ವಾಡಿ: ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ಹದಗೆಟ್ಟ ರಸ್ತೆ ದುರಸ್ತಿ ಮಾಡದ ಕ್ರಮ ಖಂಡಿಸಿ ಗ್ರಾಮಸ್ಥರು ರಸ್ತೆ ಮಧ್ಯ ತಗ್ಗುಗಳಲ್ಲಿ ನಿಂತಿದ್ದ ಕೊಳಚೆ ನೀರಿನಲ್ಲಿ ಮಂಗಳವಾರ ಭತ್ತ ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಸಂಘಟನೆ ಎಐಡಿಎಸ್ಒ ಹಾಗೂ ರೈತ ಸಂಘಟನೆ ಎಐಕೆಕೆಎಂಎಸ್ ನೇತೃತ್ವದಲ್ಲಿ ಜರುಗಿದ ಪ್ರತಿಭಟನೆಯಲ್ಲಿ ಗ್ರಾಮದ ನೂರಾರು ಜನರು ಭಾಗವಹಿಸಿ ರಸ್ತೆಯ ಎಲ್ಲ ತಗ್ಗುಗಳಲ್ಲೂ ಭತ್ತದ ಸಸಿ ನೆಟ್ಟು ಆಕ್ರೋಶ ಹೊರಹಾಕಿದರು.
ಬಸ್ ನಿಲ್ದಾಣ ವೃತ್ತದಿಂದ ಗ್ರಾ.ಪಂ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
‘3 ವರ್ಷಗಳಿಂದ ರಸ್ತೆ ಹಾಳಾಗಿದ್ದು ಕೊಳಚೆ ನೀರಿನಲ್ಲೇ ಅಡ್ಡಾಡುತ್ತಿದ್ದೇವೆ. ಕೂಡಲೇ ದೊಡ್ಡ ಡಿವೈಡರ್, ಸಿಸಿ ರಸ್ತೆ ಹಾಗೂ ಎರಡು ಬದಿ ಚರಂಡಿ ನಿರ್ಮಿಸಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಐಕೆಕೆಎಂಎಸ್ ರೈತ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮಹೇಶ.ಎಸ್ ಬಿ, ‘ರಸ್ತೆ ಹಾಳಾದ ಪರಿಣಾಮ ಕಳೆದ 3 ವರ್ಷಗಳಿಂದ ಜನರು, ವಿದ್ಯಾರ್ಥಿಗಳು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಸುಮಾರು 1 ಕಿ.ಮೀ ರಸ್ತೆ ತುಂಬ ಗುಂಡಿಗಳೇ ತುಂಬಿಕೊಂಡಿವೆ. ನೀರು ನಿಲ್ಲುವುದರಿಂದ ರೋಗಗಳ ಭಯವೂ ಕಾಡುತ್ತಿದೆ. ಜನರು ಇಷ್ಟೆಲ್ಲ ತೊಂದರೆ ಅನುಭವಿಸುತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ’ ಎಂದರು.
ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ವಾಡಿ ಸಮಿತಿ ಅಧ್ಯಕ್ಷ ವೆಂಕಟೇಶ ದೇವದುರ್ಗ, ‘ಕೂಡಲೇ ರಸ್ತೆ ನಿರ್ಮಿಸಿ ಅಲ್ಲಿವರೆಗೂ ತಾತ್ಕಾಲಿಕ ದುರಸ್ತಿ. ರಸ್ತೆ ದುರಸ್ತಿ ಮಾಡಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ಪಿಡಬ್ಲೂಡಿ ಎಇಇ ಮಹ್ಮದ್ ಸಲೀಂ, ‘ತಕ್ಷಣ ರಸ್ತೆ ದುರಸ್ತಿ ನಡೆಸಲಾಗುವುದು ಹಾಗೂ ಹೊಸ ರಸ್ತೆ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು’ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು.
ಎಐಕೆಕೆಎಂಎಸ್ ರೈತ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಗುಂಡಣ್ಣ ಎಂ.ಕೆ, ತಾಲ್ಲೂಕು ಅಧ್ಯಕ್ಷ ಮಲ್ಲಣ್ಣ ದಂಡಬಾ, ಮುಖಂಡರಾದ ಶಾಂತಕುಮಾರ ಎಣ್ಣಿ, ಗ್ರಾ.ಪಂ ಮಾಜಿ ಅಧ್ಯಕ್ಷ ಸಾಬಣ್ಣ ಆನೇಮಿ, ಶರಣು ಹೆರೂರು ಗೌತಮ ಪರ್ತುರಕರ, ಚಿನ್ ಸಾಬಣ್ಣ ಮಾತನಾಡಿದರು.
ಗ್ರಾ.ಪಂ ಮಾಜಿ ಅಧ್ಯಕ್ಷ ಈರಣ್ಣ ಎಂ, ಸಾಬಣ್ಣ, ಗೌತಮ ಪರ್ತುರಕರ, ಶರಣಪ್ಪ ಗಂಜಿ, ಮೋನಪ್ಪ ಕಂಬಾರ, ಸಾಬಣ್ಣ ಕುಂಬಾರಹಳ್ಳಿ, ಶಿವು ಕುಂಬಾರ, ಬಸವರಾಜ ದಾಸರ, ವಿದ್ಯಾರ್ಥಿಗಳಾದ ಆಕಾಶ ಮುಸಲಾ, ಆನಂದ ಅನೇಮಿ, ಕಾರ್ತಿಕ್, ಬನದೇಶ ಎಣ್ಣಿ, ಸಾಬಣ್ಣ ಗಂಟೇಲಿ, ಅಂಬರೀಶ್ ಗೊಡಗ, ಆಕಾಶ್, ಅರುಣ, ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.