖ್ಯಶಿಕ್ಷಕ, ಕ್ಲರ್ಕ್ ಸೇರಿ 10 ಸಿಬ್ಬಂದಿ ಇದ್ದಾರೆ. ಪ್ರಾಥಮಿಕ ಶಾಲೆಯಲ್ಲಿ 176 ಬಾಲಕರು ಹಾಗೂ 146 ಬಾಲಕಿಯರು ಸೇರಿ 322 ವಿದ್ಯಾರ್ಥಿಗಳು ಓದುತ್ತಿದ್ದು, 8 ಶಿಕ್ಷಕರಿದ್ದಾರೆ. ಶಾಲೆಯಲ್ಲಿ ಕನ್ನಡ, ದೈಹಿಕ ಶಿಕ್ಷಣ, ಸಾಮಾನ್ಯ ಉರ್ದು ವಿಷಯಗಳಿಗೆ ಕಾಯಂ ಶಿಕ್ಷಕರಿಲ್ಲ.

2018–19ರಲ್ಲಿ ಕೆಕೆಆರ್‌ಡಿಬಿ ಮೈಕ್ರೊ ಯೋಜನೆ ಅಡಿ ₹3.75 ಲಕ್ಷ ವೆಚ್ಚದಲ್ಲಿ ಪ್ರೌಢಶಾಲೆಯಲ್ಲಿ ಶೌಚಾಲಯ ನಿರ್ಮಿಸಲಾಗಿದ್ದು, ಅವುಗಳಿಗೆ ಕಿಟಕಿ, ಬಾಗಿಲು ಇಲ್ಲದ ಕಾರಣ ಇದ್ದೂ ಇಲ್ಲದಂತಾಗಿವೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಪ್ರಾಥಮಿಕ ಶಾಲೆಯ ಶೌಚಾಲಯ ಯೋಗ್ಯವಿಲ್ಲ ಎಂಬ ಕಾರಣಕ್ಕಾಗಿ ಮುಳ್ಳು ಕಂಟಿಗಳು ಹಚ್ಚಿ ಬಂದ್ ಮಾಡಿದ್ದು, ಈಗ ಶೌಚಾಲಯವಿಲ್ಲದೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬಯಲಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಲವು ಕಡೆ ಕಂಪೌಂಡ್ ಬಿದ್ದಿದ್ದರೆ, ಮತ್ತೊಂದು ಎತ್ತರ ಕಡಿಮೆಯಿದೆ. ಹೀಗಾಗಿ ರಾತ್ರಿ ವೇಳೆ ಕಿಡಿಗೇಡಿಗಳು ಶಾಲಾ ಆವರಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.ಸಮಪರ್ಕ ಕಂಪೌಂಡ್ ಇರದ ಕಾರಣ ಶಾಲೆ ಒಳಗೆ ಹಂದಿಗಳು ಓಡಾಡುತ್ತಿರುತ್ತವೆ ಎಂದು ದೂರುತ್ತಾರೆ ಸ್ಥಳೀಯರು.

ಪ್ರೌಢಶಾಲೆಯಲ್ಲಿ 11 ಕೊಠಡಿ ಗಳಿದ್ದು, ಇದರಲ್ಲಿ ಕೇವಲ 3 ಕೊಠಡಿ ಗಳಲ್ಲಿ ಮಾತ್ರ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಇವುಗಳಲ್ಲಿ ಮತ್ತೆ 2 ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು, ಜೀವ ಕೈಯಲ್ಲಿ ಹಿಡಿದುಕೊಂಡು ಪಾಠ ಕೇಳುವಂಥ ಪರಿಸ್ಥಿತಿ ಇದೆ.

ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯಿತಿಯವರು ಕುಡಿಯುವ ನೀರು ಪೂರೈಸುತ್ತಿದ್ದಾರೆ. ಅವರು ನೀರು ತರದಿದ್ದಾಗ ವಿದ್ಯಾರ್ಥಿಗಳು ಅಡುಗೆ ಕೋಣೆಯ ನೀರಿನ ನಲ್ಲಿಗೆ ಪೈಪ್ ಹಚ್ಚಿ ಹೊರ ತಂದು ನೀರು ಕುಡಿಯುತ್ತಾರೆ. ಅಡುಗೆ ಕೋಣೆ ಸುತ್ತಮುತ್ತ ಸ್ವಚ್ಛತೆ ಮರೀಚಿಕೆಯಾಗಿದೆ.

ವಿದ್ಯಾರ್ಥಿಗಳು ನೀರು ಕುಡಿದ ಬಳಿಕ ನೀರು ಒಂದಡೆ ನಿಂತು ಅಲ್ಲಿದ್ದ ಸ್ಥಳ ಕೆಸರಾಗಿ ಅಲ್ಲಿ ಹಂದಿಗಳು ಓಡಾಡಿ ದುರ್ನಾತ ಬರುತ್ತಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.

ಗೂಗಿಹಾಳ, ಜವಳಗಿ, ಯಾಳವಾರ ಗ್ರಾಮದಿಂದ ಈ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8.30ಕ್ಕೆ ಬಸ್ ವ್ಯವಸ್ಥೆ ಸಹ ಇಲ್ಲದ ಕಾರಣ ವಿದ್ಯಾರ್ಥಿಗಳು ಖಾಸಗಿ ವಾಹನಕ್ಕೆ ದುಬಾರಿ ಹಣ ನೀಡಿ ಶಾಲೆಗೆ ತಲುಪುದರಲ್ಲಿ ಶಿಕ್ಷಕರ ಪಾಠ ಆರಂಭವಾಗಿರುತ್ತದೆ. ಬಸ್ ಸೌಲಭ್ಯ ಒದಗಿಸಲು ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.