ADVERTISEMENT

ಯುವ ಸಾಹಿತಿ ಲಕ್ಕೂರು ಆನಂದ ಅನುಮಾನಾಸ್ಪದ ಸಾವು

​ಪ್ರಜಾವಾಣಿ ವಾರ್ತೆ
Published 21 ಮೇ 2024, 0:06 IST
Last Updated 21 ಮೇ 2024, 0:06 IST
ಲಕ್ಕೂರು ಆನಂದ
ಲಕ್ಕೂರು ಆನಂದ   

ಕಲಬುರಗಿ: ಆಳಂದ ತಾಲ್ಲೂಕಿನ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಸಂಶೋಧನಾ ವಿದ್ಯಾರ್ಥಿಯೂ ಆಗಿರುವ ಯುವ ಕವಿ, ಸಾಹಿತಿ ಲಕ್ಕೂರು ಆನಂದ (44) ಅವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. 

ಆನಂದ ಅವರು ಮೂಲತಃ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಲಕ್ಕೂರು ಗ್ರಾಮದವರು. ಸಿಯುಕೆ ಕನ್ನಡ ವಿಭಾಗದಲ್ಲಿ ಎರಡು ವರ್ಷಗಳಿಂದ ಪಿಎಚ್‌ಡಿ ಮಾಡುತ್ತಿದ್ದರು. ಕಡಗಂಚಿ ಗ್ರಾಮದ ಪೆಟ್ರೋಲ್ ಬಂಕ್‌ ಬಳಿ ಸೋಮವಾರ ಬೆಳಿಗ್ಗೆ ಆನಂದ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅವರ ಸ್ನೇಹಿತರು ಹೇಳಿದರು.

ಆನಂದ ಮೃತದೇಹವನ್ನು ಶವಾಗಾರದಲ್ಲಿ ಇರಿಸಲಾಗಿದೆ. ಪೋಷಕರು ಕೋಲಾರದಿಂದ ಬಂದ ಬಳಿಕ, ಅವರ ಹೇಳಿಕೆಯನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ನರೋಣ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಆನಂದ್ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ, ದೆಹಲಿಯ ದಲಿತ ಸಾಹಿತ್ಯ ಪರಿಷತ್ತು ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ವಿಮರ್ಶಕ, ಅನುವಾದಕರಾಗಿಯೂ ಗುರುತಿಸಿಕೊಂಡಿದ್ದರು. ಐದು ಕವನ ಸಂಕಲನ, ಐದು ಅನುವಾದಿತ ಕೃತಿಗಳು ಹಾಗೂ ಒಂದು ಸಂಶೋಧನಾ ಗ್ರಂಥ ಹೊರತಂದಿದ್ದರು‌.

ಅವರಿಗೆ ತಾಯಿ, ತಂಗಿ ಹಾಗೂ ತಮ್ಮ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.